ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ, ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಮಂಜು ಎಂಬ ಯುವಕ, ಮರದಿಂದ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಡಿಕೆ ಗೊನೆ ಕೊಯ್ಯುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಚಿಕ್ಕಮಗಳೂರು (ಡಿ.11): ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮರದಿಂದ ಆಯ ತಪ್ಪಿ ಕೆಳಗೆ ಬಿದ್ದ ಪರಿಣಾಮ 35 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಬೂದಿಗುಂಡಿ ಗ್ರಾಮದಲ್ಲಿ ನಡೆದಿದೆ. ಈ ದುರಂತದಿಂದ ಮೃತ ಯುವಕನ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.

ಮೃತರನ್ನು ಹಳುವಳ್ಳಿ ಗ್ರಾಮದ ನಿವಾಸಿ ಮಂಜು (35) ಎಂದು ಗುರುತಿಸಲಾಗಿದೆ.

ಗೊನೆ ಕೊಯ್ಯುವಾಗ ಆಯತಪ್ಪಿ ದುರಂತ: 

ಮಂಜು ಅವರು ಎಂದಿನಂತೆ ಕಳಸ ತಾಲ್ಲೂಕಿನ ಹಳುವಳ್ಳಿ ಗ್ರಾಮದ ಅಡಿಕೆ ತೋಟಕ್ಕೆ ಕೆಲಸಕ್ಕೆ ತೆರಳಿದ್ದರು. ಅಡಿಕೆ ಮರ ಏರಿ ಗೊನೆ ಕೊಯ್ಯುವ ಕೆಲಸದಲ್ಲಿ ನಿರತರಾಗಿದ್ದಾಗ, ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಸುಮಾರು 50 ರಿಂದ 60 ಅಡಿ ಎತ್ತರದ ಅಡಿಕೆ ಮರದಿಂದ ಬಿದ್ದ ರಭಸಕ್ಕೆ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಡಿಕೆ ಕೃಷಿ ಪ್ರಧಾನವಾದ ಮಲೆನಾಡು ಪ್ರದೇಶದಲ್ಲಿ, ಅಡಿಕೆ ಮರ ಏರಿ ಕೆಲಸ ಮಾಡುವುದು ಅಪಾಯಕಾರಿ ಕೆಲಸವಾಗಿದೆ. ಇಂತಹ ದುರಂತಗಳು ನಡೆಯುವುದು ಕೃಷಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮಂಜು ಅವರು ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದರು ಎನ್ನಲಾಗಿದ್ದು, ಅವರ ಅಗಲಿಕೆಯಿಂದ ಕುಟುಂಬ ತೀವ್ರ ಶೋಕಕ್ಕೀಡಾಗಿದೆ.

ಘಟನಾ ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಂಜು ಅವರ ಸಾವಿಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ.