ಚಿಕ್ಕಮಗಳೂರು(ಮೇ.18): ಲಾಕ್‌ಡೌನ್‌ ಸಡಿಲಿಕೆ ಹಾಗೂ ಜನರ ಓಡಾಟಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದರಿಂದ ಹಸಿರು ವಲಯದಲ್ಲಿರುವ ಕಾಫಿಯ ನಾಡಿನ ಜನರ ಹಾರ್ಟ್‌ ಬೀಟ್‌ ಜೋರಾಗಿದೆ. ಇಲ್ಲಿಗೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವವರು ಹಾಗೂ ಈ ಜಿಲ್ಲೆಯಿಂದ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ತೆರಳುವವರ ಸಂಖ್ಯೆ ದಿನೇ ದಿನೇ ಏರತೊಡಗಿದೆ.

ಬಂದವರಿಗೆ ಕ್ವಾರೆಂಟೈನ್‌ನಲ್ಲಿ ಇಡಲಾಗುತ್ತಿದ್ದು, ಕ್ವಾರೆಂಟೈನ್‌ಗಳ ಸಂಖ್ಯೆ 13 ರಿಂದ 23ಕ್ಕೆ ಏರಿಕೆಯಾಗಿದೆ. ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿಗಳ ಗಂಟಲು ಮಾದರಿ ದ್ರವವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಇದರಿಂದಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ. ಊರುಗಳಿಗೆ ತೆರಳಲು ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ತಾಲೂಕು ಕಚೇರಿಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ನೂರಾರು ಮಂದಿ ಕಾರ್ಮಿಕರು ಆಗಮಿಸುತ್ತಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.

ತಮಿಳುನಾಡು ಫಸ್ಟ್‌:

ಜಿಲ್ಲೆಯಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ಸಾವಿರಾರು ಮಂದಿ ತಮ್ಮ ಹುಟ್ಟೂರಿಗೆ ಪ್ರಯಾಣಿಸಲು ಕಾತುರರಾಗಿದ್ದರೆ, ಕೆಲವರು ಈಗಾಗಲೇ ತಮ್ಮ ಊರುಗಳನ್ನು ಸೇರಿಕೊಂಡಿದ್ದಾರೆ.

ಸಾಮೂಹಿಕ ಈದ್‌ ನಮಾಜ್‌ ಅವಕಾಶ ನಿರಾಕರಿಸಿದ ಕೊಪ್ಪ ಮುಸ್ಲಿಮರು

ಹೊರ ಜಿಲ್ಲೆಗಳಿಗೆ ಹೋಗಲು ಹಾಗೂ ಅಲ್ಲಿಂದ ಬರಲು ಅವಕಾಶ ನೀಡಿದ ಮೇ 5ರಿಂದ ಈವರೆಗೆ ಜಿಲ್ಲೆಯಲ್ಲಿ ಹೆಸರು ನೋಂದಣಿ ಮಾಡಿರುವವರ ಪೈಕಿ ತಮಿಳುನಾಡಿನವರೇ ಹೆಚ್ಚು ಮಂದಿ ಇದ್ದಾರೆ. ಈವರೆಗೆ 76 ಬಸ್ಸುಗಳಲ್ಲಿ 1836 ಮಂದಿಯನ್ನು ಚಿಕ್ಕಮಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ನೇರವಾಗಿ ತಮಿಳುನಾಡಿಗೆ ಕಳುಹಿಸಿಕೊಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಹಾರ್‌ನ 60 ಮಂದಿ, ಉತ್ತರ ಪ್ರದೇಶದ 300 ಮಂದಿಯನ್ನು ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಬರಲು ಸಿದ್ಧತೆ ನಡೆದಿದ್ದು, ಭಾನುವಾರ ಈ ಕೆಲಸ ನಡೆಯಲಿದೆ.

ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿರುವವರ ದಾಖಲಾತಿಯನ್ನು ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದರೆ ಅಂತಹವರ ಆರೋಗ್ಯವನ್ನು ತಪಾಸಣೆ ನಡೆಸಿ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಬೇರೆ ಕಡೆಗಳಿಂದ ಬಂದವರಿಗೆ 14 ದಿನಗಳ ಕಾಲ ಕ್ವಾರೆಂಟೈನ್‌ನಲ್ಲಿ ಇರಿಸಿ ಬಳಿಕ ಅವರ ಮನೆಗಳಿಗೆ ಕಳುಹಿಸಿಕೊಡಲಾಗುತ್ತಿದೆ.

ಹೊರ ರಾಜ್ಯಗಳಿಂದ ಆಗಮನ

ಹೆಸರು ನೋಂದಣಿ- 1042

ಗ್ರೀನ್‌ ಸಿಗ್ನಲ್‌- 964

ತಿರಸ್ಕೃತಗೊಂಡ ಅರ್ಜಿಗಳು- 24

ವಿಲೇವಾರಿಯಾಗದ ಅರ್ಜಿಗಳು- 54

ಹೊರ ರಾಜ್ಯಗಳಿಗೆ ನಿರ್ಗಮನ

ಹೆಸರು ನೋಂದಣಿ 6072

ಗ್ರೀನ್‌ ಸಿಗ್ನಲ್‌- 2317

ವಿಲೇವಾರಿಯಾಗದ ಅರ್ಜಿಗಳು- 3755