ಕೊಪ್ಪ(ಮೇ.18): ರಂಜಾನ್‌ ಈದ್‌ ಅಚರಣೆ ಸಮಯದಲ್ಲಿ ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್‌ ನಿರ್ವಹಿಸಲು ಕೆಲವರು ಅವಕಾಶ ಕೋರಿದ ಹಿನ್ನೆಲೆಯಲ್ಲಿ ಸರ್ಕಾರ, ಹಾಗೂ ಜಿಲ್ಲಾಡಳಿತ ಅವಕಾಶ ನೀಡಲು ಅಸಕ್ತಿ ವಹಿಸಿದ್ದು ಕೊಪ್ಪ ತಾಲ್ಲೂಕಿನ ಮುಸ್ಲಿಂ ಸಮುದಾಯದವರು ಈ ಅವಕಾಶವನ್ನು ನಿರಾಕರಿಸಿದ್ದಾರೆ.

ಭಾನುವಾರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಜುಮ್ಮ ಮಸೀದಿಗಳ ಮುಖಂಡರು ಜಂಟಿ ಪತ್ರಿಕಾ ಹೇಳಿಕೆ ನೀಡಿ, ಈ ಅವಕಾಶವನ್ನು ನಿರಾಕರಿಸಿ ಕೋವಿಡ್‌-19 ನಿಯಂತ್ರಣದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದೊಂದಿಗೆ ಸಹಕರಿಸುವ ನಿರ್ಧಾರ ತೆಗೆದುಕೊಂಡಿದ್ದೆವೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗದ ಅಟ್ಟಹಾಸ ದಿನದಿಂದ ದಿನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಜಿಲ್ಲಾಡಳಿತ, ಆರೋಗ್ಯ ಹಾಗೂ ಆರಕ್ಷಕ ಇಲಾಖೆಗಳ ಅವಿರತ ಶ್ರಮದಿಂದ ಜಿಲ್ಲೆ ಇದುವರೆಗೂ ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಜಿಲ್ಲಾಡಳಿತವನ್ನು ನಾವು ಅಭಿನಂದಿಸುತ್ತೇವೆ. ಕಳೆದ ಎರಡು ತಿಂಗಳಿನಿಂದ ಮುಸ್ಲಿಮರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಸರ್ಕಾರದ ಆದೇಶದ ಅನುಸಾರ ಮಸೀದಿಗಳಲ್ಲಿ ಎಲ್ಲ ಸಾಮೂಹಿಕ ಪ್ರಾರ್ಥನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಜಿಲ್ಲಾಡಳಿತ ಹಾಗೂ ಸರಕಾರದೊಂದಿಗೆ ಕೈಜೋಡಿಸಿ ಸಹಕರಿಸುತ್ತಿದ್ದೇವೆ. ನಮ್ಮ ದೇಶ ಈ ಸಾಂಕ್ರಾಮಿಕ ರೋಗ ಹತೋಟಿಗೆ ಬರುವವರೆಗೂ ಜಿಲ್ಲೆಯ ಮುಸ್ಲಿಂ ಸಮುದಾಯ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಲಿದ್ದಾರೆ. ಸಾಮೂಹಿಕ ನಮಾಝ್‌ಗೆ ಅವಕಾಶ ನೀಡಿದರೆ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ನಂತರ ನಮ್ಮ ಜಿಲ್ಲೆಯಲ್ಲೂ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡರೆ ಅದಕ್ಕೆ ಈದ್‌ ನಮಾಝ್‌ ಕಾರಣವೆಂದು ಸಮುದಾಯದ ಮೇಲೆ ಅಪವಾದ ಬರುವ ಸಂಭವವಿರುವುದರಿಂದ ಅದಕ್ಕೆ ಅವಕಾಶ ಕೊಡದೆ ಕೊಪ್ಪ ತಾಲೂಕಿನ ಎಲ್ಲ ಮುಸ್ಲಿಮ್‌ ಜಮಾಅತ್‌ನ ಮುಖ್ಯಸ್ಥರು ಒಮ್ಮತದಿಂದ ಎಲ್ಲರೂ ಮನೆಯಲ್ಲೇ ಈದ್‌ ನಮಾಝ್‌ ಆಚರಿಸಿ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಸತತ ಗ್ರೀನ್‌ಝೋನ್‌ ಹಣೆಪಟ್ಟಿ ಕಾಯ್ದುಕೊಳ್ಳುತ್ತಾ ಜಿಲ್ಲೆ?

ನಮಗೆ ದೇಶ ಹಾಗೂ ದೇಶದ ಹಿತ ಮುಖ್ಯವಾಗಿರುವುದರಿಂದ ದೇಶ ಕೊರೋನಾ ಮುಕ್ತವಾಗಬೇಕು. ಈದ್‌ ಸಾಮೂಹಿಕ ನಮಾಝ್‌ ಮಾಡಲು ಅವಕಾಶ ಕೊಟ್ಟರೆ ಇದುವರೆಗೂ ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡಿದ ಶ್ರಮ ವ್ಯರ್ಥವಾಗಬಹುದು ಎಂದು ಕೊಪ್ಪ ತಾಲೂಕಿನ ಎಲ್ಲ ಮಸೀದಿ ಮೊಹಲ್ಲಾಗಳ ಮುಖ್ಯಸ್ಥರು ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಕೊಪ್ಪದ ಜಾಮಿಯಾ ಮಸೀದಿ, ಮೊಹಿಯುದ್ದೀನ್‌ ಶಾಫಿಈ ಜುಮ್ಮಾ ಮಸೀದಿ, ಮದೀನ ಮಸೀದಿ, ನೂರ್‌ ಜುಮ್ಮಾ ಮಸೀದಿ, ನೂರುಲ್‌ ಆಲಂ ಜುಮ್ಮಾ ಮಸೀದಿ, ಸಣ್ಣಕೆರೆ, ಕುದ್ರೆಗುಂಡಿ, ಶಾಂತಿಪುರ, ಜಯಪುರ, ನಾರ್ವೆಯ ಮಸೀದಿಗಳ ಅಧ್ಯಕ್ಷರು ಮತ್ತು ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ.