ಚಿಕ್ಕಬಳ್ಳಾಪುರ(ಜ.31): ಜೆಡಿಎಸ್‌ ವಶದಲ್ಲಿದ್ದ ಪ್ರಮುಖ ಸ್ಥಳೀಯ ಸಂಸ್ಥೆಗಳನ್ನು ಒಂದೊಂದಾಗಿ ಕಾಂಗ್ರೆಸ್‌ ವಶಕ್ಕೆ ತರುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದ ಶಾಸಕ ಸುಧಾಕರ್‌ ಅವರು, ಇದೀಗ ಕಾಂಗ್ರೆಸ್‌ ವಶದಲ್ಲಿರುವ ಎಲ್ಲ ಅಧಿಕಾರವನ್ನೂ ಕೇಸರಿಮಯ ಮಾಡಲಿದ್ದಾರೆಯೇ ಎಂಬ ಚರ್ಚೆ ಕ್ಷೇತ್ರದಾದ್ಯಂತ ತೀವ್ರವಾಗಿ ನಡೆಯುತ್ತಿದೆ.

ಮೊದಲ ಬಾರಿಗೆ ಡಾ.ಕೆ.ಸುಧಾಕರ್‌ ಅವರು ಶಾಸಕರಾದ ನಂತರ ಮೊದಲು ಕೈ ಹಾಕಿದ್ದು ಪಿಎಲ್‌ಡಿ ಬ್ಯಾಂಕ್‌ ಚುನಾವಣೆಗೆ. ಕಳೆದ ಸುಮಾರು 60 ವರ್ಷಗಳಿಂದ ಜೆಡಿಎಸ್‌ ವಶದಲ್ಲಿದ್ದ ಪಿಎಲ್‌ಡಿ ಬ್ಯಾಂಕ್‌ ಅಧಿಕಾರವನ್ನು ಕಾಂಗ್ರೆಸ್‌ ಪಡೆಯಲಿದೆ ಎಂಬ ನಂಬಿಕೆ ಸ್ವತಃ ಸುಧಾಕರ್‌ ಬೆಂಬಲಿಗರಲ್ಲಿಯೇ ಇಲ್ಲದ ಸ್ಥಿತಿ ಇತ್ತು.

ಬೆರಳ ತುದಿಯಲ್ಲೇ ಇದೆ ಭಾರೀ ಸಮಸ್ಯೆ!

ಇದೇ ಕಾರಣಕ್ಕೆ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಅಭ್ಯ್ರಥಿಗಳೇ ಮುಂದೆ ಬಾರದ ಸ್ಥಿತಿ ಇತ್ತು. ಆದರೆ ಶಾಸಕರೇ ಮುಂದೆ ನಿಂತು ಬಲವಂತವಾಗಿ ತಮ್ಮ ಬೆಂಬಲಿಗರನ್ನು ನಿಲ್ಲಿಸುವ ಜೊತೆಗೆ 13 ನಿರ್ದೇಶಕ ಸ್ಥಾನಗಳಿರುವ ಪಿಎಲ್‌ಡಿ ಬ್ಯಾಂಕ್‌ನಲ್ಲಿ 7 ಮಂದಿ ನಿರ್ದೇಶಕರನ್ನು ಗೆಲ್ಲಿಸುವ ಮೂಲಕ ಆರು ದಶಕಗಳ ಇತಿಹಾಸವನ್ನು ಮರು ಸ್ಥಾಪಿಸುವಲ್ಲಿ ಸುಧಾಕರ್‌ ಯಶಸ್ವಿಯಾದರು.

ಎಲ್ಲೆಲ್ಲಿ ಗೆಲವು?

ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಿಂದ ಆರಂಭವಾದ ಸುಧಾಕರ್‌ ವಿಜಯ ಯಾತ್ರೆ ಟಿಎಪಿಎಂಎಸ್‌, ಎಪಿಎಂಸಿ, ನಗರಸಭೆ, ತಾಪಂ ಮುಂತಾದ ಸ್ಥಳೀಯ ಸಂಸ್ಥೆಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ಮಯ ಮಾಡುವಲ್ಲಿ ಯಶಸ್ವಿಯಾದರು. ಆದರೆ, ಎಲ್ಲ ಚುನಾವಣೆಗಳಲ್ಲಿ ಗೆಲವು ಸಾಧಿಸಿದ ಶಾಸಕರು ಕೋಚಿಮುಲ್‌ ಚುನಾವಣೆಲ್ಲಿ ಮಾತ್ರ ಗೆಲ್ಲಲಾಗಲಿಲ್ಲ ಎಂಬ ಕೊರತೆ ಇನ್ನೂ ಇದೆ.

ಪ್ರಸ್ತುತ ಅದೇ ತಂತ್ರಗಾರಿಕೆ:

ಕಾಂಗ್ರೆಸ್‌ ಶಾಸಕರಾಗಿದ್ದ ಅವಧಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಲನ್ನು ಕಾಂಗ್ರೆಸ್‌ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸುಧಾಕರ್‌ ಈಗ ಮತ್ತೆ ಮೊದಲಿನಿಂದ ಆರಂಭಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಎಲ್ಲವನ್ನೂ ಕಾಂಗ್ರೆಸ್‌ ಮಯ ಮಾಡಿದ್ದ ಅವರೇ ಈಗ ಎಲ್ಲವನ್ನೂ ಕೇಸರಿಮಯ ಮಾಡಬೇಕಿದೆ.

ಬದಲಾದ ರಾಜಕೀಯ ಬೆಳವಣಿಗೆಗಳಲ್ಲಿ ಸುಧಾಕರ್‌ ಅವರು ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುವ ಜೊತೆಗೆ ಉಪ ಚುನಾವಣಯೆಲ್ಲಿ ಬಿಜೆಪಿ ಅಭ್ಯ್ರಥಿಯಾಗಿ ಸ್ಪರ್ಧಿಸಿ ಈಗಾಗಲೇ ಗೆಲುವು ಸಾಧಿಸಿ ಬಿಜೆಪಿ ಶಾಸಕರಾಗಿದ್ದಾರೆ. ಹಾಗಾಗಿ ಅವರಿಂದಲೇ ಕಾಂಗ್ರೆಸ್‌ಮಯವಾಗಿದ್ದ ಸ್ಥಳೀಯ ಸಂಸ್ಥೆಗಳು ಕೇಸರಿಮಯವಾಗಬೇಕಿದೆ.

ಮತ್ತೆ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ!

ಫೆ.23ರಂದು ಮತ್ತೆ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ನಡೆಯಲಿದೆ. ಕಳೆದ ಬಾರಿ ತೀವ್ರ ಕಸರತ್ತು ನಡೆಸಿ ಜೆಡಿಎಸ್‌ ವಶದಲ್ಲಿದ್ದ ಭೂ ಅಭಿವೃದ್ಧಿ ಬ್ಯಾಂಕ್‌ ಅಧಿಕಾರವನ್ನು ಕಾಂಗ್ರೆಸ್‌ ವಶಕ್ಕೆ ಪಡೆದಿದ್ದ ಸುಧಾಕರ್‌, ಈಗ ಕಾಂಗ್ರೆಸ್‌ ವಶದಲ್ಲಿರುವ ಪಿಎಲ್‌ಡಿ ಬ್ಯಾಂಕ್‌ ಅಧಿಕಾರವನ್ನು ಬಿಜೆಪಿ ವಶಕ್ಕೆ ಪಡೆಯಲು ಅಗತ್ಯವಿರುವ ಎಲ್ಲ ತಂತ್ರಗಾರಿಕೆ ನಡೆಸುತ್ತಿದ್ದಾರೆ.

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಎದುರಿಸಲು ಈಗಾಗಲೇ ಒಂದು ಸುತ್ತಿನ ಪೂರ್ವಭಾವಿ ಸಭೆ ನಡೆಸಿರುವ ಸುಧಾಕರ್‌ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, 12 ಸ್ಥಾನಗಳನ್ನೂ ಗೆಲ್ಲಲು ಅಗತ್ಯವಿರುವ ಸಿದ್ಧತೆಗಳಲ್ಲಿ ಶಾಸಕರು ನಿರತರಾಗಿದ್ದಾರೆ. ಕಳೆದ ಬಾರಿ ಸ್ಪರ್ಧಿಸಲೇ ಮುಂದೆ ಬಾರದಿದ್ದ ಆಕಾಂಕ್ಷಿಗಳು ಪ್ರಸ್ತುತ ಮುಗಿ ಬಿದ್ದು ಶಾಸಕರಿಗೆ ಅರ್ಜಿಗಳನ್ನು ಸಲ್ಲಿಸಿರುವುದು ವಿಶೇಷ.

ನಗರಸಭೆಯೂ ಕೇಸರಿಮಯವಾಗಲಿದೆಯೇ?

ಪ್ರಸ್ತುತ ಪಿಎಲ್‌ಡಿ ಬ್ಯಾಂಕ್‌ ಜೊತೆಗೆ ಜಿಲ್ಲಾಕೇಂದ್ರ ಚಿಕ್ಕಬಳ್ಳಾಪುರ ನಗರಸಭಾ ಚುನಾವಣೆಯೂ ಎದುರಾಗಿದ್ದು, ಫೆ.9ರಂದು ಚುನಾವಣೆ ನಡೆಯಲಿದೆ. ಈ ಹಿಂದೆ ಕಾಂಗ್ರೆಸ್‌ ಅಭ್ಯರ್ಥಿಗಳು ಕಡಿಮೆ ಸ್ಥಾನದಲ್ಲಿ ಗೆದ್ದಿದ್ದರೂ ಜೆಡಿಎಸ್‌ ಸದಸ್ಯರು ಮತ್ತು ಪಕ್ಷೇತರ ಸದಸ್ಯರನ್ನು ಸೇರಿಸಿಕೊಂಡು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಶಾಸಕರು ಪ್ರಸ್ತುತ ಚುನಾವಣಯೆಲ್ಲಿ ಸ್ಪಷ್ಟಬಹುಮತದತ್ತ ದೃಷ್ಟಿಹರಿಸಿದ್ದಾರೆ.

ನಗರದ ಟ್ಟು 31 ವಾರ್ಡುಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದು, ಬಹುಮತಕ್ಕೆ ಅಗತ್ಯವಿರುವ ಸದಸ್ಯರನ್ನು ಗೆಲ್ಲಿಸಿಕೊಂಡು ಬರಲು ಅಗತ್ಯವಿರುವ ತಂತ್ರಗಾರಿಕೆಯನ್ನು ಈಗಾಗಲೇ ಹೆಣೆದಿದ್ದಾರೆ. ಪ್ರಸ್ತುತ ನಾಮಪತ್ರಗಳ ಪ್ರವ ಮುಕ್ತಾಯವಾಗಿದ್ದು, ಮತದಾರರ ಮನ ಗೆಲ್ಲಲು ಬಿಜೆಪಿ ಅಭ್ಯರ್ಥಿಗಳನ್ನು ಪ್ರಚಾರದಲ್ಲಿ ತೊಡಗಿದ್ದಾರೆ.

'ಪೌರತ್ವ ಕಾಯ್ದೆಯಿಂದ ಹಿಂದೂಗಳಿಗೆ ಕಾದಿದ್ಯಾ ಗಂಡಾಂತರ'..?

ನಗರಸಭೆ ಮತ್ತು ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ನಂತರ ಗ್ರಾಪಂ, ಅದಾದ ಬಳಿಕ ತಾಪಂ, ಜಿಪಂ ಚುನಾವಣೆಗಳು, ಟಿಎಪಿಎಂಎಸ್‌, ಎಪಿಎಂಸಿ ಸೇರಿದಂತೆ ಹಲವು ಚುನಾವಣೆಗಳು ಎದುರಾಗಲಿದ್ದು, ಚುನಾವಣಾ ಪೂರ್ವ ಸಿದ್ಧರಾಗುವಂತೆ ಈಗಾಗಲೇ ಮುಖಂಡರಿಗೆ ಸುಧಾಕರ್‌ ಕರೆ ನೀಡಿದ್ದಾರೆ.

ಒಟ್ಟಿನಲ್ಲಿ ಶಾಸಕರಾಗುವ ಜೊತಗೆ ನಗರಸಭೆಯಲ್ಲಿ 9 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ ಪ್ರಸ್ತುತ ಎಲ್ಲ ವಾರ್ಡುಗಳಲ್ಲಿ ಸ್ಪರ್ಧಿಸಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದರೆ, ಶಾಸಕ, ಸಂಸದ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ತನ್ನ ಉಳಿವಿಗಾಗಿ ಹೋರಾಟ ನಡೆಸುವಂತಾಗಿದೆ. ಆದರೆ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಲ್ಲಿದ್ದ ಬಿಜೆಪಿ ಎಲ್ಲ ಅಧಿಕಾರದತ್ತ ದಾಪುಗಾಲು ಹಾಕುತ್ತಿರುವುದು ವಿಶೇಷ.

 

ಪಿಎಲ್‌ಡಿ ಬ್ಯಾಂಕ್‌, ನಗರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮುಂದಿನ ಎರಡು ತಿಂಗಳಲ್ಲಿನ ಗ್ರಾಪಂ ಚುನಾವಣೆ, ನಂತರ ಎದುರಾಗಲಿರುವ ತಾಪಂ, ಜಿಪಂ ಚುನಾವಣಯಲ್ಲಿಯೂ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ನಾಯಕರು ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ಶ್ರಮಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

-ಅಶ್ವತ್ಥನಾರಾಯಣ ಎಲ್‌.