ಬೆರಳ ತುದಿಯಲ್ಲೇ ಇದೆ ಭಾರೀ ಸಮಸ್ಯೆ!
ಪ್ರತಿ ತಿಂಗಳೂ ಪಡಿತರ ಪಡೆಯಲು ತಿಂಡಿ, ಊಟ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಒಂದು ದಿನ ಬಯೋಮೆಟ್ರಿಕ್(ಹೆಬ್ಬೆರಳು) ನೀಡಲು ಹಾಗೂ ಮತ್ತೊಂದು ದಿನ ಪಡಿತರ ಪಡೆಯಲು ಸರತಿ ಸಾಲಿನಲ್ಲಿ ನಿಂತು ದಿನಗಟ್ಟಲೆ ಕಾಯ್ದು ನಿಂತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಮಂಡ್ಯ(ಜ.31): ಪ್ರತಿ ತಿಂಗಳೂ ಪಡಿತರ ಪಡೆಯಲು ತಿಂಡಿ, ಊಟ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಒಂದು ದಿನ ಬಯೋಮೆಟ್ರಿಕ್(ಹೆಬ್ಬೆರಳು) ನೀಡಲು ಹಾಗೂ ಮತ್ತೊಂದು ದಿನ ಪಡಿತರ ಪಡೆಯಲು ಸರತಿ ಸಾಲಿನಲ್ಲಿ ನಿಂತು ದಿನಗಟ್ಟಲೆ ಕಾಯ್ದು ನಿಂತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಶ್ರೀರಂಗಪಟ್ಟಣದಲ್ಲಿ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯಲು ಎರಡು, ಮೂರು ದಿನಗಳು ಸಾಲಿಗಟ್ಟಿನಿಂತರೂ ಪಡಿತರ ಸಿಕ್ಕೆ ಸಿಗುತ್ತದೆ ಎಂಬ ಯಾವುದೇ ನಂಬಿಕೆಯಿಲ್ಲದೆ ಮೊತ್ತೊಂದು ದಿನ ಬರಬೇಕಲ್ಲ ಎಂಬ ಆತಂಕದಲ್ಲೇ ಪಡಿತರದಾರರು ಚಾತಕಪಕ್ಷಿಗಳಂತೆ ಕಾದು ನಿಂತುಕೊಳ್ಳುವಂತಾಗಿದೆ. ತಾಲೂಕಿನಾದ್ಯಂತ ಒಟ್ಟು 49,438 ಪಡಿತರ ಚೀಟಿಗಳಿವೆ. ಅದರಲ್ಲಿ 46,624 ಬಿಪಿಎಲ್, 2,621 ಅಂತ್ಯೋದಯ ಕಾರ್ಡ್‌ಹಾಗೂ 193 ಎಪಿಎಲ್ ಕಾರ್ಡ್‌ದಾರರು ಇದ್ದಾರೆ.
'ಪೌರತ್ವ ಕಾಯ್ದೆಯಿಂದ ಹಿಂದೂಗಳಿಗೂ ಕಾದಿದ್ಯಾ ಗಂಡಾಂತರ'..?
ಅಂತ್ಯೋದಯ, ಬಿಪಿಎಲ್ ಹಾಗೂ ಕೆಲ ಎಪಿಎಲ್ ಪಡಿತರದಾರರು ಪಡಿತರ ಪಡೆಯಲು ಪ್ರತಿ ತಿಂಗಳು ಬಯೋಮೆಟ್ರಿಕ್ ಕೊಟ್ಟು ಪಡಿತರ ಪಡೆದುಕೊಳ್ಳುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಬಯೋಮೆಟ್ರಿಕ್‌ನ ಸರ್ವರ್ ಸಮಸ್ಯೆಯಿಂದಾಗಿ ಪಡಿತರದಾರರು ಪಡಿತರ ಪಡೆದುಕೊಳ್ಳಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಕೆಲ ವಯಸ್ಸಾದ, ಗಾರೆ ಕೆಲಸ ಮಾಡುವವರ ಸಮಸ್ಯೆ ಹೇಳ ತೀರದಾಗಿದೆ. ಇವರು ಪ್ರತಿ ತಿಂಗಳು ಬಯೋಮೆಟ್ರಿಕ್‌ನಿಂದ ಪಡಿತರ ಪಡೆಯುವುದೇ ಒಂದು ದೊಡ್ಡ ಸವಾಲಾಗಿದೆ. ಇವರ ಬೆರಳಿನ ರೇಖೆಗಳು ಮಾಸಿಹೋಗಿದ್ದು, ತಮ್ಮ ಎರಡು ಕೈಯಲ್ಲಿನ 10 ಬೆರಳಿನ ರೇಖೆಗಳು ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ.
ಕಾರ್ಡ್ ರದ್ದು:
2-3 ತಿಂಗಳು ಸತತವಾಗಿ ಪಡಿತರ ತೆಗೆದುಕೊಳ್ಳದೇ ಇದ್ದರೆ ಕಾರ್ಡ್‌ಗಳು ರದ್ದಾಗಲಿದ್ದು, ಇದಕ್ಕಾಗಿ ಎಷ್ಟೋ ಮಂದಿ ತಮ್ಮ ಪಡಿತರ ಕಾರ್ಡ್ ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ಒಂದೆರಡು ದಿನ ಕೆಲವೊಮ್ಮೆ ವಾರಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆದುಕೊಳ್ಳುವುದು ಉಂಟು. ರಾಜ್ಯಾದ್ಯಂತ ಈ ಸಮಸ್ಯೆ ತಲೆದೂರಿದೆ, ಪ್ರತಿ ತಿಂಗಳು ಯಾವುದೇ ಸಮಸ್ಯೆ ಇಲ್ಲದೆ ಬಯೋಮೆಟ್ರಿಕ್ ವ್ಯವಸ್ಥೆಯಿಂದ ಪಡಿತರ ವಿತರಿಸಲಾಗುತ್ತಿತ್ತು. ಆದರೆ ಜನವರಿ ತಿಂಗಳು ಮಾತ್ರ ಸವರ್ರ ಸಮಸ್ಯೆಯಿಂದಾದ ಪಡಿತರ ವಿತರಣೆಯಲ್ಲಿ ಸಮಸ್ಯೆ ಉಲ್ಬಣವಾಗಿದೆ. ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಇನ್ನು ಒಂದು ದಿನದಲ್ಲಿ ಸಮಸ್ಯೆ ಸರಿಯಾಗುವುದಾಗಿ ತಿಳಿಸಿದ್ದಾರೆ. ಮತ್ತೆ ಸಮಸ್ಯೆ ಉಂಟಾದಲ್ಲಿ ಚೆಕ್ ಲಿಸ್ಟ್ ಮುಖಾಂತರ ಪಡಿತರ ವಿತರಿಸಿ ಸಮಸ್ಯೆ ಸರಿಪಡಿಸಲಾಗುವುದು. ಗಾರೆ ಕೆಲಸ ಮಾಡಿ ತಮ್ಮ ಬೆರಳಿನ ರೇಖೆಗಳು ಮಾಸಿ ಹೋಗಿರುವವರಿಗೆ ಬಯೋಮೆಟ್ರಿಕ್‌ನಿಂದ ರಿಯಾಯಿತಿ ನೀಡಲಾಗಿದೆ. ಈ ಸಂಬಂಧ ನ್ಯಾಯಬೆಲೆ ಅಂಗಡಿಯವರಿಗೂ ಸೂಚಿಸಿ ಅಂತಹವರಿಗೆ ಪಡಿತರ ನೀಡಲಾಗುತ್ತಿದೆ ಎನ್ನುವುದು ಆಹಾರ ಅಧಿಕಾರಿಗಳ ಹೇಳಿಕೆಯಾಗಿದೆ.
ಗೋಡ್ಸೆಗೆ ಪ್ರಧಾನಿ ಹೋಲಿಕೆ, ಈಗ ಮಾತಾಡಲ್ಲ ಎಂದ್ರು ಮಾಜಿ ಪ್ರಧಾನಿ
ಸರ್ಕಾರ ಬಡವರಿಗೆ ಪಡಿತರ ನೀಡಲು ಸಾಧ್ಯವಾಗದೆ ಸರ್ವರ್ ನೆಪ ಹೇಳಿ ಪಡಿತರದಾರರನ್ನು ವಂಚಿಸುತ್ತಿದೆ. ಪಡಿತರ ಪಡೆಯುವವರು ಬಹುತೇಕ ಮಂದಿ ಬಡವರು. ಎಷ್ಟೋ ಜನ ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಅಂತಹವರಿಗೆ ಸರ್ಕಾರ ಮೋಸ ಮಾಡುತ್ತಿರುವುದು ಸರಿಯಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಸಂದೇಶ್ ತಿಳಿಸಿದ್ದಾರೆ.
10-12ವರ್ಷ ಮೇಲ್ಪಟ್ಟಮಕ್ಕಳ ಹೆಬ್ಬೆಟ್ಟು ಬಯೋಮೆಟ್ರಿಕ್‌ನಲ್ಲಿ ದಾಖಲಾಗುತ್ತಿಲ್ಲ. ಇನ್ನು ಗಾರೆ ಕೆಲಸ ಮಾಡುವ, ಕೂಲಿ ಕಾರ್ಮಿಕರು ಹಾಗೂ ವಯಸ್ಸಾದ ವೃದ್ಧರ ಸಮಸ್ಯೆ ಹೇಳತೀರದಾಗಿದೆ. ಪಡಿತರ ಪಡೆಯುವುದೆ ಸವಾಲಾಗಿದೆ. ಸರ್ಕಾರ ಕೂಡಲೇ ಬಯೋಮೆಟ್ರಿಕ್ ಬದಲಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಶ್ರೀಕೃಷ್ಣ ರಾಜೇಂದ್ರ ಸಹಕಾರ ಸಂಘದ ಸದಸ್ಯ ಎಸ್.ಕೆ.ಕುಬೇರ್ ಸಿಂಗ್ ತಿಳಿಸಿದ್ದಾರೆ.
-ಎಲ್.ವಿ. ನವೀನ್ ಕುಮಾರ್