'ಪೌರತ್ವ ಕಾಯ್ದೆಯಿಂದ ಹಿಂದೂಗಳಿಗೆ ಕಾದಿದ್ಯಾ ಗಂಡಾಂತರ'..?
ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ವಿರೋಧಿ ಎಂಬ ಕೂಗು ದೇಶದ ಹಲವೆಡೆ ಕೇಳಿ ಬಂದಿದೆ. ಪೌರತ್ವ ಕಾಯ್ದೆಯಿಂದ ಹಿಂದೂಗಳಿಗೂ ತೊಂದರೆ ಇದೆಯಾ..? ಪೌರತ್ವ ತಿದ್ದುಪಡಿ ಕಾಯ್ದೆ ಮುಸಲ್ಮಾನರಿಗೆ ನೇರವಾಗಿ ಚೂರಿ ಹಾಕಿದರೆ, ಹಿಂದೂಗಳ ಬೆನ್ನಿಗೆ ಪರೋಕ್ಷವಾಗಿ ಇರಿಯುತ್ತದೆ ಎಂದು ಮಾನವ ಹಕ್ಕುಗಳ ಹೋರಾಟಗಾರ, ಚಿಂತಕ ಶಿವಸುಂದರ್ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ(ಜ.31): ಪೌರತ್ವ ತಿದ್ದುಪಡಿ ಕಾಯ್ದೆ ಮುಸಲ್ಮಾನರಿಗೆ ನೇರವಾಗಿ ಚೂರಿ ಹಾಕಿದರೆ, ಹಿಂದೂಗಳ ಬೆನ್ನಿಗೆ ಪರೋಕ್ಷವಾಗಿ ಇರಿಯುತ್ತದೆ ಎಂದು ಮಾನವ ಹಕ್ಕುಗಳ ಹೋರಾಟಗಾರ, ಚಿಂತಕ ಶಿವಸುಂದರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ‘ಪೌರತ್ವ ಕಾಯ್ದೆ ಯಾರಿಗಾಗಿ’ ಎಂಬ ವಿಷಯದ ಕುರಿತು ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಶಿವ ಸುಂದರ್, ಸಿಎಎ, ಎನ್‌ಆರ್‌ಸಿ, ಕೇವಲ ಮುಸ್ಲಿಮರು ಮಾತ್ರವಲ್ಲ, ಈ ದೇಶದ ಹಿಂದೂ ಪರಿಧಿಯಲ್ಲಿ ಬರುವ ದಲಿತರು, ಬಡವರು, ಶೂದ್ರರು, ಮಹಿಳೆಯರಿಗೆ ಮಾರಕವಾಗಲಿದೆ ಎಂದು ಹೇಳಿದ್ದಾರೆ.
ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಕ್ಕೆ ಧಕ್ಕೆ ತರುವ ಸಿಎಎ, ಎನ್‌ಸಿಆರ್, ಎನ್‌ಪಿಆರ್ ವಿರೋಧಿಸಬೇಕು ಎಂದು ಮನವಿ ಮಾಡಿದ್ದಾರೆ.
ರೈತಸಂಘದ ಜಿಲ್ಲಾಧ್ಯಕ್ಷ ಎಸ್.ಸುರೇಶ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮುಖಂಡ ಎಂ.ಬಿ.ಶ್ರೀನಿವಾಸ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ ಮಾತನಾಡಿದ್ದಾರೆ. ಕಾಂಗ್ರೆಸ್ ಮುಖಂಡ ಸಿ.ಎಂ.ದ್ಯಾವಪ್ಪ, ಸಿಪಿಎಂ ಎಂ.ಪುಟ್ಟಮಾದು, ಕೃಷಿಕೂಲಿಕಾರರ ಸಂಘದ ಟಿ.ಯಶ್ವಂತ್, ಅಖಿಲ ಭಾರತ ವಕೀಲರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್,ರಾಮಯ್ಯ, ಸೋಮಶೇಖರ್ ಕೆರಗೋಡು, ಸಂವಿಧಾನ ಸಂರಕ್ಷಣಾ ಸಮಿತಿಯ ಎಂ.ಬಿ.ನಾಗಣ್ಣಗೌಡ, ಲಕ್ಷ್ಮಣ್ ಚೀರನಹಳ್ಳಿ, ಮುಹಮ್ಮದ್ ತಾಹೇರ್ , ಮುಜಾಹಿದ್, ಸಲೀಂ, ಅಹಮದ್ ಉಪಸ್ಥಿತರಿದ್ದರು.
ಹೊಸ ಕಾನೂನುಗಳಿಂದ ದೇಶದಲ್ಲಿ ಕ್ಷೋಭೆ
ದೇಶದಲ್ಲಿ ಕ್ಷೋಭೆ ಸೃಷ್ಟಿಸುವುದು ಸಿಎಎ ಹಿಂದಿನ ಷಡ್ಯಂತ್ರವಾಗಿದೆ. ಇದನ್ನು ಪ್ರತಿಯೊಬ್ಬ ಭಾರತೀಯನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಭಜರಂಗ ದಳದ ಮಾಜಿ ಮುಖಂಡ ಮಹೇಂದ್ರಕುಮಾರ್ ಕರೆ ನೀಡಿದರು. ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವತಂತ್ರ ಪೂರ್ವದಲ್ಲಿದ್ದ ಭಾರತದ ಕಲ್ಪನೆಯಾದ ಬ್ಯಾಹ್ಮಣ್ಯ ಆಧಿಪತ್ಯವನ್ನು ಮತ್ತೆ ಪ್ರತಿಷ್ಠಾಪಿಸುವುದೇ ಸಿಎಎ ಜಾರಿ ಉದ್ದೇಶವಾಗಿದೆ. ಒಕ್ಕಲಿಗ, ಕುರುಬ, ವಾಲ್ಮೀಕಿ, ದಲಿತ, ಮುಸ್ಲಿಂ ಎನ್ನದೆ ಎಲ್ಲರೂ ಭಾರತೀಯರೆಂದು ಬೀದಿಗಿಳಿದು ಪ್ರತಿರೋಧ ಮಾಡುವುದೊಂದೇ ಎದುರಾಗಿರುವ ಗಂಡಾಂತರಕ್ಕೆ ಪರಿಹಾರ. ಬಿಜೆಪಿ, ಸಂಘ ಪರಿವಾರದ ಹುನ್ನಾರಗಳು, ಅಜೆಂಡಾ ಎಲ್ಲವನ್ನೂ ಎಳೆಎಳೆಯಾಗಿ ಬಿಡಿಸಿಟ್ಟಅವರು, ಇಂತಹುದ್ದನ್ನು ಸಂಘಟಿತವಾಗಿ ಪ್ರಶ್ನಿಸದೆ ಇರುವುದರಿಂದಲೇ ಸಮಸ್ಯೆ ಎದುರಾಗಿದೆ ಎಂದು ವಿಶ್ಲೇಷಿಸಿದರು.
ದೇಶವನ್ನು ಹಿಂದು ರಾಷ್ಟ್ರ ಮಾಡಲು ಬಿಜೆಪಿಗೆ ಅಸಾಧ್ಯ
ಬಿಜೆಪಿ, ಸಂಘಪರಿವಾರ ಈ ದೇಶವನ್ನು ಎಂದಿಗೂ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ… ಮಜೀದ್ ಹೇಳಿದ್ದಾರೆ.
ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸುದೀರ್ಘ ಕಾಲ ಆಳಿದ ಮುಸ್ಲಿಂ, ಬ್ರಿಟಿಷರಿಂದಲೂ ದೇಶವನ್ನು ಬದಲಿಸಲು ಸಾಧ್ಯವಾಗಿಲ್ಲ. ಇನ್ನು ಕೇವಲ ಏಳು ವರ್ಷದಿಂದ ಆಳ್ವಿಕೆ ಮಾಡುವವರಿಂದ ಸಾಧ್ಯವೇವೇ ಎಂದು ಪ್ರಶ್ನಿಸಿದರು. ಸ್ವಾತಂತ್ರ್ಯ ಪೂರ್ವ, ನಂತರದಿಂದಲೂ ಎಲ್ಲರೂ ಸೋದರತ್ವದಿಂದ ಸೌಹಾರ್ದಯುತವಾಗಿ ಬದುಕುತ್ತಿರುವ ದೇಶದಲ್ಲಿ ಹೊಸ ಕಾಯ್ದೆ ಸಿಎಎ ಮೂಲಕ ಒಡಕು ಮೂಡಿಸಲು ಯತ್ನ ನಡೆಸಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ.