ಮೆಡಿಕಲ್‌ ಕಾಲೇಜು ಆರಂಭವಾಗಿ 2 ವರ್ಷ ಕಳೆದಿದ್ದು, ಮೂರನೆ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಎರಡು ವರ್ಷಗಳಿಂದ ಎರಡು ಬ್ಯಾಚ್‌ಗಳು ದಾಖಲಾತಿ ಪಡೆದಿವೆ. ಆದರೆ ಈ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಸೌಲಭ್ಯಗಳು ಇಲ್ಲದೆ ಪರಿತಪಿಸುವಂತಾಗಿದೆ. 

ದಯಾಸಾಗರ್‌ ಎನ್‌.

ಚಿಕ್ಕಬಳ್ಳಾಪುರ (ಜು.24): ಮೆಡಿಕಲ್‌ ಕಾಲೇಜು ಆರಂಭವಾಗಿ 2 ವರ್ಷ ಕಳೆದಿದ್ದು, ಮೂರನೆ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಎರಡು ವರ್ಷಗಳಿಂದ ಎರಡು ಬ್ಯಾಚ್‌ಗಳು ದಾಖಲಾತಿ ಪಡೆದಿವೆ. ಆದರೆ ಈ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಸೌಲಭ್ಯಗಳು ಇಲ್ಲದೆ ಪರಿತಪಿಸುವಂತಾಗಿದೆ. ರಾಜಕೀಯ ಕಾರಣಗಳಿಂದಾಗಿ ಮೆಡಿಕಲ್‌ ಕಾಲೇಜಿನ ನೂತನ ಕಟ್ಟಡ ಸಧ್ಯಕ್ಕೆ ಆರಂಭವಾಗುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ತಾಲೂಕಿನ ಅರೂರಿನ ಬಳಿ ಈಗಾಗಲೇ ಕಾಲೇಜಿನ ಭವ್ಯ ಕಟ್ಟಡಗಳು ನಿರ್ಮಾಣವಾಗಿವೆ. ಈ ತಕ್ಷಣಕ್ಕೆ ಕಾಲೇಜನ್ನು ಇದೇ ಕಟ್ಟಡದಲ್ಲಿ ನಡೆಸಲು ಯಾವುದೇ ಸಮಸ್ಯೆ ಇಲ್ಲ. ತರಗತಿ ನಡೆಸಲು ಬೇಕಾದ ಎಲ್ಲ ಸೌಲಭ್ಯಗಳು ಇಲ್ಲಿವೆ. ಅಲ್ಲದೆ ಕಾಲೇಜಿನ ಕಟ್ಟಡವನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವಸರವಾಗಿ ಉದ್ಘಾಟನೆಯನ್ನೂ ಮಾಡಲಾಗಿತ್ತು. ಆದರೆ ಈ ವರೆಗೆ ಕಾಲೇಜು ಮಾತ್ರ ಏಕೆ ಆರಂಭವಾಗಿಲ್ಲ ಎಂಬ ಪ್ರಸ್ನೆಗೆ ಸ್ಪಷ್ಟಉತ್ತರ ಸಿಗುತ್ತಿಲ್ಲ.

ಮತ್ತೊಮ್ಮೆ ಉದ್ಘಾಟನೆಗೆ ಸಿದ್ಧತೆ?: ಬಿಜೆಪಿ ಸರ್ಕಾರದ ಅವಧಿಯಲ್ಲಿ ಉದ್ಘಾಟನೆಗೊಂಡ ಕಾಲೇಜಿನ ಕಟ್ಟಡ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಆರಂಭಿಸಿದರೆ ಎಲ್ಲಾ ಕ್ರೆಡಿಟ್‌ ಬಿಜೆಪಿಗೆ ಸೇರಲಿದೆ ಎಂಬ ಹಿನ್ನೆಲೆಯಲ್ಲಿ ಕಾಲೇಜಿನ ಕಟ್ಟಡವನ್ನು ಮತ್ತೊಮ್ಮೆ ಅಧಿಕೃತವಾಗಿ ಮುಖ್ಯಮಂತ್ರಿಗಳಿಂದಲೇ ಉದ್ಘಾಟಿಸಬೇಕು ಎಂಬ ಹಠಕ್ಕೆ ಕಾಂಗ್ರೆಸ್‌ ಮುಖಂಡರು ಬಿದ್ದಿದ್ದಾರೆ ಎನ್ನುವುದು ಸಹ ಇದಕ್ಕೆ ಒಂದು ಕಾರಣವಾಗಿದೆ. ಹೀಗಾಗಿ ಕಾಲೇಜು ಕಾಮಗಾರಿ ಪೂರ್ಣಗೊಳಿಸಲು ಇನ್ನಷ್ಟುಸಮಯ ಬೇಕು ಎಂಬ ನೆಪವೊಡ್ಡಿ ಈ ಕಟ್ಟಡದಲ್ಲಿ ಕಾಲೇಜು ಆರಂಭವಾಗಲು ವಿಳಂಬ ಮಾಡಲಾಗುತ್ತಿದೆ.

ಚಂದ್ರಯಾನದ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ವಿಜ್ಞಾನಿಗಳು

ಚಿಕ್ಕಬಳ್ಳಾಪುರದ ಮೆಡಿಕಲ್‌ ಕಾಲೇಜು ಆರಂಭವಾದ ಸಮಯದಲ್ಲೇ ಯಾದಗಿರಿ ಮೆಡಿಕಲ್‌ ಕಾಲೇಜು ಸಹ ಆರಂಭವಾಗಿತ್ತು. ಅಲ್ಲಿಯೂ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಇನ್ನೂ ಮುಗಿದಿಲ್ಲ. ಕೇಲವ ನೆಲ ಅಂತಸ್ತು ಮಾತ್ರ ಪೂರ್ಣಗೊಂಡಿದೆ. ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈಗಾಗಲೇ ಅಲ್ಲಿಯೇ ತರಗತಿಗಳು ನಡೆಯುತ್ತಿವೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಕಟ್ಟಡ ನಿರ್ಮಾಣ ಆಗಿ ಉದ್ಘಾಟನೆಯಾದರೂ ತರಗತಿಗಳು ಆರಂಭಿಸಲು ಈ ಭಾಗದ ಮಂತ್ರಿಗಳು ಮತ್ತು ಶಾಸಕರು ಮನಸ್ಸು ಮಾಡಿದಂತಿಲ್ಲ. ಈ ಬಾರಿಯ ಆಯವ್ಯಯದಲ್ಲೂ ಚಿಕ್ಕಬಳ್ಳಾಪುರದ ಮೆಡಿಕಲ್‌ ಕಾಲೇಜಿನ ಅಭಿವೃದ್ಧಿಗೆಂದು ಬಿಡಿಗಾಸು ನೀಡಿಲ್ಲ. ಇದರಿಂದಾಗಿ ಈ ಭಾಗದ ಜನರಿಗೆ ವಿವಿಧ ರೀತಿಯ ಅನುಮಾನಗಳು ಮೂಡಿವೆ. ಈ ಹಿಂದಿನ ಶಾಸಕರಾದ ಡಾ.ಕೆ.ಸುಧಾಕರ್‌ ಇದ್ದಿದರೆ ಹಾಗೂ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಈ ಭಾರಿಯ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಆಗುತ್ತಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಕಟ್ಟಡ ಹಸ್ತಾಂತರಕ್ಕೆ ಬಿಲ್‌ ಬಾಕಿ ಅಡ್ಡಿ: ಕಾಲೇಜಿನ ಕಾಮಗಾರಿ ಪೂರ್ಣಗೊಳ್ಳಲು 525 ಕೋಟಿ ರೂಪಾಯಿಗಳು ಈಗಾಗಲೇ ಬಿಡುಗಡೆ ಆಗಿದೆ. ಆ ನಂತರ ಕಾಲೇಜಿನ ಜೊತೆಗೆ ಸಂಶೋಧನಾ ಕೇಂದ್ರದ ಅಭಿವೃದ್ಧಿಗೆಂದು ಒಟ್ಟು 810 ಕೋಟಿಗೆ ಅಂದಾಜು ವೆಚ್ಚವನ್ನು ಹೆಚ್ಚಿಸಲಾಗಿತ್ತು. ಈಗ ಪೂರ್ಣಗೊಂಡಿರುವ ಕಾಲೇಜು ಕಟ್ಟಡವನ್ನು ಕಾಲೇಜಿನ ಆಡಳಿತ ಮಂಡಳಿಗೆ ವರ್ಗಾಯಿಸುವ ನಿಟ್ಟಿನಲ್ಲಿಯೂ ತೊಡಕುಗಳಿದ್ದು ಈ ವರೆಗೆ ಈ ಕಟ್ಟಡ ನಿರ್ಮಾದ ಉಸ್ತುವಾರಿ ಎಂಜಿನಿಯರ್‌ ಮತ್ತು ಗುತ್ತಿಗೆದಾರರು ಕಾಮಗಾರಿ ಪೂರ್ಣಗಳಿಸುವ ಬಗ್ಗೆ ಏನೂ ಭರವಸೆ ನೀಡುತ್ತಿಲ್ಲ. ಜೊತೆಗೆ ತಮಗೆ ಬರಬೇಕಾಗಿರುವ ಬಾಕಿ ಬಿಲ್‌ಗಳ ಮೊತ್ತವನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.

600 ವಿದ್ಯಾರ್ಥಿಗಳ ಭವಿಷ್ಯ ತೂಗೂಯ್ಯಾಲೆ: ಈ ಎಲ್ಲಾ ಜಂಜಾಟದ ನಡುವೆ ವಿದ್ಯಾರ್ಥಿಗಳು ಹೈರಾಣವಾಗುತ್ತಿದ್ದಾರೆ. ಈವರೆಗೆ ಚಿಕ್ಕಬಳ್ಳಾಪುರ ಮೆಡಿಕಲ್‌ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಎಂಬಿಬಿಎಸ್‌ನ 200 ವಿದ್ಯಾರ್ಥಿಗಳು, ನರ್ಸಿಂಗ್‌ ನ 200 ವಿದ್ಯಾರ್ಥಿಗಳು ಸೇರಿ 400 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು ಈ ಬಾರಿ 3 ನೇವರ್ಷದ ದಾಖಲಾತಿಗಳು ಈ ಮಾಸದ ಅಂತ್ಯದಲ್ಲಿ ಆಗಿ ಮತ್ತೆ 100 ಮೆಡಿಕಲ್‌ ಹಾಗೂ 100 ನರ್ಸಿಂಗ್‌ ವಿದ್ಯಾರ್ಥಿಗಳು ಬರುತ್ತಾರೆ. ಆಗ ಒಟ್ಟು 600 ವಿದ್ಯಾರ್ಥಿಗಳು ಆಗುತ್ತಾರೆ.

ಪ್ರಸ್ತುತ ಮೆಡಿಕಲ್‌ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತಾಲ್ಲೂಕಿನ ಮುದ್ದೇನಹಳ್ಳಿ ಬಳಿ ಇರುವ ವಿಟಿಯು ಪ್ರಾದೇಶಿಕ ಸಂಶೋಧನಾ ಕಟ್ಟಡದಲ್ಲಿ ನಡೆಯುತ್ತಿದೆ. ಆದರೆ ಮೂಲಭೂತ ಸೌಲಭ್ಯಗಳು ವಿದ್ಯಾಥಿಗಳಿಗೆ ದೊರೆಯದೇ ಕಲಿಕೆಯಲ್ಲಿ ಗುಣಾತ್ಮಕ ಚಿಂತೆನೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಸಾಲು ಸಾಲದಂತೆ ತರಗತಿಗಳು, ಪ್ರಯೋಗ ಶಾಲೆಗಳು, ಅನಾಟಮಿ ಲ್ಯಾಬ್‌, ಮತ್ತಿತರ ಮೂಲ ಸೌಕರ್ಯಗಳ ಕೊರತೆ ಇದ್ದು ಇದು ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರುಗಳಿಗೆ, ಸಿಬ್ಬಂದಿಗೆ ಹಾಗೂ ಪೋಷಕರಿಗೆ ಬಿಸಿ ತುಪ್ಪವಾಗಿದೆ.

ಆಗಸ್ಟ್‌ 15ಕ್ಕೆ ಉದ್ಘಾಟನೆ ಆಗುವುದೇ?: ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಕಟ್ಟಡವನ್ನು ಆಗಸ್ಟ್‌ 15ರಂದು ಉದ್ಘಾಟಿಸಲಾಗುವುದು ಎಂದು ಇತ್ತೀಚೆಗೆ ಜಿಲ್ಲಾಧಿಕಾರಿ ಪಿ.ಎನ್‌.ರವೀದ್ರ ಅವರು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದರು. ಆದರೆ ಈಗಿರುವ ಪರಿಸ್ಥಿತಿಯನ್ನು ಗಮನಿಸದರೆ ಉದ್ಘಾಟನೆ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ ಎನ್ನಬಹುದು.

ಡಾ.ಸುಧಾಕರ್‌ ಅಸಮಾಧಾನ: ಮೆಡಿಕಲ್‌ ಕಾಲೇಜು ಶಿಫ್ಟ್‌ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಮಕ್ಕಳ ಭವಿಷ್ಯ ರೂಪಿಸ ಬೇಕು ಎಂಬ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ವೈದ್ಯಕೀಯ ಕಾಲೇಜು ಆರಂಭಿಸಲಾಯಿತು. ಈ ಭಾಗದ ಜನರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ಮೆಡಿಕಲ್‌ ಕಾಲೇಜನ್ನು ನನ್ನ ಶಾಸಕ ಸ್ಥಾನ ಪಣಕ್ಕಿಟ್ಟು ತಂದೆ. ಹಣ ಮಾಡಲೆಂದೆ ಬಂದಿರುವ ಸರ್ಕಾರ ಇದು. ಇವರಿಗೆ ಮಕ್ಕಳ ಭವಿಷ್ಯ ಎಲ್ಲಿ ಕಾಣುತ್ತದೆ. ಅಕ್ಷರ ಜ್ಞಾನ ಇಲ್ಲದವರನ್ನು ಎಂಎಲ್‌ಎ ಮಾಡಿದರೆ ಇದೇ ರೀತಿ ಆಗುವುದು ಎಂದು ಮಾಜಿ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್‌ ಅಸಮಾಧಾನ ವ್ಯಕ್ತಪಡಿಸಿದರು.

ಎಚ್‌ಎನ್‌ ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಕ್ರಮ: ಸಚಿವ ಭೋಸರಾಜು

ವೈದ್ಯಕಾಯ ಕಾಲೇಜು ಕಟ್ಟಡದ ಟೆಂಡರ್‌ ಮತ್ತು ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು ಎಸ್‌ಐಟಿ ತನಿಖೆಗೆ ವಹಿಸಲಾಗಿದೆ. ತನಿಖಾ ವರದಿ ಬಂದ ಬಳಿಕ ಕಾಲೇಜನ್ನು ಶೀಘ್ರದಲ್ಲೇ ಹೊಸ ಕಟ್ಟಡಕ್ಕೆ ಸ್ಥಲಾಂತರ ಮಾಡಲಾಗುವುದು. ಕಾಲೇಜಿನ ಮೇಲ್ಭಾಗದ ಡೂಮ್‌ ಕಾಮಗಾರಿ ಮಾಡುವಾಗ ಏನಾದರು ಅನಾಹುತವಾದರೆ ಕಷ್ಟ. ನಾನು ಮೆಡಿಕಲ್‌ ಸ್ಟೂಡೆಂಟ್‌ಗಳ ಪರ ಇದ್ದೇನೆ.
-ಪ್ರದೀಪ್‌ ಈಶ್ವರ್‌, ಶಾಸಕರು, ಚಿಕ್ಕಬಳ್ಳಾಪುರ