ನಕಲಿ ಲೋಕಾಯುಕ್ತ ಲೆಟರ್‌ಹೆಡ್ ಬಳಸಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಆರ್‌ಟಿಐ ಕಾರ್ಯಕರ್ತ ಮುರಳಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಈತ ನಕಲಿ ಅರಣ್ಯಾಧಿಕಾರಿ ಐಡಿ ಕಾರ್ಡ್ ಬಳಸಿ ಜನಸಾಮಾನ್ಯರಿಗೂ ವಂಚಿಸುತ್ತಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ.

ಬೆಂಗಳೂರು (ಅ.06): ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ನೋಟಿಸ್ ನೀಡಿ, ಬೆದರಿಸಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಆರೋಪಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತನನ್ನು ಆರ್‌ಟಿಐ (RTI) ಕಾರ್ಯಕರ್ತ ಮುರಳಿ ಎಂದು ಗುರುತಿಸಲಾಗಿದೆ.

ನಕಲಿ ಲೆಟರ್ ಹೆಡ್ ಬಳಸಿ ಬ್ಲ್ಯಾಕ್‌ಮೇಲ್:

ಬಂಧಿತ ಆರೋಪಿ ಮುರಳಿ, ಲೋಕಾಯುಕ್ತ ಸಂಸ್ಥೆಯ ಅಧಿಕೃತ ಲೆಟರ್‌ಹೆಡ್ ಅನ್ನು ನಕಲು ಮಾಡಿಕೊಳ್ಳುತ್ತಿದ್ದ. ಅದರಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿರುವಂತೆ ನಕಲಿ ಪತ್ರಗಳನ್ನು ಸಿದ್ಧಪಡಿಸುತ್ತಿದ್ದ. ನಂತರ ಆ ಪತ್ರಗಳನ್ನು ಸಂಬಂಧಪಟ್ಟ ಇಲಾಖೆಯ ಸರ್ಕಾರಿ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಕಳುಹಿಸಿ, ನಿಮ್ಮ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಬೆದರಿಸುತ್ತಿದ್ದ. ಲೋಕಾಯುಕ್ತ ಕೇಸ್‌ನಿಂದ ಪಾರು ಮಾಡುವುದಾಗಿ ನಂಬಿಸಿ ಅಧಿಕಾರಿಗಳಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ.

ಅರಣ್ಯಾಧಿಕಾರಿ ಸೋಗಿನಲ್ಲೂ ವಂಚನೆ:

ಆರೋಪಿ ಮುರಳಿ ಕೇವಲ ಲೋಕಾಯುಕ್ತ ಅಧಿಕಾರಿ ಸೋಗು ಮಾತ್ರವಲ್ಲದೆ, ತನ್ನ ಬಳಿ ನಕಲಿ ಅರಣ್ಯಾಧಿಕಾರಿ (Forest Officer) ಐಡಿ ಕಾರ್ಡ್ ಅನ್ನೂ ಇಟ್ಟುಕೊಂಡಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಈ ನಕಲಿ ಐಡಿ ಕಾರ್ಡ್ ತೋರಿಸಿ ಹಲವು ಕಡೆ ದರ್ಪ ತೋರಿ ಜನಸಾಮಾನ್ಯರು ಮತ್ತು ಅಧಿಕಾರಿಗಳನ್ನು ಯಾಮಾರಿಸುತ್ತಿದ್ದ.

ವಿಧಾನಸೌಧ ಪೊಲೀಸರ ಕಾರ್ಯಾಚರಣೆ:

ಮುರಳಿಯ ಈ ವಂಚನೆ ಕೃತ್ಯದ ಬಗ್ಗೆ ಖಚಿತ ಮಾಹಿತಿ ಹಾಗೂ ದೂರು ದಾಖಲಾದ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದ ವಿಧಾನಸೌಧ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ನಕಲಿ ದಾಖಲೆಗಳು ಮತ್ತು ಐಡಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ಇನ್ನೆಷ್ಟು ಜನ ಅಧಿಕಾರಿಗಳಿಗೆ ಇದೇ ರೀತಿ ವಂಚಿಸಿದ್ದಾನೆ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.