ಬೆಂಗ್ಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಸಿಎಸ್ ಮದ್ದು
ಬಿಬಿಎಂಪಿ ಸಮನ್ವಯ ಸಭೆಯಲ್ಲಿ ವಂದಿತಾ ಶರ್ಮಾ ನಿರ್ದೇಶನ, ಶೀಘ್ರ ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ
ಬೆಂಗಳೂರು(ನ.22): ಪಾಲಿಕೆ ವ್ಯಾಪ್ತಿಯ ಹೆಬ್ಬಾಳ, ಜಯದೇವ, ಸಿಲ್ಕ್ ಬೋರ್ಡ್ ಸೇರಿದಂತೆ ಪ್ರಮುಖ ಹತ್ತು ಜಂಕ್ಷನ್‌ಗಳಲ್ಲಿ ಬಾಕಿಯಿರುವ ಅಭಿವೃದ್ಧಿ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಂಚಾರ ದಟ್ಟಣೆ ನಿವಾರಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೋಮವಾರ ವಿಕಾಸಸೌಧದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಸಮನ್ವಯ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಸಿಲ್ಕ್ ಬೋರ್ಡ್ ಜಂಕ್ಷನ್, ಇಬ್ಬಲೂರು ಜಂಕ್ಷನ್, ಜಯದೇವ ಜಂಕ್ಷನ್, ಎಂ.ಎಂ.ಟೆಂಪಲ್ ಜಂಕ್ಷನ್ (ಟಿನ್ ಫ್ಯಾಕ್ಟರಿ), ಹೆಬ್ಬಾಳ ಜಂಕ್ಷನ್, ಗೊರಗುಂಟೆಪಾಳ್ಯ ಜಂಕ್ಷನ್, ಸಾರಕ್ಕಿ ಜಂಕ್ಷನ್, ಕೆ.ಎಸ್.ಲೇಔಟ್ ಜಂಕ್ಷನ್, ಕಾಡುಬೀಸನಹಳ್ಳಿ ಜಂಕ್ಷನ್ ಹಾಗೂ ಬನಶಂಕರಿ ಜಂಕ್ಷನ್‌ಗಳಲ್ಲಿ ತೆಗೆದುಕೊಳ್ಳಬೇಕಿರುವ ಅಭಿವೃದ್ಧಿ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು.
Narendra Modi ಬರ್ತಿದ್ದಾರೆ ಅಂತಾ ರಸ್ತೆ ಗುಂಡಿ ಮುಚ್ಚಿದ್ದಕ್ಕೆ ಸಂತೋಷ: ಡಿಕೆಶಿ
ನಗರದ ಪ್ರಮುಖ ರಸ್ತೆಗಳಲ್ಲಿ ಮಳೆಯ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆಯಾಗುವ ಸ್ಥಳಗಳನ್ನು ಸಂಚಾರಿ ಪೊಲೀಸ್ ವಿಭಾಗದಿಂದ ಗುರುತಿಸಿದ್ದಾರೆ. ಅಂತಹ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ದುರಸ್ತಿ ಪಡಿಸಬೇಕು. ಪ್ರಮುಖ ರಸ್ತೆಗಳಲ್ಲಿ ರಸ್ತೆ ಮಟ್ಟಕ್ಕಿಂತ ಎತ್ತರವಿರುವ 112 ಮ್ಯಾನ್‌ಹೋಲ್‌ಗಳಿಂದ ಅಪಘಾತಗಳಾಗುವ ಸಂಭವವಿದೆ ಎಂದು ಗುರುತಿಸಲಾಗಿದೆ. ಅದರಂತೆ, ಜಲಮಂಡಳಿ 53 ಒಳಚರಂಡಿಗಳನ್ನು ಸರಿ ಪಡಿಸಿದ್ದು, ಬಾಕಿ 59 ಒಳಚರಂಡಿಗಳನ್ನು ಕೂಡಲೇ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ನಿಂತಿರುವ ಅನಾಥ ವಾಹನಗಳನ್ನು ಸಂಚಾರಿ ಪೊಲೀಸ್ ಅಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳು ಸಮನ್ವಯಮಾಡಿಕೊಂಡು ಕೂಡಲೆ ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ರಜನೀಶ್ ಗೋಯಲ್, ಆಡಳಿತಗಾರರಾದ ರಾಕೇಶ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ, ಬಿಎಂ ಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಫರ್ವೇಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮೀಣ ರಸ್ತೆಗಳ ಕಳಪೆಗೆ ಓವರ್ ಲೋಡ್ ಶ್ರೀರಕ್ಷೆ!
ಶೀಘ್ರ ರಸ್ತೆ ಗುಂಡಿ ಮುಚ್ಚಿ
ನಗರದ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಲ್ಲಿ ಬಾಕಿಯಿರುವ ರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚಬೇಕು. ಸಂಚಾರಿ ಪೊಲೀಸ್ ವಿಭಾಗ ಗುರುತಿಸಿರುವ ಗುಂಡಿಗಳನ್ನು ಸಹ ಶೀಘ್ರಗತಿಯಲ್ಲಿ ಮುಚ್ಚಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.
ಬ್ಲಾಕ್‌ಸ್ಪಾಟ್ ತೆರವಿಗೆ ಸೂಚನೆ
ಈಗಾಗಲೇ ಗುರುತಿಸಲಾಗಿರುವ 107 ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕು. 210 ಕಡೆ ಬೀದಿ ದೀಪಗಳನ್ನು ಅಳವಡಿಸಬೇಕು. 47 ಕಡೆ ಬೀದಿ ದೀಪಗಳನ್ನು ಶೀಘ್ರದಲ್ಲೇ ದುರಸ್ತಿಪಡಿಸಬೇಕು. ಸಾರ್ವಜನಿಕರಿಗೆ ಸಮಸ್ಯೆಯುಂಟಾಗುತ್ತಿರುವ 33 ಕಡೆಗಳಲ್ಲಿ ಕಸ ಸುರಿಯುವ ಸ್ಥಳಗಳನ್ನು (ಬ್ಲಾಕ್ ಸ್ಪಾಟ್) ತೆರವುಗೊಳಿಸಬೇಕು. 22 ಕಡೆ ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಜಲಮಂಡಳಿಯಿಂದ ಪೈಪ್‌ಗಳನ್ನು ಅಳವಡಿ ಸಬೇಕು. 157 ಕಡೆ ಪಾದಚಾರಿ ಮಾರ್ಗಗಳಲ್ಲಿ ಪೆಟ್ಟಿಗೆ ಅಂಗಡಿಗಳಿದ್ದು, 51 ಕಡೆ ಕಟ್ಟಡ ಭಗ್ನಾವಶೇಷಗಳನ್ನು ಹಾಕಲಾಗಿದೆ. ಅವುಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು. 330 ಕಡೆ ಹೈ-ಮಸ್ಟ್ ಲೈಟ್ ಅಳವಡಿ ಸಬೇಕು. 427 ಕಡೆ ಅವೈಜ್ಞಾನಿಕ ರಸ್ತೆ ಉಬ್ಬುಗಳಿರುವುದನ್ನು ಕೂಡಲೇ ಸರಿಪಡಿಸಬೇಕೆಂದು ಸೂಚಿಸಿದರು.