ಕಾವೇರಿ ಎಸ್‌.ಎಸ್‌.

 ಬೆಂಗಳೂರು [ಮಾ.18]:  ರಾಜ್ಯದಲ್ಲಿ ಕೊರೋನಾ ವೈರಸ್‌ (ಕೋವಿಡ್‌ 19) ಹಾಗೂ ಕೋಳಿಜ್ವರಕ್ಕೆ ಕೋಳಿ ಉದ್ಯಮ ಅಕ್ಷರಶಃ ನಲುಗಿದೆ. ಕೋಳಿ ಮಾಂಸ, ಮೊಟ್ಟೆಗಳ ದರ ಇನ್ನಷ್ಟುಕುಸಿತವಾಗಿದ್ದು, ಸದ್ಯ ಸಗಟು ಮಾರುಕಟ್ಟೆಯಲ್ಲಿ ಲೈವ್‌ ಚಿಕನ್‌ ದರ ಕೆ.ಜಿ.ಗೆ 25 ರು., ಒಂದು ಮೊಟ್ಟೆದರ 2.90ರಿಂದ 2.20 ರು.ಗೆ ಇಳಿದು ಕೋಳಿ ಸಾಕಾಣಿಕೆದಾರರಿಗೆ ದಿಕ್ಕು ತೋಚದಂತಾಗಿದೆ.

ಕೋಳಿ ಮಾಂಸ, ಮೊಟ್ಟೆಗಳ ವಿಪರೀತ ದರ ಕುಸಿತದಿಂದ ಕರ್ನಾಟಕದ ಕೋಳಿ ಸಾಕಾಣಿಕೆದಾರರು ಹಿಂದೆಂದೂ ಇಲ್ಲದ ನಷ್ಟಕ್ಕೆ ಗುರಿಯಾಗಿದ್ದಾರೆ. ಕೋಳಿ ಮಾಂಸ ತಿಂದರೆ ಮಹಾಮಾರಿ ಕೊರೋನಾ ಸೋಂಕು ಹರಡಬಹುದು ಎಂಬ ಕಾರಣದಿಂದ ಜನರು ಕೋಳಿ ಸೇವನೆಯಿಂದ ದೂರವಾಗಿದ್ದಾರೆ. ಈ ಕಾರಣದಿಂದ ಮಾಂಸ ಮತ್ತು ಮೊಟ್ಟೆಗಳ ವ್ಯಾಪಾರವೇ ನಿಂತು ಹೋಗುವ ಸ್ಥಿತಿಗೆ ತಲುಪಿದೆ. ರಾಜ್ಯದಲ್ಲಿ ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಮುಂಬರುವ ದಿನಗಳಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆಸಿಗುವುದು ಕಷ್ಟವಾಗುವ ಆತಂಕ ಹುಟ್ಟಿಕೊಂಡಿದೆ.

ದೇಶದಲ್ಲಿ ಸುಮಾರು 2.2 ಲಕ್ಷ ಮಾಂಸದ ಕೋಳಿ ಸಾಕುವ ರೈತರಲ್ಲಿ ಬಹುತೇಕರು ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು ಕೋಳಿ ಸಾಕುತ್ತಿದ್ದಾರೆ. ಇವರಿಗೆ ಕಂಪನಿಗಳು ನೀಡುತ್ತಿರುವ ದರ ತೀರಾ ಕಡಿಮೆ. ಈಗ ಈ ಆದಾಯಕ್ಕೂ ಹೊಡೆತ ಬಿದ್ದಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಿಕ್ಕಟ್ಟಿನಿಂದ ಕುಕ್ಕುಟೋದ್ಯಮ ಪ್ರತಿ ದಿನ 160 ಕೋಟಿ ರು. ನಷ್ಟಅನುಭವಿಸುತ್ತಿದೆ. ದೇಶದ ಜಿಡಿಪಿ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದ ಕೋಳಿ ಉದ್ಯಮ ಈಗ ಸಂಪೂರ್ಣವಾಗಿ ಕುಸಿದಿರುವುದು ಕೋಳಿ ಸಾಕಾಣಿಕೆದಾರರನ್ನು ಚಿಂತೆಗೀಡು ಮಾಡಿದೆ. ಜತೆಗೆ ಈ ಉದ್ಯಮದ 2.75 ಕೋಟಿ ನೌಕರರು ಸಹ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎನ್ನುತ್ತಾರೆ ಉದ್ದಿಮೆದಾರರು.

ಕೋಳಿ ಮೊಟ್ಟೆಗೂ ಇಲ್ಲ ಬೇಡಿಕೆ:

ರೋಗದ ಭೀತಿಯಿಂದ ಗ್ರಾಹಕರು ಮೊಟ್ಟೆಸೇವನೆಗೂ ಮುಂದಾಗುತ್ತಿಲ್ಲ. ಸಗಟು ಮಾರುಕಟ್ಟೆಯಲ್ಲಿ ಫೆಬ್ರವರಿ ಮೊದಲ ವಾರದಲ್ಲಿ 3.90 ರು. ಇದ್ದ ದರ, ನಂತರದ ದಿನಗಳಲ್ಲಿ 4.45 ರು. ರವರೆಗೆ ಏರಿಕೆಯಾಗಿತ್ತು. ಫೆ.21ರ ನಂತರ 3.85 ರು.ಕ್ಕೆ ಇಳಿಕೆಯಾಗಿದ್ದ ದರ ಚೇತರಿಕೆ ಕಂಡಿಲ್ಲ. ಕಳೆದ ವಾರ ಒಂದು ಮೊಟ್ಟೆಗೆ 3.30 ರು. ಇದ್ದದ್ದು ಸದ್ಯ 2.90ಕ್ಕೆ ತಲುಪಿದೆ.

ಮೊಟ್ಟೆ, ಮಾಂಸದಿಂದ ಬರುತ್ತಾ ಕೊರೋನಾ ..?...

ಮೊಟ್ಟೆಹಾಗೂ ಕೋಳಿ ತಿನ್ನುವವರು ಕಡಿಮೆಯಾಗಿದ್ದಾರೆ. 100 ಮೊಟ್ಟೆಗೆ 300 ರಿಂದ ಈಗ 220 ರು.ಕ್ಕೆ ಇಳಿಕೆಯಾಗಿದೆ. ಲೈವ್‌ ಚಿಕನ್‌ ಕೆ.ಜಿ.ಗೆ 25 ರು. ನಿಗದಿಯಾಗಿದೆ. 100ಕ್ಕೆ 4 ಕೋಳಿ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ ಉಚಿತವಾಗಿ ನೀಡಿದರೂ ಜನ ಸ್ವೀಕರಿಸುತ್ತಿಲ್ಲ. ಪ್ರತಿ ವರ್ಷ ಯುಗಾದಿ ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ ವಹಿವಾಟು ಚೆನ್ನಾಗಿ ಆಗುತ್ತಿತ್ತು. ಆದರೆ, ಈ ಬಾರಿ ಉದ್ಯಮವೇ ನಷ್ಟದಲ್ಲಿದೆ ಎನ್ನುತ್ತಾರೆ ಕೋಳಿ ಸಾಕಾಣಿಕೆದಾರರು.

ಕರ್ನಾಟಕದಲ್ಲಿ ದಿನಕ್ಕೆ ಅಂದಾಜು 100 ಟನ್‌ ಕೋಳಿ ಮಾಂಸ ಖರೀದಿಯಾಗುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲೂ ಜನರು ಭಯಭೀತರಾಗಿದ್ದಾರೆ. ರಾಜ್ಯದಲ್ಲಿ ದಿನವೊಂದಕ್ಕೆ 56 ಸಾವಿರ ಮಾರಾಟವಾಗುತ್ತಿದ್ದ ಮೊಟ್ಟೆಪ್ರಮಾಣ ಇದೀಗ 10ರಿಂದ 20 ಸಾವಿರಕ್ಕೆ ಇಳಿಕೆಯಾಗಿದೆ. ಬೇಕರಿ, ಶ್ಯಾಂಪೂ ತಯಾರಿಸಲು ಉದ್ಯಮಗಳೂ ಖರೀದಿಸುತ್ತಿಲ್ಲ ಎಂದು ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಸಿ.ಮಂಜುನಾಥ್‌ ಮಾಹಿತಿ ನೀಡಿದರು.