ಮದುವೆ ದಿನ ವರ ಕುಡಿದು ಬಂದಿದ್ದಕ್ಕೆ ಹುಡುಗಿ ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಈ ನಿರ್ಧಾರದಿಂದ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದು, ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಆದರೆ, ಜಿಲ್ಲಾ ಎಸ್‌ಪಿ ವಧುವಿನ ನಿರ್ಧಾರಕ್ಕೆ ಮೆಚ್ಚಿ ಸನ್ಮಾನ ಮಾಡಿದ್ದಾರೆ.
ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆ ದಿನ ಗಂಡು ಫುಲ್ ಕುಡಿದು ಬಂದಿದ್ದಕ್ಕೆ, 22 ವರ್ಷದ ವಧು ಮುಸ್ಕಾನ್ ಪ್ರಧಾನ್ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಜೂನ್ 23ರಂದು ಚಂಪಾ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಮುಸ್ಕಾನ್ ಪ್ರಧಾನ್ ಜೊತೆ ಮದುವೆಗೆ ಘೋಖ್ರಾ ಗ್ರಾಮದ 24 ವರ್ಷದ ಶರತ್ ರಾಮ್ ತನ್ನ ಬಳಗದವರ ಜೊತೆ ಬಂದಿದ್ದನು.
ಸಂಜೆ 4 ಗಂಟೆ ಸುಮಾರಿಗೆ ವಧುವಿನ ಮನೆಗೆ ದಿಬ್ಬಣ ಬಂದಾಗ, ಗಂಡು ಶರತ್ ರಾಮ್ ನಿಲ್ಲೋಕೂ ಆಗದಷ್ಟು ಕುಡಿದಿದ್ದ. ಗಂಡನ ಈ ಸ್ಥಿತಿ ನೋಡಿ ಮುಸ್ಕಾನ್, ಈ ಮದುವೆ ಬೇಡವೇ ಬೇಡ ಅಂತ ಅಲ್ಲೇ ನಿರ್ಧಾರ ತೆಗೆದುಕೊಂಡಳು. ಇದಕ್ಕೂ ಮುಂಚೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೂ ಶರತ್ ಕುಡಿದೇ ಬಂದಿದ್ದನಂತೆ. ಆಗಲೇ ಮುಸ್ಕಾನ್ ಅವನಿಗೆ ಎಚ್ಚರಿಕೆ ಕೊಟ್ಟಿದ್ದಳು. 'ಇನ್ನೊಮ್ಮೆ ಕುಡಿಯಲ್ಲ' ಅಂತ ಶರತ್ ಮಾತು ಕೂಡ ಕೊಟ್ಟಿದ್ದ. ಆದರೆ ಮದುವೆ ದಿನವೂ ಇದೇ ಕಥೆ ರಿಪೀಟ್ ಆಗಿದ್ದರಿಂದ, ಮುಸ್ಕಾನ್ ಈ ಕಠಿಣ ನಿರ್ಧಾರಕ್ಕೆ ಬಂದಳು ಅಂತ ಚಂಪಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಶೋಕ್ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಮದುವೆ ಮಂಟಪದಲ್ಲಿ ಗಲಾಟೆ
ಮುಸ್ಕಾನ್ ಈ ನಿರ್ಧಾರ ಪ್ರಕಟಿಸುತ್ತಿದ್ದಂತೆ, ಎರಡು ಕುಟುಂಬಗಳ ಸದಸ್ಯರು ಮತ್ತು ಮದುವೆಗೆ ಬಂದಿದ್ದ ಅತಿಥಿಗಳ ನಡುವೆ ದೊಡ್ಡ ಜಗಳವೇ ಶುರುವಾಯ್ತು. ಎರಡೂ ಕಡೆಯ ಹಿರಿಯರು ವಿಷಯ ಬಗೆಹರಿಸಲು ಮಾತಾಡುತ್ತಿದ್ದಾಗ, ಗಂಡನ ಕಡೆಯ ಕೆಲ ಯುವಕರು ಮತ್ತು ವಧುವಿನ ಕುಟುಂಬಸ್ಥರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯ್ತು. ಈ ಗಲಾಟೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ವ್ಯಸನದ ವಿರುದ್ಧ ಧೈರ್ಯದ ನಿಲುವು ತೆಗೆದುಕೊಂಡ ಮುಸ್ಕಾನ್‌ಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಪಾಂಡೆ ತಮ್ಮ ಕಚೇರಿಗೆ ಕರೆಸಿ ಸನ್ಮಾನಿಸಿದ್ದಾರೆ. ಕುಡಿತದ ವಿರುದ್ಧ ವಧು ತೆಗೆದುಕೊಂಡ ಈ ದಿಟ್ಟ ನಿರ್ಧಾರಕ್ಕೆ ಸಮಾಜದಲ್ಲಿ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿದೆ.


