ಸಮಸಮಾಜದ ಕನಸು ಇನ್ನೂ ಪೂರ್ಣವಾಗಿ ನನಸಾಗಿಲ್ಲ. ಮಂಗಳ ಗ್ರಹಕ್ಕೆ ಹೋಗಿ ಬಂದರೆ, ₹100ರಿಂದ ₹1000 ಕೋಟಿ ಸಿನೆಮಾಗಳನ್ನು ಮಾಡಿದರೆ ಉತ್ತಮ ಸಮಾಜ(ದೇಶದ ಅಭಿವೃದ್ಧಿ) ಸಾಧ್ಯವಿಲ್ಲ ಎಂದು ಅಹಿಂಸಾ ಚೇತನ್ ಹೇಳಿದರು.
ಚಾಮರಾಜನಗರ (ಮೇ.13): ಮಂಗಳ ಗ್ರಹಕ್ಕೆ ಹೋಗಿ ಬಂದರೆ, ₹100ರಿಂದ ₹1000 ಕೋಟಿ ಸಿನೆಮಾಗಳನ್ನು ಮಾಡಿದರೆ ಉತ್ತಮ ಸಮಾಜ(ದೇಶದ ಅಭಿವೃದ್ಧಿ) ಸಾಧ್ಯವಿಲ್ಲ ಎಂದು ಅಹಿಂಸಾ ಚೇತನ್ ಹೇಳಿದರು. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಾಕಾರಗೊಳಿಸಲು ಸಮಸಮಾಜ ಕನಸನ್ನು ಕಂಡರು. ನಾವೆಲ್ಲರೂ ಸಮಸಮಾಜ ಕಟ್ಟಿದಾಗ ಮಾತ್ರ ಅಂಬೇಡ್ಕರ್ ಅವರ ಕನಸು ನನಸಾಗಿಸಲು ಸಾಧ್ಯ ಎಂದು ಹೇಳಿದರು.

ಜಾತಿ ತಾರತಮ್ಯ, ಅಸ್ಪೃಶ್ಯತೆ ಇಂದಿಗೂ ಅಲ್ಲಲ್ಲಿ ಕಂಡು ಬರುತ್ತಿದೆ. ಸಮಸಮಾಜದ ಕನಸು ಇನ್ನೂ ಪೂರ್ಣವಾಗಿ ನನಸಾಗಿಲ್ಲ. ಅದಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ದೇಶದಲ್ಲಿ ಕೇವಲ ಕೆಲವರ ಕೈಯಲ್ಲಿ ಸಂಪತ್ತು ಇರದೆ ಆರ್ಥಿಕ ಸಮಾನತೆ ಇರಬೇಕಿದೆ, ಉತ್ತಮ ಸಮಾಜ ಕಟ್ಟಬೇಕು, ಅದು ನಮ್ಮೆಲ್ಲರ ಜವಾಬ್ದಾರಿ, ಅಂಬೇಡ್ಕರ್ ಅವರು ಮಾಡಿ ತೋರಿಸಿದ್ದಾರೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಸಾಗಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್, ಕಾನ್ಶಿರಾಂ ಅವರ ವಿಚಾರಗಳನ್ನು ಬಹಳ ಗಟ್ಟಿಯಾಗಿ ರಾಜ್ಯದಲ್ಲಿ ಉಳಿಸಿರುವುದು ಇದೇ ಚಾಮರಾಜನಗರದ ಜನತೆ. ಅಂಬೇಡ್ಕರ್ ಅವರ ಸಂವಿಧಾನದಿಂದ ದೇಶಕ್ಕೆ ಒಳ್ಳೆಯದು ಆಗಿದೆ, ಅವರನ್ನು ಸಂವಿಧಾನ ಶಿಲ್ಪಿಗೆ ಸೀಮಿತ ಮಾಡಿರುವುದು ಬಹಳ ನೋವಿನ ಸಂಗತಿಯಾಗಿದೆ. ಅವರು ಒಂದು ಸಂವಿಧಾನ ಅಲ್ಲ, 100 ದೇಶಗಳ ಸಂವಿಧಾನ ಬರೆಯುವ ಸಾಮಾರ್ಥ್ಯ ಅವರಲ್ಲಿತ್ತು ಎಂದರು.
ಸರ್ವರಿಗೂ ಸಮಾನತೆ
ಅಂಬೇಡ್ಕರ್ ಅವರ ಪೋಸ್ಟರ್‌ಗಳಲ್ಲಿ, ಪ್ರತಿಮೆಗಳಲ್ಲಿ ಅಂಬೇಡ್ಕರ್ ವಾದ ಸಿಗಲ್ಲ. ನನ್ನನ್ನು ಪೂಜಿಸಬೇಡಿ, ನನ್ನನ್ನು ಓದಿ ಎಂದು ಅವರೇ ಹೇಳಿದ್ದಾರೆ. ಅವರ ವಿಚಾರಗಳನ್ನು ಜನರ ಮುಂದೆ ಇಡದಿದ್ದರೆ ಅಂಬೇಡ್ಕರ್ ಅವರನ್ನು ಪ್ರತಿಮೆಗೆ, ಸಂವಿಧಾನ ಶಿಲ್ಪಿಗೆ ಸೀಮಿತ ಮಾಡಿಬಿಡುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗಿಪೆದ್ದಿಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದಲ್ಲಿ ಸರ್ವರಿಗೂ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಅಂಬೇಡ್ಕರ್ ಅವರು ಬಾಲ್ಯದಲ್ಲಿ ತುಂಬಾ ಕಷ್ಟದಿಂದ ವಿದ್ಯಾಬ್ಯಾಸ ಮಾಡಿದರು, ನಮಗಾಗಿ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅಂಬೇಡ್ಕರ್ ಬಡಾವಣೆ ನಿವಾಸಿಗಳು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಎಸ್ಪಿ ಮಾಡುವ ಮೂಲಕ ಅವರನ್ನು ಜೀವಂತವಾಗಿಡುವ ಕೆಲಸ ಮಾಡಬೇಕು ಎಂದರು.


