ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಹೊಳೆನರಸೀಪುರ ಶೋಕಸಾಗರದಲ್ಲಿ ಮುಳುಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಪೆರೋಲ್ ಸಿಗುವುದು ಅನುಮಾನವಾಗಿದ್ದು, ಜೈಲಿನಲ್ಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತ್ಯಕ್ರಿಯೆ ವೀಕ್ಷಿಸಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.

ಬೆಂಗಳೂರು/ಹಾಸನ (ಜು.20): ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ (Former PM HD Deve Gowda) ಪತ್ನಿ ಚೆನ್ನಮ್ಮ ಅವರ ನಿಧನದಿಂದಾಗಿ ದೊಡ್ಡಗೌಡರ ಕುಟುಂಬ ಮಾತ್ರವಲ್ಲದೆ ಇಡೀ ಹೊಳೆನರಸೀಪುರ ಶೋಕಸಾಗರದಲ್ಲಿ ಮುಳುಗಿದೆ. ಇಂದು (ಭಾನುವಾರ) ಮಧ್ಯಾಹ್ನ ಚೆನ್ನಮ್ಮ ಅವರ ಅಂತ್ಯಕ್ರಿಯೆ (Funeral) ನೆರವೇರಲಿದ್ದು, ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Central Jail) ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಸ್ಥಿತಿ ಏನಾಗಲಿದೆ ಎಂಬ ಕುತೂಹಲ ಮೂಡಿದೆ.

ಜೈಲಿನಲ್ಲೇ ದರ್ಶನಕ್ಕೆ ವ್ಯವಸ್ಥೆ?

ಪ್ರಜ್ವಲ್ ರೇವಣ್ಣ ಪ್ರಸ್ತುತ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪದ (Serious Misconduct Allegations) ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಾನೂನು ಪ್ರಕ್ರಿಯೆಗಳ ಪ್ರಕಾರ, ಸಜಾ ಕೈದಿಯಾಗಿದ್ದರೆ ಪೆರೋಲ್ (Parole) ಪಡೆಯಲು ಕನಿಷ್ಠ 2 ವರ್ಷಗಳ ಶಿಕ್ಷೆ ಪೂರೈಸಿರಬೇಕು. ಆದರೆ ಪ್ರಜ್ವಲ್‌ಗೆ ಶಿಕ್ಷೆ ಪ್ರಕಟವಾಗಿ ಎರಡು ವರ್ಷ ಪೂರ್ಣಗೊಳ್ಳದ ಮತ್ತು ಪ್ರಕರಣದ ಗಂಭೀರತೆಯನ್ನು (Severity of Case) ಪರಿಗಣಿಸಿ ನ್ಯಾಯಾಲಯವು ಹೊರಗೆ ಹೋಗಲು ಅನುಮತಿ ನೀಡುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಪೆರೋಲ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ, ಪ್ರಜ್ವಲ್ ರೇವಣ್ಣ ಅವರು ಮಾನವೀಯತೆಯ ಆಧಾರದ ಮೇಲೆ (Humanitarian Grounds) ಅಜ್ಜಿಯ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ವೀಕ್ಷಿಸಲು ಜೈಲು ಅಧಿಕಾರಿಗಳಿಗೆ ಮನವಿ ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಅವರು ಮನವಿ ಸಲ್ಲಿಸಿದರೆ, ಜೈಲಿನಲ್ಲೇ ಟಿವಿ ಅಥವಾ ವಿಡಿಯೋ ಕಾನ್ಫರೆನ್ಸ್ (Video Conference) ಮೂಲಕ ಅಂತ್ಯಕ್ರಿಯೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಕಾರಾಗೃಹ ಇಲಾಖೆ ಡಿಜಿ ಅಲೋಕ್ ಕುಮಾರ್ (DG Prisons Alok Kumar) ಮಾಹಿತಿ ನೀಡಿದ್ದಾರೆ.

ಅಂತ್ಯಕ್ರಿಯೆಯ ವೇಳಾಪಟ್ಟಿ

ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಕುಟುಂಬ ಸದಸ್ಯರಿಂದ ಅಂತಿಮ ಪೂಜೆ (Final Rituals) ನೆರವೇರಲಿದೆ. ತದನಂತರ ಪಾರ್ಥಿವ ಶರೀರವನ್ನು ಮಧ್ಯಾಹ್ನ 12 ಗಂಟೆಗೆ ಹೊಳೆನರಸೀಪುರ ಹೊರವಲಯದ ಅಂತ್ಯಕ್ರಿಯೆ ಜಾಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅವರ ಕಿರಿಯ ಪುತ್ರ ರಮೇಶ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ ಎಂದು ಅವರ 2ನೇ ಪುತ್ರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಹೊಳೆನರಸೀಪುರ ಬಂದ್:

ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಹೊಳೆನರಸೀಪುರದಲ್ಲಿ (Holenarasipura) ಇಂದು ಸ್ವಯಂಪ್ರೇರಿತ ಬಂದ್ ಆಚರಿಸಲಾಗುತ್ತಿದೆ. ಈ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ, ಅಮ್ಮನಂತಿದ್ದ ಚೆನ್ನಮ್ಮ ಅವರ ಅಗಲಿಕೆಗೆ ಸಂತಾಪ ಸೂಚಿಸಿ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ್ದಾರೆ. ಇಡೀ ತಾಲೂಕಿನ ಜನತೆ ತಮ್ಮ ಪ್ರೀತಿಯ 'ದೊಡ್ಡಮ್ಮ'ನ ಅಂತಿಮ ದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಇದುವರೆಗೆ ನ್ಯಾಯಾಲಯಕ್ಕಾಗಲಿ ಅಥವಾ ಜೈಲು ಅಧಿಕಾರಿಗಳಿಗಾಗಲಿ ಯಾವುದೇ ಅಧಿಕೃತ ಅರ್ಜಿ ಸಲ್ಲಿಸಿಲ್ಲ. ಆದರೆ ಸೆಲ್‌ನಲ್ಲಿಯೇ (Cell) ಅಂತ್ಯಕ್ರಿಯೆ ವೀಕ್ಷಿಸಲು ಅವರಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.