ಎಲ್ ನಿನೋ ಪರಿಣಾಮ ಕರ್ನಾಟಕ ಸೇರಿದಂತೆ ಭಾರತದಲ್ಲಿ ಮಳೆ ಸಮಸ್ಯೆ ತೀವ್ರಗೊಳ್ಳುತ್ತಿದೆ. ಪರಿಣಾಮ ಎಲ್ಲೆಡೆ ನೀರಿನ ಸಮಸ್ಯೆ ಎದುರಾಗುವ ಸೂಚನೆ ಈಗಲೇ ಸಿಕ್ಕಿದೆ. ಕರ್ನಾಟಕದಲ್ಲಿ ಶೇಕಡಾ 60ರಷ್ಟು ಮಳೆ ಕೊರತೆಯಾಗಿದ್ದು, ನೀರಿನ ಹಾಹಾಕಾರ ಶೀಘ್ರದಲ್ಲೇ ಶುರುವಾಗಲಿದೆ.

ಬೆಂಗಳೂರು (ಜು.20) ರಾಜ್ಯದಲ್ಲಿ ಶೇ.60ರಷ್ಟು ಮಳೆ ಕೊರತೆ ಎದುರಾಗಿದೆ. ಒಟ್ಟು 178 ತಾಲೂಕುಗಳಲ್ಲಿ ಮಳೆ ಕೊರತೆ ಇದ್ದು, 158 ತಾಲೂಕುಗಳಲ್ಲಿ ತೀರಾ ಸಾಧಾರಣ ಮಳೆ ಸುರಿದಿದೆ. 20 ತಾಲೂಕುಗಳಲ್ಲಿ ಮಳೆ ಆಗಿಲ್ಲ. ವಿಜಯನಗರ ಜಿಲ್ಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಭಾನುವಾರ ವಿಧಾನಸೌಧದಲ್ಲಿ ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳೊಂದಿಗೆ ವರ್ಚುಯಲ್‌ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಇಂದು ಬರ ಪರಿಸ್ಥಿತಿ ಕುರಿತು ವಿವಿಧ ಇಲಾಖೆಗಳ ಜೊತೆಗೆ ಚರ್ಚಿಸಿದ್ದೇವೆ. ಎಲ್ಲರೂ ಒಟ್ಟಾಗಿ ಟೀಮ್ ಕರ್ನಾಟಕವಾಗಿ ಕಾರ್ಯನಿರ್ವಹಿಸಲು ಸೂಚಿಸಿದ್ದೇನೆ. ರಾಜ್ಯದ ಜಲಾಶಯಗಳಲ್ಲಿ ಶೇ.40ರಷ್ಟು ಮಾತ್ರ ನೀರು ಶೇಖರಣೆಯಾಗಿದ್ದು, ಕೇವಲ ಕುಡಿಯುವ ನೀರಿಗೆ ಮಾತ್ರ ಬಳಸಲಾಗುವುದು ಎಂದು ಹೇಳಿದರು.

ಅಣೆಕಟ್ಟೆಗಳಲ್ಲಿ ನೀರು ಬಂದರೆ ಮಾತ್ರ ಸಮಿತಿಗಳು ಸಭೆ ಮಾಡಬೇಕು. ನೀರಿನ ಪ್ರಮಾಣದ ಬಗ್ಗೆ ಸಮಿತಿಯವರು ಆಗಾಗ್ಗೆ ರೈತರಿಗೆ ಮನದಟ್ಟು ಮಾಡಬೇಕು. ಬೆಳೆ ಹಾಕಿ ನೀರು ಬಿಡಿ ಎಂದರೆ ಬಿಡಲು ಕಷ್ಟವಾಗುತ್ತದೆ. ಹೀಗಾಗಿ ಬೆಳೆ ಹಾಕಬಾರದು ಎಂದು ಮನವಿ ಮಾಡುತ್ತೇವೆ ಎಂದರು.

450 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರು

ಜಲವಿದ್ಯುತ್ ಕೇವಲ ಶೇ.23ರಷ್ಟು ಮಾತ್ರ ಇದೆ. ಎಲ್ಲಾ ತಾಲೂಕುಗಳಲ್ಲಿ ಅಂತರ್ಜಲ ಪ್ರಮಾಣದ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಕೆರೆಗಳಲ್ಲಿ ನೀರಿನ ಮಟ್ಟ ಕುಸಿದಿದೆ. 3,817 ಸಣ್ಣ ನೀರಾವರಿ ಕೆರೆಗಳ ಪೈಕಿ, 3,235 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರಿದೆ. 32,504 ಜಿಪಂ ಕೆರೆಗಳ ಪೈಕಿ 27,450 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರಿದೆ. ಈಗಾಗಲೇ ಗ್ರಾಮೀಣ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಕುಡಿಯುವ ನೀರಿಗಾಗಿ ತಲಾ 1 ಕೋಟಿ ರು. ಅನುದಾನ ಘೋಷಣೆ ಮಾಡಲಾಗಿದೆ. 379 ಕೋಟಿ ರು. ನೀಡಲಾಗಿದೆ. ಹಣದ ಕೊರತೆ ಇಲ್ಲ. ಶಾಸಕರ ನೇತೃತ್ವದಲ್ಲಿ ಸಭೆ ಮಾಡಿ ಹಣ ಬಳಕೆಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮನರೇಗಾ ವಿಚಾರದಲ್ಲಿ ಕೇಂದ್ರ ಸರ್ಕಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೂ ವಿಬಿ ಗ್ರಾಮ್ ಜಿ ಯೋಜನೆಯಲ್ಲಿ ಶೇ.40 ಅನುದಾನವನ್ನು ರಾಜ್ಯ ಸರ್ಕಾರ ಹಾಕಬೇಕಿದೆ. ಕೇಂದ್ರ ಸರ್ಕಾರ ಯಾವೆಲ್ಲ ಯೋಜನೆ ಕೈಗೊಳ್ಳಬಹುದು ಎಂದು ತಿಳಿಸಿದ್ದು, ಆದಷ್ಟು ಸಮುದಾಯ, ಮೂಲ ಸೌಕರ್ಯ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಿವಕುಮಾರ್‌ ಹೇಳಿದರು.

ವಾಡಿಕೆಗಿಂತ ಕಡಿಮೆ ಮಳೆ

ರಾಜ್ಯದಲ್ಲಿ ಜು.18ರ ವರೆಗೆ ಮುಂಗಾರು ಮಳೆ ವಾಡಿಕೆಗಿಂತ ಶೇ.39ರಷ್ಟು ಕಡಿಮೆಯಾಗಿದೆ. ಮಲೆನಾಡಿನಲ್ಲಿ ಅತ್ಯಧಿಕ ಶೇ.43, ಕರಾವಳಿಯಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.33 ಮತ್ತು ದಕ್ಷಿಣ ಒಳನಾಡಿನಲ್ಲಿ ಶೇ.31ರಷ್ಟು ಮಳೆ ಕೊರತೆ ದಾಖಲಾಗಿದೆ. 26 ಜಿಲ್ಲೆಗಳ ಒಟ್ಟು 158 ತಾಲೂಕುಗಳಲ್ಲಿ ಕೊರತೆ ಹಾಗೂ 20 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಕಂಡು ಬಂದಿದೆ. 51 ತಾಲೂಕುಗಳಲ್ಲಿ ಮಾತ್ರ ವಾಡಿಕೆ ಮಳೆಯಾಗಿದೆ. ವಿಜಯನಗರ ಜಿಲ್ಲೆ ತೀವ್ರ ಮಳೆ ಕೊರತೆ (ಶೇ.67) ದಾಖಲಿಸಿದೆ. ರಾಜ್ಯದ 169 ಹೋಬಳಿಗಳಲ್ಲಿ ವಾಡಿಕೆ ಮಳೆಯಾಗಿದ್ದು, 509 ಹೋಬಳಿಗಳಲ್ಲಿ ಕೊರತೆ ಹಾಗೂ 118 ಹೋಬಳಿಗಳಲ್ಲಿ ತೀವ್ರ ಕೊರತೆ ದಾಖಲಾಗಿದೆ.

ಫೋನ್‌ ಕರೆಯಲ್ಲಿ ನಿರತ ಡಿಸಿಗೆ ತರಾಟೆ

ವಿಡಿಯೋ ಸಂವಾದದ ವೇಳೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಬರ ಕುರಿತಂತೆ ವಿಷಯ ಮಂಡಿಸುವಾಗ ಜಿಲ್ಲಾಧಿಕಾರಿಯೊಬ್ಬರು ಪೋನ್‌ ಕರೆಯಲ್ಲಿ ನಿರತರಾಗಿದ್ದರು. ಇದನ್ನು ಗಮನಿಸುತ್ತಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಕ್ಷಣ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. ತುರ್ತು ಇದ್ದರೆ ಹೊರಗೆ ಹೋಗಿ ಮಾತನಾಡುವುದು ಒಳ್ಳೆಯದು. ಉಪಮುಖ್ಯಮಂತ್ರಿ ಅವರು ಸರ್ಕಾರದ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸರ್ಕಾರದ ಆಲೋಚನೆ ತಿಳಿಸುವಾಗ ಗೌರವ ನೀಡುವುದು ನಿಮ್ಮ ಜವಾಬ್ದಾರಿ ಎಂದು ಆ ಜಿಲ್ಲಾಧಿಕಾರಿಗೆ ಕ್ಲಾಸ್‌ ತೆಗೆದುಕೊಂಡರು.

ಖುದ್ದು ಬರ ಪರಿಸ್ಥಿತಿ ಪರಿಶೀಲನೆ ಮಾಡ್ತೀನಿ:

ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನೂ ಸಮಯ ಹೊಂದಿಸಿಕೊಂಡು ಶೀಘ್ರದಲ್ಲೇ ಖುದ್ದು ರಾಜ್ಯದ ವಿವಿಧೆಡೆ ತೆರಳಿ ಬರ ಪರಿಸ್ಥಿ ಪರಿಶೀಲಿಸಲಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಭಾನುವಾರ ವಿಧಾನಸೌಧದಲ್ಲಿ ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳೊಂದಿಗೆ ವರ್ಚುಯಲ್‌ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ವಲಸೆ ಹೋಗದಂತೆ ನೋಡಿಕೊಳ್ಳಿ:

ಯಾವ ಭಾಗದ ಜನ ವಲಸೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಇನ್ನು ಮುಂದಿನ 15 ದಿನಗಳಲ್ಲಿ ನಾವು ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ವರದಿ ನೀಡಬೇಕು. ನಂತರ ಕೇಂದ್ರ ತಂಡ ಬಂದಾಗ ಅವರಿಗೆ ನಿಖರವಾಗಿ ಮಾಹಿತಿ ನೀಡಬೇಕು. ಕೇಂದ್ರ ತಂಡ ಕಳುಹಿಸುವ ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಮೇವು, ಗೊಬ್ಬರ ಪೂರೈಕೆಗೆ ಸೂಚಿಸಲಾಗಿದೆ. ಪ್ರತಿ ಕೊಳವೆ ಬಾವಿ ಕೊರೆಯುವಾಗ ನಕಲಿ ಬಿಲ್ ಗಳು ಬಾರದಂತೆ ನೋಡಿಕೊಳ್ಳಬೇಕು. ಕೊಳವೆ ಬಾವಿ ಕೊರೆಯುವಾಗ ವಿಡಿಯೋ ದಾಖಲೆ ಇರಬೇಕು. ವಿದ್ಯುತ್ ಇಲಾಖೆಯವರು ಟ್ರಾನ್ಸ್‌ಫಾರ್ಮರ್ ರಿಪೇರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದರು.

ವಾರದೊಳಗೆ ವರದಿ ಕೊಡಿ:

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ರಾಜ್ಯದ ಬರಪರಿಸ್ಥಿತಿ ಬಗ್ಗೆ ಮುಂದಿನ 15 ದಿನಗಳೊಳಗೆ ನಾನು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕಿರುವುದರಿಂದ ಎಲ್ಲಾ ಜಿಲ್ಲಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಬಗ್ಗೆ ಪರಿಶೀಲೀಸಬೇಕು. ವಾರದೊಳಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಇದೇ ವೇಳೆ ಶಿವಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಪಿ.ಡಿ ಖಾತೆಯಲ್ಲಿ 329.60 ಕೋಟಿ ರು. ಲಭ್ಯ:

ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಖಾತ್ರಿಪಡಿಸಲು ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಮೇವಿನ ಬೀಜ ಬಿತ್ತನೆ ಮಾಡಬೇಕು. ಲಭ್ಯವಿರುವ ನೀರಾವರಿ ಸೌಲಭ್ಯ ಬಳಸಿಕೊಂಡು ಮೇವಿನ ಬೀಜ ಬಿತ್ತನೆಗೆ ಕ್ರಮ ವಹಿಸಿ. ಬರ ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ವಿಪತ್ತು ಪಿ.ಡಿ.ಖಾತೆಯಲ್ಲಿ ಒಟ್ಟು 329.60 ಕೋಟಿ ರು. ಅನುದಾನ ಲಭ್ಯವಿದೆ ಎಂದು ಸಿಎಂ ತಿಳಿಸಿದರು.

ರಾಜ್ಯದ ಬರಸ್ಥಿತಿ ಕುರಿತು ವರದಿ ಸಿದ್ಧಪಡಿಸಲು ಜಿಲ್ಲೆಗಳ ಎಲ್ಲಾ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಬರ ಪರಿಸ್ಥಿತಿ ನಿಭಾಯಿಸಲು ಎಲ್ಲಾ ತಾಲೂಕು, ಹೋಬಳಿಗಳಿಗೆ ನೋಡೆಲ್‌ ಅಧಿಕಾರಿಗಳನ್ನು ನೇಮಿಸಬೇಕು. ರಾಜ್ಯದ ಎಲ್ಲ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು. ಕೇವಲ ಪೇಪರ್‌ ವರದಿ ನೀಡಿದರೆ ನಾನು ಕೇಳುವುದಿಲ್ಲ. ನನಗೆ ಫೀಲ್ಡ್‌ ರಿಪೋರ್ಟ್‌ ಮುಖ್ಯ. ನಿಮ್ಮ ಅನುಭವ ಮತ್ತು ಕಾರ್ಯಕ್ಷಮತೆ ತೋರಿಸಿ. ಆಡಳಿತಾತ್ಮಕವಾಗಿ ಟೀಮ್‌ ವರ್ಕ್‌ ಪ್ರದರ್ಶಿಸಿ ಎಂದು ತಾಕೀತು ಮಾಡಿದರು.

ಹಳೆ ಕಾಮಗಾರಿಗೆ ಹೊಸ ಬಿಲ್‌ ಸಹಿಸಲ್ಲ:

ಪಂಚಾಯತಿ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ವಿಬಿ ರಾಮ್ ಜಿ ಯೋಜನೆಯಡಿ ಕೈಗೊಳ್ಳಬೇಕು. ಗುತ್ತಿಗೆದಾರರಿಗೆ ಅನುಕೂಲವಾಗುವಂಥ ಕಾಮಗಾರಿ ಕೈಗೊಳ್ಳಬಾರದು. ವೈಯಕ್ತಿಕ ಕುಟುಂಬಗಳಿಗೆ ಅನುಕೂಲವಾಗುವ ಜೀವನೋಪಾಯ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಳ್ಳಲು ಆದ್ಯತೆ ನೀಡಬೇಕು. ಯೋಜನೆಯ ಪ್ರತಿಯೊಂದು ಸ್ಥಳದಲ್ಲಿ ಕಾಮಗಾರಿ ವಿವರಗಳ ಬೋರ್ಡ್ ಅಳವಡಿಸಬೇಕು. ಗುತ್ತಿಗೆದಾರನ ಹಳೆ ಕಾಮಗಾರಿಗೆ ಹೊಸ ಬಿಲ್ ಮಾಡಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಭಾರತ್‌ ಜೋಡೋ ಯುವ ಕ್ಲಬ್‌ಗಳ ನೋಂದಣಿಗೆ ವೇಗ:

ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪಟ್ಟಿ ಪರಿಶೀಲನೆ ಕಾರ್ಯ ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. 10 ಸಾವಿರ ಭಾರತ್‌ ಜೋಡೋ ಯುವ ಕ್ಲಬ್‌ಗಳ ನೋಂದಣಿ ಕಾರ್ಯ ವೇಗವಾಗಿ ಮಾಡಬೇಕು. ಆ.20ಕ್ಕೆ ಈ ಯೋಜನೆಯನ್ನು ದೊಡ್ಡಮಟ್ಟದಲ್ಲಿ ಉದ್ಘಾಟಿಸುವ ಉದ್ದೇಶವಿದೆ. ಈ ಅವಧಿಯೊಳಗೆ ಕ್ಲಬ್‌ ಗಳ ರಚನೆ ಸಿದ್ದವಾಗಿರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾ ರೆಡ್ಡಿ, ಯು.ಟಿ.ಖಾದರ್, ಯತೀಂದ್ರ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳು ಕೇಂದ್ರ ಪ್ರದೇಶದಲ್ಲಿ ಇರಬೇಕು. ಯಾವುದೇ ಕೆಲಸ ಆಗಬೇಕಾದರೂ ಖುದ್ದಾಗಿ ಇರಬೇಕು ಎಂದು ಸೂಚಿಸಿದ್ದೇನೆ. ಬೆಳೆ ವಿಮೆ ವಿಚಾರವಾಗಿ ಎಲ್ಲೆಲ್ಲಿ ಅನ್ಯಾಯ ಆಗಿದೆ ಎಂದು ಪ್ರತ್ಯೇಕ ಸಭೆ ಮಾಡಿ ಪರಿಶೀಲಿಸಲಾಗುವುದು ಎಂದು ಇದೇ ವೇಳೆ ಅವರು ಮುಖ್ಯಮಂತ್ರಿಗಳು ತಿಳಿಸಿದರು.