ಕಾವೇರಿ ನದಿ ಸೇರುತ್ತಿರುವ ರಾಸಾಯನಿಕಯುಕ್ತ ಕಲುಷಿತ ನೀರು: ಆತಂಕ!
ರಾಸಾಯನಿಕಯುಕ್ತ ಕಲುಷಿತ ನೀರು ಕಾವೇರಿ ನದಿ ಸೇರುತ್ತಿದ್ದು, ಸಾರ್ವಜನಿಕರು ಈ ನೀರನ್ನೆ ಕುಡಿಯಲು ಬಳಸುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗುತ್ತಿದೆ.
ಶ್ರೀರಂಗಪಟ್ಟಣ (ಮೇ.25): ರಾಸಾಯನಿಕಯುಕ್ತ ಕಲುಷಿತ ನೀರು ಕಾವೇರಿ ನದಿ ಸೇರುತ್ತಿದ್ದು, ಸಾರ್ವಜನಿಕರು ಈ ನೀರನ್ನೆ ಕುಡಿಯಲು ಬಳಸುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗುತ್ತಿದೆ. ಮೈಸೂರು ಜಿಲ್ಲೆಯ ಸುತ್ತಮುತ್ತಲು ಕೈಗಾರಿಕೆ ಪ್ರದೇಶಗಳಲ್ಲಿರುವ ವಿವಿಧ ಕಾರ್ಖಾನೆಗಳ ಕಲುಷಿತ ನೀರು ಕೆಳಭಾಗಕ್ಕೆ ಹರಿದುಬರುತ್ತಿದೆ. ಬಣ್ಣದ ಕಾರ್ಖಾನೆ ಹಾಗೂ ಕೈಗಾರಿಕಾ ಪ್ರದೇಶದಿಂದ ಹರಿದು ಬಿಡಲಾದ ಕಲುಷಿತ ರಾಸಾಯನಿಕ ನೀರು ನಾಲೆಯಂತೆಯೇ ನೊರೆ ತುಂಬಿ ಹರಿದು ಬಂದು ಕಾವೇರಿ ನದಿ ಸೇರಿ ಮಿಶ್ರತವಾಗುತ್ತಿದೆ. ಇದೇ ನೀರನ್ನು ಪುರಸಭೆಯವರು ಪಟ್ಟಣ ಜನರಿಗೆ ಕುಡಿಯಲು ಪಂಪ್ ಮೂಲಕ ಸರಬರಾಜು ಮಾಡಲಾಗುತ್ತಿದ್ದಾರೆ.
ಇದರಿಂದ ಜನರಿಗೆ ರೋಗ ರುಜುನುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದುರ್ವಾಸನೆ ಸೇರಿದಂತೆ ಕಪ್ಪು ಬಣ್ಣದ ಮಿಶ್ರಿತ ಕಲುಷಿತ ನೀರು ಕಾವೇರಿ ನದಿ ಸೇರುತ್ತಿದ್ದರೂ ಇದೇ ನೀರನ್ನೇ ಸ್ಥಳೀಯ ಪುರಸಭೆ ಅಧಿಕಾರಿಗಳು ಪಟ್ಟಣದ ಜನರಿಗೆ ಕುಡಿಯಲು ಹರಿಸುತ್ತಿದೆ. ಕಲುಷಿತಗೊಂಡಿರುವ ನೀರನ್ನೇ ಜನರು ಕುಡಿದು ಬದುಕುವಂತಾಗಿದೆ. ಸ್ಥಳೀಯ ಜನರು ಪುರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಸುತ್ತಲೂ ಹರಿಯುವ ಕಾವೇರಿ ಪರಿಶುದ್ದವಾಗಿದ್ದರೂ ಮೈಸೂರು ಭಾಗದ ಕಲುಷಿತ ನೀರು ಮೈಸೂರು ಕೆಸರೆ, ಕೆಆರ್‌ಮಿಲ್, ನಗುವನಹಳ್ಳಿ ಕೊಲ್ಲಿ ಹಳ್ಳದ ಮೂಲಕ ಹರಿದು ಬಂದು ಚಂದಗಾಲು ಪಂಪ್ ಹೌಸ್ ಬಳಿ ಕಾವೇರಿ ನದಿ ನೀರಿಗೆ ಮಿಶ್ರಿತವಾಗುತ್ತಿದೆ.
ಯತೀಂದ್ರ ವಿಧಾನಪರಿಷತ್ ಸದಸ್ಯರಾಗುವ ವಿಚಾರದಲ್ಲಿ ಹೈಕಮಾಂಡ್ ನಿರ್ಧರಿಸಲಿದೆ: ಸಚಿವ ಮಹದೇವಪ್ಪ
ಪಟ್ಟಣ ಹಾಗೂ ಗಂಜಾಂ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ನದಿಯಲ್ಲಿ ಬಾವಿ ನಿರ್ಮಿಸಿ ಪಂಪ್ ಹೌಸ್‌ನ ಜಾಕ್ವೆಲ್ ಮೂಲಕ ನೀರನ್ನು ನೇರವಾಗಿ ಪಂಪ್ ಮೂಲಕ ಪಟ್ಟಣ ಹಾಗೂ ಗಂಜಾಂನ ನೀರು ಸರಬರಾಜು ಕೇಂದ್ರಗಳಿಗೆ ಸರಬರಾಜು ಮಾಡಿಕೊಳ್ಳಲಾಗುತ್ತಿದೆ. ಇದೇ ನೀರನ್ನೆ ಪಟ್ಟಣ ಪುರಸಭೆಯಿಂದ ಪ್ರತಿ ದಿನ ಪಟ್ಟಣದ ಜನರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ದುರ್ವಾಸನೆ ಸೇರಿದಂತೆ ಕಪ್ಪು ಬಣ್ಣದ ಮಿಶ್ರಿತ ಈ ನೀರನ್ನೇ ದಿನನಿತ್ಯ ಪಟ್ಟಣದ ಜನರು ಬಳಕೆ ಮಾಡುತ್ತಿದ್ದಾರೆ. ಇದರಿಂದ ಗಂಜಾಂ ಹಾಗೂ ಪಟ್ಟಣದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಶುದ್ಧವಾಗಿರುವಂತೆ ಕಾಣುವ ನೀರು: ಕಾವೇರಿ ನದಿಯಲ್ಲಿ ನೀರು ಹೆಚ್ಚಾಗಿ ಹರಿಯುತ್ತಿದ್ದ ವೇಳೆ ಕಲುಷಿತ ನೀರು ನದಿಗೆ ಮಿಶ್ರಗೊಳ್ಳುವುದು ಯಾರಿಗೂ ಕಾಣುತ್ತಿಲ್ಲ. ಇದೀಗ ಬೇಸಿಗೆಯಿಂದ ನದಿಯಲ್ಲಿ ನೀರು ಇಳಿಮುಖವಾಗಿ ಮೈಸೂರು ಭಾಗದಿಂದ ಕೈಗಾರಿಕ ಪ್ರದೇಶದ ರಾಸಾಯನಿಕಯುಕ್ತ ಮಿಶ್ರಿತ ಕಲುಷಿತ ನೀರು ಕಾವೇರಿ ನದಿಯಲ್ಲಿ ಸೇರ್ಪಡೆಗೊಳ್ಳುತ್ತಿರುವುದು ಅರಿವಿಗೆ ಬಂದಿದೆ. ಅದೇ ನೀರನ್ನು ಸಾರ್ವಜನಿಕರಿಗೆ ಕುಡಿಯುವ ಸಲುವಾಗಿ ಸರಬರಾಜು ಮಾಡಿರುವುದು ವಿಪರ್‍ಯಾಸವೇ ಸರಿ. ಪ್ರತಿ ದಿನ ಕಲುಷಿತ ನೀರನ್ನೇ ಬಳಕೆ ಮಾಡಿಕೊಂಡ ನಿವಾಸಿಗಳಲ್ಲೂ ಸಹ ಅವರ ಆರೋಗ್ಯದ ಮೇಲೆ ಆತಂಕ ಹೆಚ್ಚಾಗಿದೆ.
ಕಲುಷಿತ ನೀರು ತಡೆಯುಲು ವಿಫಲ: ಮೈಸೂರು ಭಾಗದಿಂದ ಹರಿದು ಬರುತ್ತಿರುವ ಕಲುಷಿತ ನೀರನ್ನು ತಡೆಯುವ ಪ್ರಯತ್ನವನ್ನು ಯಾವುದೇ ಅಧಿಕಾರಿಗಳು ಮಾಡುತ್ತಿಲ್ಲ. ಪುರಸಭೆ ಅಧಿಕಾರಿಗಳು ಕೂಡ ಕಾವೇರಿ ನದಿ ಸೇರುತ್ತಿರುವ ಕಲುಷಿತ ನೀರನ್ನು ಶುದ್ಧೀಕರಿಸಿ ನೀರು ಸರಬರಾಜು ಮಾಡಲು ಗಮನ ಹರಿಸುತ್ತಿಲ್ಲ. ಗಂಜಾಂನ ಪಂಪ್ ಹೌಸ್‌ನಲ್ಲಿ ಕೇವಲ ಬ್ಲೀಚಿಂಗ್ ಪೌಡರ್ ಹಾಕಿ ಕುಡಿಯಲು ಯೋಗ್ಯವಲ್ಲದ ನೀರನ್ನೇ ನೇರವಾಗಿ ಸರಬರಾಜು ಮಾಡಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಮನೆಯಲ್ಲಿ ಶೇಖರಣೆಗೊಂಡ ನೀರು ಕಪ್ಪು ಬಣ್ಣಕ್ಕೆ ತಿರುವಿ, ದುರ್ವಾಸನೆ ಬರುತ್ತಿದ್ದರಿಂದ ಜನರಿಗೆ ಇದು ಕಲುಷಿತ ನೀರು ಎಂದು ಮನವರಿಕೆಯಾಗಿದೆ. ನಂತರ ಸ್ಥಳೀಯರು ಪುರಸಭೆ ಅಧಿಕಾರಿಗಳಿಗೆ ದೂರಿದ್ದಾರೆ. ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರಬರಾಜು ಮಾಡುವ ನೀರನ್ನು ಎರಡು ದಿನಗಳಿಂದ ಸ್ಥಗಿತಗೊಳಿಸಿದ್ದಾರೆ. ಪಟ್ಟಣದ ಸುತ್ತಲೂ ಕಾವೇರಿ ನದಿ ನೀರು ಹರಿಯುತ್ತಿದ್ದರು ಪಟ್ಟಣ ಹಾಗೂ ಗಂಜಾಂ ನಾಗರೀಕರು ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ: ಮೈಸೂರಿನ ಕೊಳಚೆ ನೀರು ನಾಲೆಗಳ ಮೂಲಕ ಕಾವೇರಿ ನದಿ ಸೇರುತ್ತಿರುವ ಮಾಹಿತಿಗಳ ಪಡೆದು ಗಂಜಾಂ ಹಾಗೂ ಪಟ್ಟಣಕ್ಕೆ ಕುಡಿಯಲು ನೀರು ಸರಬರಾಜು ಮಾಡುವ ಚಂದಗಾಲು ರಸ್ತೆ ನೀರಿನ ಘಟಕ ಹಾಗೂ ನದಿಯಿಂದ ಪಂಪ್ ಮೂಲಕ ಮೇಲೆತ್ತುವ ಸ್ಥಳಗಳಿಗೆ ಜಿಲ್ಲಾಧಿಕಾರಿ ಡಾ. ಕುಮಾರ್ ಸೇರಿದಂತೆ ಜಿಲ್ಲಾಡಳಿತ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದರು. ನದಿಗೆ ಕಲುಷಿತ ನೀರು ಸೇರದಂತೆ ಮೈಸೂರು ಜಿಲ್ಲಾಧಿಕಾರಿಗಳು, ಮೈಸೂರು ಮಹಾನಗರಪಾಲಿಕೆ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಗಡಿಗೆ ಹೇಮೆ ನೀರು ತಡೆಯಲು ಸಾಧ್ಯವಿಲ್ಲ: ಮಾಜಿ ಸಚಿವ ಎಚ್.ಎಂ.ರೇವಣ್ಣ
ಅಲ್ಲದೇ, ಮೈಸೂರಿನಿಂದ ಬರುವ ಕೊಳಚೆ ನೀರು ಕಾವೇರಿ ನದಿಯಲ್ಲಿ ಮಿಶ್ರಿತವಾಗದಂತೆ ತಡೆಗೋಡೆಯನ್ನು ನಿರ್ಮಿಸಲು ಶೀಘ್ರ ಕಾಮಗಾರಿಯನ್ನು ಪ್ರಾರಂಭಿಸುವಂತೆ ಕನನೀಸ ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ಗೆ ಸ್ಥಳದಲ್ಲೇ ಸೂಚನೆ ನೀಡಿದರು. ಜೊತೆಗೆ ಈಗಾಗಲೆ ಹಣ ಸಹ ಬಿಡುಗಡೆಯಾಗಿರುವ ಕುರಿತು ಮಾಹಿತಿ ನೀಡಿದರು. ಈ ವೇಳೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಿಶೋರ್, ಮಂಡ್ಯದ ಕನನೀಸ ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು, ಶ್ರೀರಂಗಪಟ್ಟಣ ತಹಸೀಲ್ದಾರ್ ಪರುಶುರಾಮ್, ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ಇತರರು ಜೊತೆಯಲ್ಲಿದ್ದರು.