ಮಾಗಡಿಗೆ ಹೇಮೆ ನೀರು ತಡೆಯಲು ಸಾಧ್ಯವಿಲ್ಲ: ಮಾಜಿ ಸಚಿವ ಎಚ್.ಎಂ.ರೇವಣ್ಣ

ಮಾಗಡಿ ತಾಲೂಕಿಗೆ ಹೇಮಾವತಿ ನೀರಿನ ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆಯನ್ನು ಸರ್ಕಾರ ಮಂಜೂರು ಮಾಡಿದ್ದು, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಹೇಳಿದರು. 
 

Heme water cannot be stopped in Magadi Says Ex minister HM Revanna gvd

ಮಾಗಡಿ (ಮೇ.25): ಮಾಗಡಿ ತಾಲೂಕಿಗೆ ಹೇಮಾವತಿ ನೀರಿನ ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆಯನ್ನು ಸರ್ಕಾರ ಮಂಜೂರು ಮಾಡಿದ್ದು, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಹೇಳಿದರು. ತಾಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಬಳಿ "ನಮ್ಮ ನೀರು ನಮ್ಮ ಹಕ್ಕು" ಹೇಮಾವತಿ ನೀರಿಗಾಗಿ ರೈತ ಸಂಘಟನೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೇಮಾವತಿ ಯೋಜನೆ ತಾಲೂಕಿಗೆ ಬರಬೇಕೆಂಬ ನಿಟ್ಟಿನಲ್ಲಿ ನಾನು ಕೂಡ ಈ ಹಿಂದೆಯೂ ಸಾಕಷ್ಟು ಹೋರಾಟ ಮಾಡಿದ್ದೇನೆ. 

ಎಸ್.ಎಂ.ಕೃಷ್ಣ ಅವರು ನೀರಾವರಿ ಸಚಿವರಾಗಿದ್ದ ಅವಧಿಯಿಂದಲೂ ಕೂಡ ಹೇಮಾವತಿ ನೀರು ಮಾಗಡಿಗೆ ನೀಡಲು ಸಾಕಷ್ಟು ಚರ್ಚೆಗಳು, ಹೋರಾಟಗಳು ನಡೆದುಕೊಂಡು ಬಂದಿವೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ ಈ ಯೋಜನೆಗೆ ಚಾಲನೆ ಕೊಟ್ಟಿದ್ದರು. ಈಗ ಮತ್ತೊಮ್ಮೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದಾರೆ. ನಮ್ಮದೇ ಜಿಲ್ಲೆಯವರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿಯೂ ಇದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಯೋಜನೆಗೆ ಅನುಮೋದನೆ ಪಡೆದು 900 ಕೋಟಿ ಅನುದಾನದಲ್ಲಿ ತುಮಕೂರಿನಲ್ಲಿ ಎಕ್ಸ್‌ಪ್ರೆಸ್‌ ಕೆನಾಲ್ ಕಾಮಗಾರಿಗೆ ಚಾಲನೆ ನೀಡಿದ ಮೇಲೆ ಈ ರೀತಿ ವಿರೋಧ ಮಾಡುವುದು ಯಾವ ನ್ಯಾಯ? 

ಡಿಕೆಶಿ ಬೆಳವಣಿಗೆಯನ್ನು ಎಚ್.ಡಿ.ಕುಮಾರಸ್ವಾಮಿ ಸಹಿಸುತ್ತಿಲ್ಲ: ಸಚಿವ ಚಲುವರಾಯಸ್ವಾಮಿ

ನಾವು ಪ್ರತಿಭಟನೆ ಮಾಡುತ್ತಿರುವುದು ಯೋಜನೆ ಅನುಷ್ಠಾನಕ್ಕಾಗಿ ಮಾತ್ರ. ಇದು ಸರ್ಕಾರದ ವಿರುದ್ಧವಲ್ಲ. ತುಮಕೂರಿನಲ್ಲಿ ವಿರೋಧ ಮಾಡುತ್ತಿರುವ ನಾಯಕರ ವಿರುದ್ಧ ನಮ್ಮ ಹೋರಾಟ ಎಂದು ಹೇಳಿದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಭೇಟಿ ಮಾಡಿ ಚರ್ಚಿಸಿ, ಕಾಮಗಾರಿ ಯಾವುದೇ ಕಾರಣಕ್ಕೂ ತಡೆಯಲು ಬರುವುದಿಲ್ಲ. ನಮ್ಮ ಹೋರಾಟಕ್ಕೆ ಜಯ ಸಿಗುವ ನಂಬಿಕೆ ಇದೆ. ಮಾಗಡಿ ತಾಲೂಕಿನ 63 ಕೆರೆಗಳಿಗೆ ಹೇಮಾವತಿ ನೀರು ತುಂಬಿಸಲಾಗುತ್ತದೆ. ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಸಿಗಬೇಕಿತ್ತು. ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಿ ನಮ್ಮ ತಾಲೂಕಿಗೆ ಹೇಮಾವತಿ ನೀರು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಹೋರಾಟಕ್ಕೆ ಜಯ ಸಿಗಲಿದೆ ಎಂದು ಹೇಳಿದರು.

ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಮಾತನಾಡಿ, ತುಮಕೂರು ಜಿಲ್ಲೆಯವರು ಮಾತ್ರ ಬದುಕಬೇಕಾ? ನಮಗೂ ಹೇಮಾವತಿ ನೀರಿನ ಮೇಲೆ ಹಕ್ಕಿದೆ. ಶಾಸಕ ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್ ಈ ಹೋರಾಟಕ್ಕೆ ಬರಬೇಕಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡಲೇ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಾಜಿ ಸಚಿವರ ಜೊತೆ ಚರ್ಚಿಸಿ ಕಾಮಗಾರಿ ಯಾವುದೇ ಕಾರಣಕ್ಕೂ ನಿಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲೆ ಇದೆ. ತುಮಕೂರಿನಲ್ಲಿ ಬೆಂಕಿ ಹಚ್ಚಿದ್ದು ಈಗ ಮಾಗಡಿ ಜನ ಅದನ್ನು ಆರಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಉಗ್ರವಾಗಿರುತ್ತದೆ. ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ನಮ್ಮ ತಾಲೂಕಿನವರು ಹಾಗೂ ತುಮಕೂರು ಗ್ರಾಮಾಂತರ ಶಾಸಕರಾದ ಸುರೇಶ್ ಕುಮಾರ್ ಕೂಡ ಮಾಗಡಿ ತಾಲೂಕಿನ ಅಳಿಯನಾಗಿದ್ದು, ವಿರೋಧ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಸಿದ್ದಗಂಗಾ ಶ್ರೀಗಳು ಹುಟ್ಟಿದ ತಾಲೂಕಿಗೆ ವಿರೋಧ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.

ಬಿಜೆಪಿಗೆ ಸುಳ್ಳೇ ಬಂಡವಾಳ, ಯಾಮಾರಿಸೋದರಲ್ಲಿ ನಿಸ್ಸೀಮರು: ಸಚಿವ ಬೈರತಿ ಸುರೇಶ್

ಮಾತಿನ ಚಕಮಕಿ: ಮರೂರು ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿ ತಡೆಯಲು ಅವಕಾಶ ನೀಡುವುದಿಲ್ಲ. ಹೆದ್ದಾರಿ ಪಕ್ಕದಲ್ಲಿ ಪ್ರತಿಭಟನೆ ಮಾಡಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರೂ ಇದಕ್ಕೆ ಒಪ್ಪದಾ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ನಂತರ ತಹಸೀಲ್ದಾರ್ ಶರತ್ ಕುಮಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು. ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ವೆಂಕಟೇಶ್, ಕಾಂಗ್ರೆಸ್ ಮುಖಂಡ ಮಾಡಬಾಳ್ ಜಯರಾಂ, ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಬಿಜೆಪಿ ಮುಖಂಡ ಪ್ರಸಾದ್ ಗೌಡ ಮಾತನಾಡಿದರು. ರೈತ ಸಂಘದ ಮುಖಂಡರು ವಿವಿಧ ಸಂಘಟನೆಯ ಅಧ್ಯಕ್ಷರು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios