ಯತೀಂದ್ರ ವಿಧಾನಪರಿಷತ್ ಸದಸ್ಯರಾಗುವ ವಿಚಾರದಲ್ಲಿ ಹೈಕಮಾಂಡ್ ನಿರ್ಧರಿಸಲಿದೆ: ಸಚಿವ ಮಹದೇವಪ್ಪ
ಡಾ. ಯತಿಂದ್ರ ಸಿದ್ದರಾಮಯ್ಯ ವಿಧಾನಪರಿಷತ್ ಸದಸ್ಯರಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಮೈಸೂರು (ಮೇ.25): ಡಾ. ಯತಿಂದ್ರ ಸಿದ್ದರಾಮಯ್ಯ ವಿಧಾನಪರಿಷತ್ ಸದಸ್ಯರಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಯತೀಂದ್ರ ಕ್ಷೇತ್ರವನ್ನು ತಂದೆಗಾಗಿ ತ್ಯಾಗ ಮಾಡಿದ್ದಾರೆ. ಹೈಕಮಾಂಡ್ ಆಗ ನೀವು ಸ್ಪರ್ಧೆ ಮಾಡಬೇಡಿ. ನಿಮ್ಮ ತಂದೆ ಸ್ಪರ್ಧೆ ಮಾಡಲಿ ಎಂದು ಹೇಳಿದ್ದರು.
ಅದಕ್ಕೆ ಅವರು ತಲೆಬಾಗಿದ್ದರು. ಹೀಗಾಗಿ ಇವತ್ತಿನ ಸಂದರ್ಭದಲ್ಲೂ ಅವರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು. ಸರ್ಕಾರ ಇರುವ ಕಾರಣ ವಿಧಾನಪರಿಷತ್ ಗೆ ಲಾಬಿ ಕೂಡ ಹೆಚ್ಚಾಗಿದೆ. ಪರಿಷತ್ ವಿಚಾರ ಯಾವಾಗಲೂ ಲಾಬಿ ಇದ್ದೆ ಇರುತ್ತದೆ. ಹಾಗೆಯೇ, ಪದವೀದರ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಯಾವುದೇ ಧಕ್ಕೆ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಉಸ್ತುವಾರಿ ಬದಲಾವಣೆ ಮಾಡಬೇಕೆಂದು ನಾವ್ಯಾರು ಕೇಳಿಲ್ಲ: ಮೈಸೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆಗೆ ನಾವ್ಯಾರು ಕೇಳಿಲ್ಲ ಎಂದು ಸಚಿವರಾದ ಕೆ. ವೆಂಕಟೇಶ್, ಡಾ.ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದರು. ಉಸ್ತುವಾರಿ ಸಚಿವ ಸ್ಥಾನ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವದ್ವಯರು, ನಾವ್ಯಾರು ಬದಲಾವಣೆ ಮಾಡಬೇಕೆಂದು ಕೇಳಿಲ್ಲ. ಇರೋದ್ರಲ್ಲಿ ಇಬ್ಬರಿಗೂ ತೃಪ್ತಿ ಇದೆ. ಇಬ್ಬರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಪೈಪೋಟಿ ಇಲ್ಲ. ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.
ಮಾಗಡಿಗೆ ಹೇಮೆ ನೀರು ತಡೆಯಲು ಸಾಧ್ಯವಿಲ್ಲ: ಮಾಜಿ ಸಚಿವ ಎಚ್.ಎಂ.ರೇವಣ್ಣ
ಕುಮಾರಸ್ವಾಮಿಗೆ ಪ್ರಶ್ನೆ: ಪಿರಿಯಾಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅತಿವೃಷ್ಟಿ ವೀಕ್ಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ. ವೆಂಕಟೇಶ್ ಅವರು, ನಾನು ಆ ಕ್ಷೇತ್ರದ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ತೊಂದರೆ ಆದಾಗ ಸಮಸ್ಯೆ ಬಗೆಹರಿಸೋದು ನನ್ನ ಜವಾಬ್ದಾರಿ. ಕುಮಾರಸ್ವಾಮಿ ಬರೋದಕ್ಕೂ ನನಗೂ ಏನು ಸಂಬಂಧ? ಅವರು ವೈಯಕ್ತಿಕವಾಗಿ ಮಹಿಳೆಗೆ ಸಹಾಯ ಮಾಡಿರಬೋದು, ಆದರೆ ಸರ್ಕಾರದಿಂದ ಕೊಡಿಸಲಿಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದರು.