ಚಿಕ್ಕಬಳ್ಳಾಪುರ(ಆ.10): ಬಾಗೇಪಲ್ಲಿ ಜನತೆಯ ಬಹುದಿನಗಳ ಬೇಡಿಕೆಯಂತೆ ಈ ಹಿಂದಿನ ಮೈತ್ರಿ ಸರ್ಕಾರ ಚೇಳೂರನ್ನು ತಾಲೂಕು ಎಂದು ಘೋಷಣೆ ಮಾಡಿತ್ತು. ಆದರೆ ಅದಕ್ಕೆ ಅಗತ್ಯವಿರುವ ಅನುದಾನ ಸೇರಿದಂತೆ ಇತರೆ ಮೂಲಸೌಲಭ್ಯ ಒದಗಿಸುವತ್ತ ಗಮನ ಹರಿಸದ ಕಾರಣ ಚೇಳೂರು ತಾಲೂಕು ಘೋಷಣೆಗಷ್ಟೇ ಸೀಮಿತ ಎಂಬಂತಾಗಿದೆ.

ಬಾಗೇಪಲ್ಲಿ ತಾಲೂಕು ಕೇಂದ್ರದಿಂದ 40 ಕಿಲೋಮೀಟರ್‌ ದೂರದಲ್ಲಿರುವ ಚೇಳೂರನ್ನು ತಾಲೂಕು ಮಾಡಬೇಕು ಎಂಬ ಬಹುದಿನಗಳ ಬೇಡಿಕೆ ಈಡೇರಿದೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಅನುದಾನದ ಬಗ್ಗೆ ಪ್ರಸ್ತಾಪವನ್ನೇ ಮಾಡದೆ ಕೇವಲ ತಾಲೂಕು ಘೋಷಣೆ ಮಾಡಿರುವುದು ಇಲ್ಲಿನ ಸಮಸ್ಯೆಗೆ ಕಾರಣವಾಗಿದೆ.

ಆಂಧ್ರದ ಗಡಿ ಸಮೀಪ ತಾಲೂಕು ಕೇಂದ್ರ:

ಚೇಳೂರು ಆಂಧ್ರಪ್ರದೇಶದ ಗಡಿಯಲ್ಲಿದೆ. ಚೇಳೂರು ತಾಲೂಕು ಕೇಂದ್ರದಿಂದ ಕೇವಲ 2 ಕಿಲೋಮೀಟರ್‌ ಸಾಗಿದರೆ ಆಂಧ್ರದ ಗಡಿ ಸಿಗಲಿದೆ. ಇನ್ನು ಅತ್ತ ಬಾಗೇಪಲ್ಲಿ ತಾಲೂಕು ಕೇಂದ್ರ ಮತ್ತು ಇತ್ತ ಚಿಂತಾಮಣಿ ತಾಲೂಕು ಕೇಂದ್ರ ಎರಡೂ ಬರೋಬ್ಬರಿ 40 ಕಿಲೋಮೀಟರ್‌ ದೂರದಲ್ಲಿವೆ. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಪುಟ್ಟತಾಲೂಕು ಎಂಬ ಹೆಗ್ಗಳಿಕೆಗೆ ಚೇಳೂರು ಪಾತ್ರವಾಗಲಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ ಬಾಗೇಪಲ್ಲಿ ತಾಲೂಕಿನ ಎರಡು ಹೋಬಳಿ ಮತ್ತು ಚಿಂತಾಮಣಿ ತಾಲೂಕಿನ ಒಂದು ಹೋಬಳಿ ಸೇರಿ ಚೇಳೂರು ತಾಲೂಕು ರಚಿಸಲಾಗಿದೆ. ಬಾಗೇಪಲ್ಲಿ ತಾಲೂಕಿನ ಚೇಳೂರು ಮತ್ತು ಪಾತಪಾಳ್ಯ ಹೋಬಳಿಗಳು, ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೋಬಳಿ ಚೇಳೂರು ತಾಲೂಕು ವ್ಯಾಪ್ತಿಗೆ ಬರಲಿವೆ.

ಯಾವುದೇ ಅಭಿವೃದ್ಧಿ ಇಲ್ಲ:

ಇನ್ನು ಕಳೆದ ಮಾಚ್‌ರ್‍ನಲ್ಲಿಯೇ ಚೇಳೂರನ್ನು ತಾಲೂಕಾಗಿ ಘೋಷಣೆ ಮಾಡಿದ್ದರೂ ಈವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಇನ್ನು ಸರ್ಕಾರದ ಕಟ್ಟಡಗಳ ನಿರ್ಮಾಣ ತಡವಾದರೆ ಖಾಸಗಿ ಕಟ್ಟಡಗಳು ಅಥವಾ ಸರ್ಕಾರಿ ಶಾಲಾ ಕಟ್ಟಡಗಳನ್ನು ಕಚೇರಿಗಳನ್ನಾಗಿ ಮಾಡಿಕೊಂಡು ಆಡಳಿತ ನಡೆಸಲು ಅನವು ಮಾಡಿಕೊಡಬೇಕಿದೆ. ಆದರೆ ಇಲ್ಲಿ ಇಂತಹ ಕಟ್ಟಡಗಳ ಕೊರತೆ ಇದೆ. ನೂತನ ಕಟ್ಟಡಗಳ ನಿರ್ಮಾಣವಾಗದೆ ಆಡಳಿತ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಅನುದಾನಕ್ಕಾಗಿ ಬೇಡಿಕೆ

ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೇ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಬಾಗೇಪಲ್ಲಿ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಅವರು ಪತ್ರ ಬರೆದು, ಆಡಳಿತ ಭವನ ನಿರ್ಮಾಣಕ್ಕಾಗಿ 25 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಪ್ರಸ್ತುತ ನೂತನ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಾದರೂ ಚೇಳೂರು ತಾಲೂಕು ಕೇಂದ್ರಕ್ಕೆ ಅನುದಾನ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕಳಸ ಹೊಸ ತಾಲೂಕು ರಚನೆಗೆ ನೂರೆಂಟು ವಿಘ್ನ

ನೂತನ ತಾಲೂಕು ಸೇರ್ಪಡೆಗೆ ವಿರೋಧ

ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ಜನರು ಚೇಳೂರು ನೂತನ ತಾಲೂಕಿಗೆ ಸೇರ್ಪಡೆಯಾಗಲು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹದಗೆಟ್ಟರಸ್ತೆ, ಮೂಲಸೌಲಭ್ಯಗಳ ಕೊರತೆಯಿಂದ ನರಳುತ್ತಿರುವ ನೂತನ ತಾಲೂಕಿಗೆ ಸೇರಿಸಿದರೆ ಇದರ ವಿರುದ್ಧ ಜನಾಂದೋಲನ ರೂಪಿಸುವುದಾಗಿ ಹಲವು ಸಂಘಸಂಸ್ಥೆಗಳು ಈಗಾಗಲೇ ಎಚ್ಚರಿಕೆ ನೀಡಿವೆ. ಅಲ್ಲದೆ ಪಾತಪಾಳ್ಯ ಹೋಬಳಿಯಲ್ಲಿ ಚಾಕವೇಲು, ಬಿಳ್ಳೂರು ಮುಂತಾದ ಪ್ರಮುಖ ಗ್ರಾಪಂ ಕೇಂದ್ರಗಳಿದ್ದು, ಇವುಗಳಿಗೆ ಚೇಳೂರು ತಾಲೂಕು ಕೇಂದ್ರಕ್ಕಿಂತ ಹಳೆಯ ಬಾಗೇಪಲ್ಲಿ ತಾಲೂಕು ಕೇಂದ್ರವೇ ಸಮೀಪ ಎಂಬುದು ಇವರ ವಾದವಾಗಿದೆ.