ನರಹಂತಕ ಚಿರತೆಯ ಹೈಡ್ರಾಮಕ್ಕೆ ಹೈರಾಣಾಗಿದೆ ಅರಣ್ಯ ಇಲಾಖೆ..!
ಅರಣ್ಯ ಇಲಾಖೆ ಕೂಂಬಿಂಗ್ ಆರಂಭಿಸಿ ಒಂದು ವಾರ ಕಳೆದರೂ ಯಾವುದೇ ಫಲ ನೀಡದೇ ಇರುವುದರಿಂದ ಅಕ್ಷರಶಃ ಸಿಬ್ಬಂದಿ ಕೈ ಚೆಲ್ಲಿ ಕುಳಿತಿದ್ದಾರೆ. ಬಂಡೀಪುರದಿಂದ ಸ್ಪೆಷಲ್ ಟೈಗರ್ ಫೋರ್ಸ್‌ನ 25 ಮಂದಿ ಹಾಗೂ ಸ್ಥಳೀಯ ಸಿಬ್ಬಂದಿ 35 ಸೇರಿ ಸೇರಿ ಒಟ್ಟು 60 ಜನ ನರಹಂತಕ ಚಿರತೆ ಸೆರೆ ಹಿಡಿಯಲು ಮಾಡಿದ ಪ್ರಯತ್ನಗಳು ಫಲಕೊಡುತ್ತಿಲ್ಲ.
ತುಮಕೂರು(ಜ.17): ನರಹಂತಕ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕೂಂಬಿಂಗ್ ಆರಂಭಿಸಿ ಒಂದು ವಾರ ಕಳೆದರೂ ಯಾವುದೇ ಫಲ ನೀಡದೇ ಇರುವುದರಿಂದ ಅಕ್ಷರಶಃ ಸಿಬ್ಬಂದಿ ಕೈ ಚೆಲ್ಲಿ ಕುಳಿತಿದ್ದಾರೆ. ಬಂಡೀಪುರದಿಂದ ಸ್ಪೆಷಲ್ ಟೈಗರ್ ಫೋರ್ಸ್‌ನ 25 ಮಂದಿ ಹಾಗೂ ಸ್ಥಳೀಯ ಸಿಬ್ಬಂದಿ 35 ಸೇರಿ ಸೇರಿ ಒಟ್ಟು 60 ಜನ ನರಹಂತಕ ಚಿರತೆ ಸೆರೆ ಹಿಡಿಯಲು ಮಾಡಿದ ಪ್ರಯತ್ನಗಳು ಫಲಕೊಡುತ್ತಿಲ್ಲ.
ಎರಡೂವರೆ ತಿಂಗಳಿನಿಂದ ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕಿನ ಜನರ ನಿದ್ದೆಗೆಡಿಸಿರುವ ನರಹಂತಕ ಚಿರತೆ ಕಳೆದ ಗುರುವಾರ ಗುಬ್ಬಿ ತಾಲೂಕು ಮಣಿಕುಪ್ಪೆಯಲ್ಲಿ ಮಗುವಿನ ರಕ್ತೆ ಹೀರಿದ ಬಳಿಕ ಜಿಲ್ಲಾಡಳಿತ ಚಿರತೆ ಸೆರೆಗೆ ಕಟ್ಟು ನಿಟ್ಟಾಗಿ ಆದೇಶಿಸಿತ್ತು. ಆದರೆ ಕೂಂಬಿಂಗ್ ಆರಂಭವಾಗಿ ಒಂದು ವಾರ ಕಳೆದರೂ ಚಿರತೆಯನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ.
ನೂರಾರು ಎಕರೆ ಪೊದೆ ತುಂಬಿವೆ:
ಬಿನ್ನಿಕುಪ್ಪೆ ಸುತ್ತಮುತ್ತ ನೂರಾರು ಎಕರೆಯಷ್ಟುಜಾಗವನ್ನು ಕೆಲವರು ಖರೀದಿಸಿ ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ. ಈಗ ಅಲ್ಲಿ ಪೊದೆಗಳು ತುಂಬಿ ಹೋಗಿವೆ. ಜೊತೆಗೆ ಸಾವಿರಾರು ನೀಲಗಿರಿ ಮರಗಳು ಇವೆ. ಈ ಜಾಗದಲ್ಲಿ ಅಡಗಿರುವ ಚಿರತೆ ಮನುಷ್ಯರ ಪ್ರತಿ ಚಲನವಲನಗಳನ್ನು ಗಮನಿಸುತ್ತದೆ. ಆದರೆ ಮನುಷ್ಯರಿಗೆ ಮಾತ್ರ ಚಿರತೆ ಇರುವ ಜಾಗ ಕಾಣುತ್ತಿಲ್ಲ. ಹೀಗಾಗಿ ಕಾರ್ಯಾಚರಣೆ ತುಂಬಾ ಕಷ್ಟವಾಗಿದೆ.
3 ದಿನಕ್ಕೊಮ್ಮೆ ಚಿರತೆ ಕ್ಯಾಮೆರಾಗೆ ಸೆರೆ
3 ದಿನಕ್ಕೊಮ್ಮೆ ಮಾತ್ರ ಸಿಸಿ ಕ್ಯಾಮೆರಾದಲ್ಲಿ ಚಿರತೆ ಬಂದು ಹೋಗಿರುವ ಕುರುಹು ಪತ್ತೆಯಾಗುತ್ತಿದೆ. ಕಳೆದ ಒಂದು ವಾರದಲ್ಲಿ ಸಿಸಿ ಟಿವಿ ಕ್ಯಾಮರಾಗೆ ಸೆರೆ ಸಿಕ್ಕಿರುವುದು ಕೇವಲ ಎರಡು ಬಾರಿ ಮಾತ್ರ.
ಒಂದೇ ಕಡೆ 4 ಚಿರತೆ:
ಬಿನ್ನಿಕುಪ್ಪೆ ಬಳಿಯ ನೀಲಗಿರಿ ತೋಪಿನಲ್ಲಿ ಒಂದು ಗಂಡು, ಒಂದು ಹೆಣ್ಣು ಹಾಗೂ ಎರಡು ಮರಿ ಚಿರತೆಗಳಿವೆ. ಯಾವುದೇ ನರಹಂತಕ ಎಂಬುದು ಗುರುತಿಸಲು ಕಷ್ಟ. ಹೀಗಾಗಿ ನಾಲ್ಕು ಚಿರತೆಗಳನ್ನು ನರಹಂತಕ ಎಂದೇ ಪರಿಗಣಿಸಿ ಕೂಂಬಿಂಗ್ ಆರಂಭಿಸಲಾಗಿದೆ.
ತಾವಾಗಿಯೇ ಬೋನಿಗೆ ಬಂದು ಬೀಳಬೇಕಷ್ಟೆ!
ಸದ್ಯ ಅರಣ್ಯ ಇಲಾಖೆ ಹೆಬ್ಬೂರು ಸಮೀಪ ಬಿನ್ನಿಕುಪ್ಪೆ ಬಳಿ 21 ಬೋನುಗಳನ್ನು ಇಟ್ಟಿದೆ. ಚಿರತೆ ತಾನಾಗಿಯೇ ಬೋನಿಗೆ ಬಂದು ಬೀಳಬೇಕು. ಇಲ್ಲದಿದ್ದರೆ ಅದನ್ನು ಸೆರೆ ಹಿಡಿಯುವುದು ದುಸ್ತರವಾಗಿದೆ. ಆದರೆ ಚಿರತೆಗೆ ಹೊರಗಡೆ ನಾಯಿಗಳು, ಮೇಕೆ, ಕುರಿ ಮರಿ, ಕರುಗಳು ಸುಲಭವಾಗಿ ಸಿಗುತ್ತಿರುವುದರಿಂದ ಬೋನಿನತ್ತ ಅಪ್ಪಿ ತಪ್ಪಿಯೂ ಸುಳಿಯುತ್ತಿಲ್ಲ.
ತುಮಕೂರು: ಗ್ರಾಮದಲ್ಲೇ ರಾಜಾರೋಷವಾಗಿ ಓಡಾಡ್ತಿವೆ ಚಿರತೆಗಳು..!
ಬೋನಿನ ಸಂಖ್ಯೆ ಹೆಚ್ಚು ಮಾಡಬೇಕೆಂದು ಯೋಚಿಸಿತ್ತು. ಆದರೆ ಬೋನಿನ ಕಡೆ ಸುಳಿಯದೇ ಇರುವುದರಿಂದ ಮತ್ತೆ ಬೋನ್‌ಗಳನ್ನು ಇಡುವುದರಿಂದ ಉಪಯೋಗವಿಲ್ಲ ಎಂಬ ತೀರ್ಮಾನಕ್ಕೆ ಅರಣ್ಯ ಇಲಾಖೆ ಬಂದಿದೆ.
ಸದ್ಯ 4 ಚಿರತೆ ಬಗ್ಗೆ ನಿಗಾ
ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕುಗಳಲ್ಲಿ ಈ ರೀತಿ ಜಮೀನುಗಳಲ್ಲಿ ಪೊದೆಗಳು ಬೆಳೆದಿದ್ದು ನಿಖರವಾಗಿ ಚಿರತೆಗಳು ಎಷ್ಟಿವೆ ಎಂದು ಅಂದಾಜಿಸಲು ಕಷ್ಟಸಾಧ್ಯ. ಮೂರು ತಾಲೂಕುಗಳಲ್ಲಿನ ಜನರು ಚಿರತೆ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದರೂ ಸದ್ಯ ಈ ನಾಲ್ಕು ಚಿರತೆಗಳ ಬಗ್ಗೆ ನಿಗಾ ವಹಿಸಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಗಾದಿಗೆ ಪೈಪೋಟಿ, ರಾಜ್ಯ ಹೈಕಮಾಂಡ್‌ಗೆ ತಲೆನೋವು
ಮರಿಗಳನ್ನು ಬಿಟ್ಟು ಉಳಿದ ಎರಡು ಚಿರತೆಗಳು ನರಹಂತಕವಾಗಿರುವ ಸಾಧ್ಯತೆ ಇರುವುದರಿಂದ ಇವುಗಳ ಬಗ್ಗೆ ಅರಣ್ಯ ಇಲಾಖೆ ಗಮನ ಹರಿಸಿದೆ. ಒಟ್ಟಾರೆಯಾಗಿ ಚಿರತೆ ಕೂಂಬಿಂಗ್ ಬಗ್ಗೆ ನೂರಾರು ತೊಂದರೆಗಳು ಎಡತಾಕುತ್ತಿವೆ. ಚಿರತೆ ತಾವಾಗಿಯೇ ಬೋನಿಗೆ ಬಂದು ಬೀಳದಿದ್ದರೆ ಚಿರತೆ ಹಿಡಿಯುವುದು ಕಷ್ಟಎಂಬ ತೀರ್ಮಾನಕ್ಕೆ ಅರಣ್ಯ ಇಲಾಖೆ ಬಂದಿದೆ.
ಚಿರತೆ ಸೆರೆ ಹರಸಾಹಸ
- ನೂರಾರು ಎಕರೆಯಲ್ಲಿ ನೀಲಗಿರಿ ಮರ ಹಾಗೂ ಪೊದೆಗಳು
- ಬಂಡೀಪುರದ 25 ಮಂದಿ ಸೇರಿ 60 ಮಂದಿ ಕಾರ್ಯಾಚರಣೆಯಲ್ಲಿ
- 30 ಕ್ಯಾಮರಾಗಳ ಅಳವಡಿಕೆ, 21 ಬೋನುಗಳನ್ನು ಇಡಲಾಗಿದೆ
- ಸದ್ಯ 4 ಚಿರತೆ ಬಿನ್ನಿಕುಪ್ಪೆಯಲ್ಲಿ ಪತ್ತೆಯಾಗಿದ್ದು ಇದರ ಬಗ್ಗೆ ನಿಗಾ
- ಚಿರತೆಗಳ ಬಗ್ಗೆ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸಲು ಯತ್ನ
ಚಿರತೆ ಕೂಂಬಿಂಗ್ ಆಪರೇಷನ್ ಪ್ರಗತಿಯಲ್ಲಿದೆ. ಸದ್ಯ 4 ಚಿರತೆಗಳ ಬಗ್ಗೆ ನಿಗಾ ವಹಿಸಲಾಗಿದೆ. ದಿನವಿಡಿ ಕಾರ್ಯಾಚರಣೆ ನಡೆಸುತ್ತಿದ್ದರೂ ಬೋನಿಗೆ ಚಿರತೆ ಬೀಳುತ್ತಿಲ್ಲ ಎಂದು ಡಿಎಫ್‌ಒ ಗಿರೀಶ್ ಹೇಳಿದ್ದಾರೆ.
-ಉಗಮ ಶ್ರೀನಿವಾಸ್