ತುಮಕೂರು(ಜ.16): ಜಿಲ್ಲಾ ಬಿಜೆಪಿ ಅಧ್ಯಕ್ಷ ಪಟ್ಟವನ್ನು ಯಾರಿಗೆ ಕಟ್ಟಬೇಕೆಂಬ ಒತ್ತಡದಲ್ಲಿ ರಾಜ್ಯ ಬಿಜೆಪಿ ಹೈಕಮಾಂಡ್ ಸಿಲುಕಿದೆ. ಹಾಲಿ ಅಧ್ಯಕ್ಷ ಹಾಗೂ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಗೆ ನೂತನ ಅಧ್ಯಕ್ಷರ ಆಯ್ಕೆಯ ಕಸರತ್ತು ಆರಂಭವಾಗಿ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ.

ಹಾಗೆ ನೋಡಿದರೆ ಜ್ಯೋತಿ ಗಣೇಶ್ ಅವಧಿ ಮುಗಿದು 6-7 ತಿಂಗಳುಗಳೇ ಕಳೆದಿದೆ. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕಾತಿ ಮುಂದಕ್ಕೆ ಹೋಗಿತ್ತು. ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಜೊತೆಗೆ ಜಿಲ್ಲಾ ಮಟ್ಟದ ಅಧ್ಯಕ್ಷರ ನೇಮಕಾತಿ ಆಗಿದೆ. ಆದರೆ ಸ್ಮಾರ್ಟ್ ಸಿಟಿ ತುಮಕೂರು ಜಿಲ್ಲೆಯ ಅಧ್ಯಕ್ಷರ ಆಯ್ಕೆ ಮಾತ್ರ ಕಗ್ಗಂಟಾಗಿ ಉಳಿದಿದೆ.

ನನಗೆ ಮಂತ್ರಿಗಿರಿ ಅವಶ್ಯಕತೆ ಇಲ್ಲ, ಕುತೂಹಲವೂ ಇಲ್ಲ: 'ಅರ್ಹ' ಶಾಸಕನ ಅಚ್ಚರಿಯ ಹೇಳಿಕೆ!

ಈ ಹಿಂದೆ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಬಿ.ಸುರೇಶಗೌಡ ಅವರಿಗೆ ಮತ್ತೆ ಅಧ್ಯಕ್ಷ ಪಟ್ಟ ನೀಡಬೇಕೆಂಬ ಒತ್ತಡವನ್ನು ಅವರ ಬೆಂಬಲಿಗರು ಹಾಕುತ್ತಿದ್ದಾರೆ. ಹಾಗೆಯೇ ಸಂಘ ಪರಿವಾರ ಹಿನ್ನೆಲೆಯ ಲಕ್ಷ್ಮೀಶ ಅವರಿಗೆ ಅಧ್ಯಕ್ಷ ಗಾದಿ ನೀಡಬೇಕೆಂಬ ಒತ್ತಡವನ್ನು ಹಾಕಲಾಗುತ್ತಿದೆ. ಈ ಮಧ್ಯೆ ಜಿಪಂ ಮಾಜಿ ಸದಸ್ಯ ಹಾಗೂ ಹಾಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ ಅವರ ಹೆಸರು ದೊಡ್ಡದಾಗಿ ಕೇಳಿ ಬಂದಿದೆ.

ಆದರೆ, ಹಾಲಿ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಹಾಗೂ ಶಾಸಕರಾದ ಜ್ಯೋತಿ ಗಣೇಶ್, ಮಾಧುಸ್ವಾಮಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿರುವುದರಿಂದ ಮತ್ತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯಿತ ಸಮುದಾಯದವರಿಗೆ ಬೇಡ ಎಂಬ ಚರ್ಚೆ ಕೂಡ ನಡೆದಿದೆ. ಹಾಲಿ ಬಿಜೆಪಿ ಪ್ರಧಾನ ಕಾರ್ಯ ದರ್ಶಿಯಾಗಿರುವ ಹೆಬ್ಬಾಕ ರವಿ ಅವರು ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಬೇರೆ ಸಮುದಾಯಗಳು ಮುನಿಸಿಕೊಳ್ಳುತ್ತವೆ ಎಂಬ ಚರ್ಚೆ ನಡೆದಿದೆ. ಹೀಗಾಗಿಯೇ ಒಕ್ಕಲಿಗ ಸಮುದಾಯದ ಸುರೇಶಗೌಡರಿಗೆ ಅಥವಾ ಹಿಂದುಳಿದ ವರ್ಗಗಳ ಸಮುದಾಯದ ಲಕ್ಷ್ಮೀಶ್ ಅವರಿಗೆ ಪಟ್ಟ ನೀಡಬೇಕೆಂಬ ಮಾತುಗಳು ನಡೆದಿವೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಅಧ್ಯಕ್ಷಗಾದಿ ಕಗ್ಗಂಟಾಗಿದ್ದು ಇನ್ನು ಅಂತಿಮಗೊಂಡಿಲ್ಲ.

ಜಿಲೆಯಲ್ಲಿದೆ ಇನ್ನೂ ಬಣ ರಾಜಕೀಯ!

ಬಿಜೆಪಿಯಲ್ಲಿ ಬಣಗಳಿಲ್ಲ ಎಂಬುದು ಬೀಸು ಮಾತಷ್ಟೆ. ಆದರೆ ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ನಾಲ್ಕಾರು ಬಣಗಳಿವೆ. ಮಾಜಿ ಸಚಿವ ಸೊಗಡು ಶಿವಣ್ಣ ಅವರು ಲಕ್ಷ್ಮೀಶ ಪರ ಬ್ಯಾಟ್ ಬೀಸಿದ್ದಾರೆ. ಇನ್ನು ಸುರೇಶಗೌಡರು ಕೂಡ ರೇಸ್‌ನಲ್ಲಿ ಇದ್ದು ತಾವು ಕೂಡ ಆಕಾಂಕ್ಷಿ ಎಂಬುದನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಂಸದ ಜಿ.ಎಸ್.ಬಸವರಾಜು ಅವರು ಹೆಬ್ಬಾಕ ರವಿ ಪರ ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಯಾರ ಕೈ ಮೇಲಾಗುತ್ತದೆ ಎಂಬುದು ಸದ್ಯಕ್ಕಿರುವ ಕುತೂಹಲ.

ಜಿಲ್ಲೆಯಲ್ಲಿ 4 ಶಾಸಕರು ಆಯ್ಕೆ

ಬಿಜೆಪಿ ಈ ಮೊದಲು 11 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು. ಒಮ್ಮೆ ಮೂರು ಶಾಸಕರು ಜಿಲ್ಲೆಯಿಂದ ಆಯ್ಕೆಯಾಗಿದ್ದರು. ಆದರೆ ಕಳೆದ ಬಾರಿ ಜ್ಯೋತಿ ಗಣೇಶ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಾಲ್ಕು ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿ ಬಿಜೆಪಿಯ ಸಂಸದರಾಗಿ ಜಿ.ಎಸ್. ಬಸವರಾಜು ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಕೋಟೆಯನ್ನು ಭೇದಿಸಿದ್ದಾರೆ.

ಪಡಿತರ ಅಕ್ಕಿ ಕಡಿತ: ಸರ್ಕಾರದ ಚಿಂತನೆಗೆ ಸಿದ್ದರಾಮಯ್ಯ ಗರಂ!

ಹೀಗಾಗಿ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಹೆಚ್ಚಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಕೂಡ ಬಂದಿತ್ತು. ಅಲ್ಲದೇ ೭೦ ಸಾವಿರಕ್ಕೂ ಹೆಚ್ಚು ಮತಗಳು ಬಿಜೆಪಿ ಲಭಿಸಿತ್ತು. ಶಿರಾ, ಮಧುಗಿರಿ, ಪಾವಗಡ, ಕೊರಟಗೆರೆ, ಕುಣಿಗಲ್‌ನಲ್ಲಿ ಬಿಜೆಪಿ ಹೇಳಿಕೊಳ್ಳುವ ಸಾಧನೆಯನ್ನು ಮಾಡಿಯೇ ಇಲ್ಲ. ಹೀಗಾಗಿ ಇಡೀ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸುವ ದೊಡ್ಡ ಜವಾಬ್ದಾರಿ ಹೊಸ ಅಧ್ಯಕ್ಷರ ಮೇಲಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಬಿಜೆಪಿ ಹೈಕಮಾಂಡ್ ತಲೆಯಲ್ಲಿಟ್ಟುಕೊಂಡು ಹೊಸ ಅಧ್ಯಕ್ಷರನ್ನು ನೇಮಕ ಮಾಡುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

-ಉಗಮ ಶ್ರೀನಿವಾಸ್