ಮೈಸೂರು(ಡಿ.14): ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಯಾವ ಪಕ್ಷದಲ್ಲಿರುತ್ತಾರೋ ಅಥವಾ ಗೆದ್ದು ಬಂದಿರೋತ್ತಾರೋ ಅಂತಹ ಪಕ್ಷಕ್ಕೆ ದ್ರೋಹ ಬಗೆಯುವುದೇ ಅವರ ಕೆಲಸ. ಈಗಲಾದರೂ ತಮಗೆ ಹಿಡಿಸುವ ಪಕ್ಷವನ್ನು ಆಯ್ಕೆ ಮಾಡಿಕೊಂಡು ತಮ್ಮ ಮಗನಿಗೆ ರಾಜಕೀಯ ನೆಲೆ ಕಲ್ಪಿಸಿಕೊಳ್ಳುವುದು ಒಳಿತು ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಜಿ. ಹೇಮಂತ್‌ ಕುಮಾರ್‌ ಗೌಡ ತಾಕೀತು ಮಾಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಸಿ.ಪಿ. ಯೋಗೀಶ್ವರ್‌ ಕಾರಣ ಎಂದಿರುವ ಜಿಟಿಡಿ ಜೆಡಿಎಸ್‌ ಪಕ್ಷಕ್ಕೆ ಬೀಳಬೇಕಿದ್ದ ಮತಗಳನ್ನು ಕಾಂಗ್ರೆಸ್‌ ಪಕ್ಷಕ್ಕೆ ವರ್ಗಾಯಿಸಿ ಈಗ ಬಿಜೆಪಿ ಮೇಲೆ ದೂರುತ್ತಿದ್ದಾರೆ. ಹಿಂದೆ ಬಿಜೆಪಿಗೆ ಬಂದು ಹುಣಸೂರಿನಲ್ಲಿ ಸ್ಪರ್ಧಿಸಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ನಂತರ ಯಡಿಯೂರಪ್ಪ ಅವರು ಕೆಎಚ್‌ಬಿ ಅಧ್ಯಕ್ಷರನ್ನಾಗಿಸಿ ಅಧಿಕಾರ ನೀಡಿದರೂ ನಂತರ ಜೆಡಿಎಸ್‌ ಪಕ್ಷಕ್ಕೆ ಹೋದರು.

ನಿಷ್ಠೆ ಇಲ್ಲದ ನಾಯಕ : ಜಿಟಿಡಿ ವಿರುದ್ಧ ಬಿಜೆಪಿ ಮುಖಂಡರು ಕೆಂಡಾಮಂಡಲ

ಈಗ ಹುಣಸೂರಿನಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಕೆಲಸ ಮಾಡದೇ ತಟಸ್ಥರಾಗಿರುವುದಾಗಿ ಹೇಳಿ ಕಾಂಗ್ರೆಸ್‌ ಪರ ಕೆಲಸ ಮಾಡಿದ್ದಾರೆ. ಈ ರೀತಿಯ ಗೋಸುಂಬೆ ಆಟಗಳನ್ನು ಬಿಡಬೇಕು ಎಂದಿದ್ದಾರೆ.

ಘಟಕದ ಹಾಲಿ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್‌ ಮಾತನಾಡಿ, ಜಿಟಿಡಿ ಗೆಲುವಿಗೆ ವಿ. ಶ್ರೀನಿವಾಸಪ್ರಸಾದ್‌, ವಿಶ್ವನಾಥ್‌ ಹಿಂದೆ ಸಹಕರಿಸಿದ್ದರು. ಈಗ ಜಿಟಿಡಿ ವಿಶ್ವನಾಥ್‌ ವಿರುದ್ಧ ಕೆಲಸ ಮಾಡಿದ್ದಾರೆ. ಪಕ್ಷ ತಾಯಿ ಇದ್ದಂತೆ, ತಾವಿರುವ ಪಕ್ಷಕ್ಕೆ ಯಾರೂ ಎಂದೂ ದ್ರೋಹ ಬಗೆಬಾರದು ಎಂದರು. ಮುಖಂಡ ಅರುಣ್‌ಕುಮಾರ್‌ಗೌಡ, ಗಿರೀಶ್‌, ರಾಜ್‌ಕುಮಾರ್‌, ಗೋಪಾಲರಾವ್‌ ಇದ್ದರು.

ಪರೋಕ್ಷ ಸಹಕಾರ

ಕಳೆದ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ನಿಂತಾಗ ನಾವೂ ಪರೋಕ್ಷವಾಗಿ ಸಹಕರಿಸಿದೆವು. ವಿಶ್ವನಾಥ್‌ ಕೂಡ ಸಹಕರಿಸಿದ್ದರು. ಅದೇ ವಿಶ್ವನಾಥ್‌ ಅವರನ್ನು ಸೋಲಿಸಲು ಜಿಟಿಡಿ ಮುಂದಾಗಬಾರದಿತ್ತು. ನಿಜಕ್ಕೂ ಜೆಡಿಎಸ್‌ ಪಕ್ಷದಿಂದ ತೊಂದರೆಯಾಗಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ತಮಗಿಷ್ಟಬಂದ ಪಕ್ಷದಿಂದ ನಿಂತು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

'ಕೆ.ಆರ್. ಪೇಟೆಯಲ್ಲಿ JDS ಸೋತಿದ್ದು ಹೊಟ್ಟೆ ಉರಿಯುತ್ತಿದೆ'..!