ಹುಣಸೂರು [ಡಿ.13]: ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾವಾದರೂ ರಾಜಕೀಯ ಕೆಸರೆರಚಾಟ ಮಾತ್ರ ಇನ್ನೂ ನಿಂತಿಲ್ಲ. ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಯೋಗೇಶ್ವರ್ ಕಾರಣ ಎಂದ ಮಾಜಿ ಸಚಿವ ಜಿ.ಟಿ ದೇವೇಗೌಡ ವಿರುದ್ಧ BJP ಮುಖಂಡರು ತಿರುಗಿ ಬಿದ್ದಿದ್ದಾರೆ. 

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಾಜಿ  ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್,  ಜಿ.ಟಿ.ದೇವೇಗೌಡರು ಇಬ್ಬಗೆಯ ನೀತಿ ಮುಚ್ಚಿಕೊಳ್ಳಲು ಯೋಗೇಶ್ವರ್ ಹೆಸರು ತಂದಿದ್ದಾರೆ. ನಾನು ಕೊನೆಯವರೆಗೂ ತಟಸ್ಥನಾಗಿರುತ್ತೇನೆ ಎಂದವರು ಈಗ ಪಕ್ಷ ನಿಷ್ಠೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ಕ್ಷೇತ್ರದ ಅಭಿವೃದ್ಧಿ ಮಾಡುವುದು ಬೇಕಿಲ್ಲ ಎಂದು ಹರಿಹಾಯ್ದಿದ್ದಾರೆ. 

ಉಪ ಚುನಾವಣೆ ಬೆನ್ನಲ್ಲೇ JDS ಶಾಸಕ GTD ಬಾಂಬ್ !...

ರಾಜಕೀಯದಲ್ಲಿ ಉಳಿದುಕೊಳ್ಳಲು ಯಾರಿಗೆ ಬೇಕಾದರೂ ಚೂರಿ ಹಾಕಲು ಜಿಟಿಡಿ ಸಿದ್ಧರಿದ್ದಾರೆ. ಸಿಎಂ ಯಡಿಯೂರಪ್ಪ ಜಿಟಿಡಿಗೆ ಹಲವು ಸಹಾಯ ಮಾಡಿದ್ದಾರೆ. ಯಡಿಯೂರಪ್ಪ ಫೊಟೊ ಇಟ್ಟು ಪೂಜಿಸಬೇಕು. ಅವರಿಗೆ ಯಾವುದೇ ಪಕ್ಷ ಬೇಕಿಲ್ಲ. ಬೇಕಿರುವುದು ಅಧಿಕಾರ ಮಾತ್ರ. ನಿಮ್ಮ ಗೋಸುಂಬೆ ಆಟ ಬಿಟ್ಟು ಬಿಡಿ ಎಂದಿದ್ದಾರೆ. 

ಇನ್ನು ನೀವು ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ನಲ್ಲಿ ತೊಂದರೆ ಆದರೆ ರಾಜೀನಾಮೆ ಕೊಡಿ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಆಗ ನಾವು ಏನು ಎಂದು ತೋರಿಸುತ್ತೇವೆ ಎಂದು ಇಲ್ಲಿನ ಮುಖಂಡರು ಟೀಕಾ ಪ್ರಹಾರ ನಡೆಸಿದ್ದಾರೆ.  ಓರ್ವ ವ್ಯಕ್ತಿ ಎಷ್ಟು ಮೋಸ ಮಾಡಲು ಸಾಧ್ಯ. ಇನ್ನೂ ಯಾವ ಪಕ್ಷಕ್ಕೆ ಮೋಸ ಮಾಡಲು ಕಾಯುತ್ತಿದ್ದಾರೆ ಎಂದು ಜಿಟಿಡಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಕಳೆದ ಡಿಸೆಂಬರ್ 5 ರಂದು ನಡೆದ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಜಯಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಪರಾಭವಗೊಂಡಿದ್ದರು. ಇನ್ನು ಈ ಚುನಾವಣೆಯಲ್ಲಿ ಜಿಟಿಡಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲ ನೀಡಿದ್ದರು ಎನ್ನುವ ಮಾತುಗಳು ಕೇಳಿ ಬಂದಿತ್ತು.