ಪೇಜಾವರ ಶ್ರೀಗಳ ಚಾತುರ್ಮಾಸ್ಯ ಸಮಾಪನ : ಸೀತಾ ನದಿಯಲ್ಲಿ ಸೀಮೊಲ್ಲಂಘನ
ಪೇಜಾವರ ಶ್ರೀಗಳ ಚಾತುರ್ಮಾಸ್ಯ ಪೂಜಾ ಪ್ರಕ್ರಿಯೆಯು ಮುಕ್ತಾಯವಾಗಿದೆ. ಸೀತಾ ನದಿಯಲ್ಲಿ ಸೀಮೋಲ್ಲಂಘನ ಮಾಡುವ ಮೂಲಕ ಸಮಾಪ್ತಿಗೊಳಿಸಲಾಗಿದೆ.
ಉಡುಪಿ(ಸೆ.03): ಉಡುಪಿಯ ನೀಲಾವರ ಗೋಶಾಲೆಯಲ್ಲಿರುವ ತಮ್ಮ ಶಾಖಾ ಮಠದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು 33ನೇ ಚಾತುರ್ಮಾಸ ವ್ರತವನ್ನು ಬುಧವಾರ ಸಮಾಪ್ತಿಗೊಳಿಸಿದರು.
ಬೆಳಿಗ್ಗೆ ಪಟ್ಟದೇವರಾದ ಶ್ರೀರಾಮವಿಠಲ ದೇವರಿಗೆ ಮಹಾಪೂಜೆ ನೆರವೇರಿಸಿ, ಗೋಶಾಲೆಯ ಪುಷ್ಕರಿಣಿಯಲ್ಲಿ ಚಾತುರ್ಮಾಸ್ಯ ಮೃತ್ತಿಕಾ ವಿಸರ್ಜನೆಗೈದರು.
ಅಪರಾಹ್ನ ಮೆರವಣಿಗೆಯಲ್ಲಿ ಸಮೀಪದ ಸೀತಾನದಿ ತೀರಕ್ಕೆ ಆಗಮಿಸಿದ್ದು, ಈ ವೇಳೆ ಅಲ್ಲಿ ವಿವಿಧ ಸಂಘಟನೆಗಳಿಂದ ಶ್ರೀಗಳಿಗೆ ಗೌರವಾರ್ಪಣೆ ನೆರವೇರಿತು. ಬಳಿಕ ಶ್ರೀಗಳು ಸೀತಾನದಿಗೆ ಹಾಲು, ಸೀಯಾಳ, ಪುಷ್ಪ ಅರ್ಪಿಸಿ, ಆರತಿ ಬೆಳಗಿದರು. ಸಾಲಂಕೃತ ದೋಣಿಯಲ್ಲಿ ಕುಳಿತು ಸಾಂಕೇತಿಕವಾಗಿ ಸೀಮೋಲ್ಲಂಘನ ನಡೆಸಿದರು.
ಉಡುಪಿ ಸ್ವರ್ಣನದಿಯಲ್ಲಿ ಸಿಕ್ಕಿದ್ದು ಫ್ಲಿಪ್ ಕಾರ್ಟ್ ವಿಗ್ರಹವೇ? ...
ಸೀಮೋಲ್ಲಮಘನದ ಬಳಿಕ ಮರಳಿ ಬಂದು ಗ್ರಾಮದೇವತೆ ಮಹಿಷಮರ್ದಿನೀ ದೇವಳಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ದೇವಳದ ಪರವಾಗಿ ಆಡಳಿತ ಮಂಡಳಿ ಮುಖ್ಯಸ್ಥ ರಘುರಾಮ ಮಧ್ಯಸ್ಥ ಹಾಗೂ ಪ್ರಧಾನ ಅರ್ಚಕ ಕೃಷ್ಣ ಅಡಿಗರು ಶ್ರೀಗಳನ್ನು ಬರಮಾಡಿಕೊಂಡು ಸಕಲ ಗೌರವವನ್ನು ಅರ್ಪಿಸಿದರು.
ಬಳಿಕ ಉಡುಪಿಗೆ ತೆರಳಿದ ಶ್ರೀಗಳು ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆಯುವುದರೊಂದಿಗೆ ಚಾತುರ್ಮಾಸ್ಯ ವ್ರತ ಸಮಾಪ್ತಿಗೊಳಿಸಿದರು. ಸ್ಥಳೀಯರಾದ ವಿಠಲ ಪೂಜಾರಿ ಅವರು ತಮ್ಮ ದೋಣಿಯನ್ನು ಅಲಂಕರಿಸಿ ಸ್ವಾಮೀಜಿಯವರನ್ನು ಶ್ರೀರಾಮದೇವರ ಸಹಿತ ಕುಳ್ಳಿರಿಸಿ ಸೀತಾ ನದಿಯ ಆಚೆ ದಡದವರೆಗೆ ಕರೆದುಕೊಂಡು ಹೋಗಿ ಮರಳಿದರು.