ಹಿರಿಯಡ್ಕ, ಉಡುಪಿ(ಸೆ. 01)    ಇಲ್ಲಿನ ಬೆಳ್ಳಂಪಳ್ಳಿಯಲ್ಲಿ ಸ್ವರ್ಣನದಿಯ ಸೇತುವೆಯ ಕೆಳಗೆ ರಾತ್ರಿ ಮೀನು ಹಿಡಿಯುವವರಿಗೆ ಆಕರ್ಷಕ ಕೃಷ್ಣನ ವಿಗ್ರಹವೊಂದು ಪತ್ತೆಯಾಗಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ.

ಸೋಮವಾರ ರಾತ್ರಿ ಸುಮಾರು 8 ಗಂಟೆಗೆ ಗಾಳ ಹಾಕಿ ಮೀನು ಹಿಡಿಯುತಿದ್ದ ಸ್ಥಳೀಯ ಯುವಕರಿಗೆ ಟಾರ್ಚ್ ಲೈಟಿಗೆ ನೀರೊಳಗೆ ಹೊಳೆಯುವ ವಸ್ತುವೊಂದು ಕಾಣಿಸಿತು. ಗಾಳ ಹಾಕುತಿದ್ದ ಯುವಕರು ಅದನ್ನು ಮೇಲೆತ್ತಿದಾಗ ಅದೊಂದು ಕೊಳಲು ಊದುವ ಕೃಷ್ಣನ ವಿಗ್ರಹವಾಗಿತ್ತು.

ತುಳುನಾಡಿನ ದೈವಾರಾಧಕರಿಗೆ ಸಂಕಷ್ಟ

ಸುಮಾರು 2 ಅಡಿ ಎತ್ತರ, 8 ಕೆಜಿ ತೂಕದ ಈ ಲೋಹ ವಿಗ್ರಹದ ಬಗ್ಗೆ ಯುವಕರು ಸ್ಥಳೀಯ ಬೆಳ್ಳಂಪಳ್ಳಿ ಭೂತರಾಜ ದೈವಾಲಯದ ಅಧ್ಯಕ್ಷ  ಪ್ರವೀಣ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದರು. ಅವರು ಈ ವಿಗ್ರಹವನ್ನು ಹಿರಿಯಡ್ಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ವಿಗ್ರಹ ನದಿಯಲ್ಲಿ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಂತೂ ಈ ವಿಗ್ರಹದ ಪ್ರಾಚೀನತೆ, ದೈವಿಕತೆಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಆದರೇ ಫ್ಲಿಪ್ ಕಾರ್ಟ್ ನಲ್ಲಿ ಈ ಫ್ಯಾನ್ಸಿ ವಿಗ್ರಹಗಳು 12,995 ರು.ಗೆ ಮಾರಾಟಕ್ಕಿದೆ. ಬಹುಶಃ ಯಾರದ್ದೋ ಮನೆಯಲ್ಲಿದ್ದ ಈ ವಿಗ್ರಹ ವಾಸ್ತುವಿಗೆ ಹೆದರಿಗೆ ನೀರಿಗೆಸೆದಿರಬಹುದು ಎಂಬ ಮಾತುಗಳು ಕೇಳಿ ಬಂದಿವೆ.