ಹಾಸನ(ಸೆ.11): ಬೇಲೂರು, ಹಳೇಬೀಡು, ಮಾದಿಹಳ್ಳಿ ಮತ್ತು ಜಾವಗಲ್‌ ಹೋಬಳಿಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವಂತೆ ಒತ್ತಾಯಿಸಿ ಬೇಲೂರಿನಲ್ಲಿ 2017ರ ಅ.4 ರಂದು ನಡೆದ ಪ್ರತಿಭಟನೆ, ರಸ್ತೆತಡೆ, ತಾಲೂಕು ಕಚೇರಿ ಮುತ್ತಿಗೆ ಸಂಬಂಧ ಪುಷ್ಪಗಿರಿ ಮಠದ ಡಾ.ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಹಾಗೂ ಬೇಲೂರು ಶಾಸಕ ಕೆ.ಎಸ್‌.ಲಿಂಗೇಶ್‌ ಸೇರಿ ಒಟ್ಟು 83 ಜನರ ವಿರುದ್ಧ ಇಲ್ಲಿನ ನ್ಯಾಯಾಲಯಕ್ಕೆ ಪೊಲೀಸರು ಆರೋಪ ಪಟ್ಟಿಸಲ್ಲಿಸಿದ್ದು, ಸದ್ಯ 83 ಜನರಿಗೆ ಬಂಧನದ ಭೀತಿ ಎದುರಾಗಿದೆ. ಯಾವ ಕಾರಣಕ್ಕೂ ರಾಜೀ ಇಲ್ಲ, ನೀರಾವರಿ ಹೋರಾಟಕ್ಕಾಗಿ ಜೈಲಿಗೆ ಹೋಗಲು ಸಿದ್ಧವೆಂದು ಪುಷ್ಪಗಿರಿ ಮಠದ ಸ್ವಾಮೀಜಿಗಳ ಸ್ಪಷ್ಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ.

ಆರೋಪಗಳು ಏನೇನು..?

ಕರ್ನಾಟಕ ರೈತ ಸಂಘ, ಹಸಿರು ಸೇನೆಯಿಂದ 2017, ಅ.4ರಂದು ಬರಪೀಡಿತ ಹೋಬಳಿಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವಂತೆ ಒತ್ತಾಯಿಸಿ ಕರೆ ನೀಡಿದ ಸಮಯದಲ್ಲಿ ತಾಲೂಕು ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ದಲ್ಲದೆ, ಕಚೇರಿಯ ಕೆಲಸ ಕಾರ್ಯಕ್ಕೆ ತೊಂದರೆ ನೀಡಿರುವುದು, ಕಚೇರಿಯ ಕಿಟಿಕಿ, ಗಾಜುಗಳನ್ನು ಪುಡಿ ಮಾಡಿ ಸರ್ಕಾರದ ಆಸ್ತಿಯನ್ನು ಹಾನಿ ಮಾಡಲಾಗಿದೆ ಎಂದು ಅಂದಿನ ತಹಸೀಲ್ದಾರ್‌ ಎಚ್‌.ಎಸ್‌.ಪರಮೇಶ್‌ ಅವರು ಸುಮಾರು 83 ಜನರ ಮೇಲೆ ಪ್ರಕರಣ ದಾಖಲಿಸಿದ್ದರು.

ಯಾರೆಲ್ಲಾ ವಿರುದ್ಧ ಚಾರ್ಜ್‌ಶೀಟ್:

ಅರಸೀಕೆರೆ ಡಿವೈಎಸ್‌ಪಿ ಪ್ರಕರಣದ ತನಿಖಾಧಿಕಾರಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪುಷ್ಪಗಿರಿ ಶ್ರೀ ಸೋಮಶೇಖರ ಸ್ವಾಮೀಜಿ, ಕೋಳಗುಂದ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ, ಶ್ರೀ ಬಸವಾನಂದ ಸ್ವಾಮೀಜಿ, ಶ್ರೀ ಪ್ರಭುಚನ್ನ ಬಸವಾನಂದ ಸ್ವಾಮೀಜಿ, ಶ್ರೀ ಮಹಾಲಿಂಗಸ್ವಾಮೀಜಿ, ಜಯ ಬಸವಾನಂದ ಸ್ವಾಮೀಜಿ, ಶಾಸಕ ಕೆ.ಎಸ್‌.ಲಿಂಗೇಶ್‌, ಬಿಜೆಪಿ ತಾ.ಅಧ್ಯಕ್ಷ ಕೊರಟಿಕೆರೆ ಪ್ರಕಾಶ್‌, ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇಶ್‌, ಗ್ರಾನೈಟ್‌ ರಾಜಶೇಖರ್‌, ರೇಣುಕುಮಾರ್‌, ಉಮಾಶಂಕರ್‌, ರೈತ ಮುಖಂಡರಾದ ಕೆ.ಪಿ.ಕುಮಾರ್‌, ಮಲ್ಲಿಕಾರ್ಜನ್‌, ಡಿ.ಬಿ.ಹಾಲಪ್ಪ, ದಿಲೀಪ್‌, ಮಂಜುನಾಥಶೆಟ್ಟಿ, ಹಳೇಬೀಡು ಚೇತನ್‌, ಬಸವರಾಜು, ಅಡಗೂರು ಆನಂದ, ದೇವಿಹಳ್ಳಿ ಮಲ್ಲಿಕಾ, ಹಳೇಬೀಡು ಕೃಷ್ಣ, ರಘು, ಹುಲಿಕೆರೆ ಗ್ರಾಮದ ಅಳಿಯ ಭುಜಂಗ, ತೆಂಡೆಕೆರೆ ರಮೇಶ್‌, ಕಿರಣ್‌ ಅವರನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.

ಪೊಲೀಸರ ಕ್ರಮಕ್ಕೆ ಖಂಡನೆ:

ತೀವ್ರ ಬರಪೀಡಿತ ಹೋಬಳಿಗಳಿಗೆ ಎತ್ತಿನಹೊಳೆ, ರಣಘಟ್ಟಹಾಗೂ ಯಗಚಿ ಏತ ನೀರಾವರಿಯಿಂದ ಶಾಶ್ವತ ನೀರಾವರಿ ಕಲ್ಪಿಸಬೇಕು ಎಂದು ನಡೆದ ಹೋರಾಟದಲ್ಲಿ 83 ಜನರ ಮೇಲೆ ಆರೋಪ ಪಟ್ಟಿಸಲ್ಲಿಸಿರುವ ಕ್ರಮವನ್ನು ರೈತ ಸಂಘ ಹಾಗೂ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.

ಕುಮಾರಸ್ವಾಮಿ ದೇವೇಗೌಡರ ಮಾತನ್ನು ಒಮ್ಮೊಮ್ಮೆ ಕೇಳಲ್ಲ : ರೇವಣ್ಣ

ಸ್ವಾಮೀಜಿಗೆ ನೋಟಿಸ್:

ಹೋರಾಟದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳನ್ನು ಬಂಧಿಸಿದರೆ ಉಗ್ರ ಹೋರಾಟಕ್ಕೆ ಸರ್ಕಾರವೆ ನೇರ ಕಾರಣವಾಗುತ್ತದೆ ಎಂದು ರೈತ ಸಂಘ ಎಚ್ಚರಿಕೆ ನೀಡಿದೆ. ಈಗಾಗಲೇ ಪುಷ್ಪಗಿರಿ ಸ್ವಾಮೀಜಿಗಳಿಗೆ ನ್ಯಾಯಾಲಯದಿಂದ ಮೂರು ನೋಟಿಸ್‌ ಬಂದ ಬಗ್ಗೆ ಬೇಲೂರು ಪೊಲೀಸ್‌ ವೃತ್ತ ನೀರಿಕ್ಷಕ ಸಿದ್ದರಾಮೇಶ್ವರ್‌ ಪರಿಸ್ಥಿತಿ ಬಗ್ಗೆ ಶ್ರೀಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನೀರಾವರಿಗಾಗಿ ಜೈಲಿಗೆ ಹೋಗಲು ಸಿದ್ಧ

ಬಯಲುಸೀಮೆಗೆ ಶಾಶ್ವತ ನೀರಾವರಿ ಹೋರಾಟದಲ್ಲಿ ಭಾಗವಹಿಸಿದ 83 ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದು ನಿಜಕ್ಕೂ ಖಂಡನೀಯ. ಈ ಬಗ್ಗೆ ನಾವುಗಳು ಪೊಲೀಸ್‌ ವೃತ್ತ ನೀರಿಕ್ಷಕ ಸಿದ್ದರಾಮೇಶ್ವರ್‌ ಅವರಿಗೆ ‘ನೀವು ನ್ಯಾಯಾಲಯದ ಆದೇಶ ಪಾಲಿಸಿ ನಮ್ಮನ್ನು ಬಂಧಿಸಿ, ಯಾವ ಕಾರಣಕ್ಕೂ ರಾಜೀ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಲಾಗಿದೆ.

ವಿಷ ಜಂತು ಮೋದಿ ಓಡಿಸಲು ಎಲ್ಲರೂ ಒಂದಾಗಿ: ಜೆಡಿಎಸ್ ಶಾಸಕ

‘ತಕ್ಷಣವೇ ಸರ್ಕಾರ ಈ ಬಗ್ಗೆ ಕ್ರಮವಹಿಸಿ ನಮ್ಮ ನೀರಾವರಿ ಬೇಡಿಕೆಗಳಿಗೆ ಸ್ಪಂದಿಸಬೇಕು’ ಎಂದು ಸಚಿವ ಸಿ.ಟಿ.ರವಿಗೆ ಮನವರಿಕೆ ಮಾಡಲಾಗಿದೆ ಎಂದು ಪುಷ್ಪಗಿರಿ ಮಠದ ಡಾ. ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.