ಹೊಳೆನರಸೀಪುರ [ಸೆ.10]:  ದೂರದ ರಷ್ಯಾಕ್ಕೆ 7,200 ಕೋಟಿ ರು. ನೀಡಿರುವ ಪ್ರಧಾನಿ ಮೋದಿ ಅವರು ಎನ್‌ಡಿಆರ್‌ಎಫ್‌ನಿಂದ ಹಾಸನ ಜಿಲ್ಲೆಯ ನೆರೆಯ ಪರಿಹಾರಕ್ಕೆ ಕೇವಲ 200 ಕೋಟಿ ರು. ಬಿಡುಗಡೆ ಮಾಡಿರುವುದು ಏನೇನೂ ಸಾಲದು ಎಂದು ಸಂಸದ ಪ್ರಜ್ವಲ್‌ ರೇವಣ್ಣ ವಿಷಾದಿಸಿದರು.

ಪಟ್ಟಣದ ಚನ್ನಾಂಬಿಕ ಕಲ್ಯಾಣ ಮಂದಿರದಲ್ಲಿ ಸೋಮವಾರ ಜೆಡಿಎಸ್‌ ವತಿಯಿಂದ ನಡೆದ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಿಂದ 25 ಜನ ಬಿಜೆಪಿ ಸಂಸತ್‌ ಸದಸ್ಯರನ್ನು ಆಯ್ಕೆ ಮಾಡಿ ಜನತೆ ಕಳುಹಿಸಿದ್ದಾರೆ. ಇದಕ್ಕಾದರೂ ಮೋದಿ ಅವರಿಗೆ ಕೃತಜ್ಞತೆ ಬೇಡವೇ ಎಂದು ಪ್ರಶ್ನಿಸಿದರು.

ಮೌನವಹಿಸಿ ಅಭಿವೃದ್ಧಿ ಕೆಲಸ ಮಾಡುವರು ಬೇಕೋ, ಬೊಗಳೆ ಬಿಟ್ಟು ಮರಳು ಮಾಡುವರು ಬೇಕೋ ಎನ್ನೋದು ಜನರೇ ತೀರ್ಮಾನ ಮಾಡಬೇಕು ಎಂದು ತಿಳಿಸಿದರು. ಮೋದಿಯವರ ಮಾತು ಚೆನ್ನ ಆದರೆ ಕೃತಿಯಲ್ಲಿ ಇಲ್ಲವಲ್ಲ ಎಂದರು. ರಾಜ್ಯದಲ್ಲಿ ಜನರ ಆಸ್ತಿ, ಪಾಸ್ತಿ ಸೇರಿದಂತೆ ರಸ್ತೆ, ಸೇತುವೆಗಳು, ದೇಗುಲಗಳು ಹಾಗೂ ಕಟ್ಟಡನೆರೆ ಹಾವಳಿಯಿಂದ ಹಾನಿಯಾಗಿದೆ. ಒಟ್ಟು 35 ಸಾವಿರ ಕೋಟಿ ರು. ನಷ್ಟ ಅನುಭವಿಸಿದ್ದೇವೆ. ಉತ್ತರ ಕರ್ನಾಟಕದಲ್ಲಂತೂ ಬಹುತೇಕ ಜನ ಜೀವನ ಬೀದಿಗೆ ಬಿದ್ದಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯದಲ್ಲಿ ಕೆಲವರು ರೈತರ ಹೆಸರು ಹೇಳಿ ಅಧಿಕಾರ ಹಿಡಿದರು, ನಂತರದಲ್ಲಿ ರೈತರ ಪರ ಧ್ವನಿ ಹುದುಗಿಸಿಕೊಂಡಿದ್ದಾರೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಎಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ, ರೇವಣ್ಣರ ಅಭಿವೃದ್ಧಿ ಕಾರ್ಯಗಳು ವಿರೋಧ ಪಕ್ಷದವರ ಹೊಟ್ಟೆಕಿಚ್ಚಿಗೆ ಕಾರಣವಾಗಿದ್ದೇ ಅಸಹನೆ ವ್ಯಕ್ತವಾಗಲು ಕಾರಣ. ರಾಜ್ಯದಲ್ಲಿ ಯಾವುದೇ ಸರಕಾರ ಬಂದರೂ ಹೊಳೆನರಸೀಪುರದಲ್ಲಿ ಜೆಡಿಎಸ್‌ನದ್ದೇ ಸರಕಾರ ಇರುತ್ತದೆ. ಪ್ರತಿ ದಿನ ರೇವಣ್ಣ ಕುಟುಂಬ ಸದಸ್ಯರು ಒಂದಲ್ಲೊಂದು ಜನತೆಯ ಕಷ್ಟಕೇಳುವರಿದ್ದಾರೆ. ಇದರಿಂದ ಸಭೆಗಳು ಈ ಕ್ಷೇತ್ರದಲ್ಲಿ ವಿಶೇಷ ಎನಿಸದು ಎಂದರು.

ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ಸೋಲಿನಿಂದ ಕೇವಲ ಜೆಡಿಎಸ್‌ಗೆ ನಷ್ಟವಾಗಿಲ್ಲ. ಇಡೀ ರಾಜ್ಯಕ್ಕೆ ಅನ್ಯಾಯವಾಗಿದೆ. ತಮ್ಮ ಇಳಿವಯಸ್ಸಿನಲ್ಲಿ ತಾವು ಸೋತು, ಮೊಮ್ಮಗ ಪ್ರಜ್ವಲ್‌ನ ಗೆಲುವಿಗೆ ಕಾರಣರಾಗಿದ್ದಾರೆ. ಭವಿಷ್ಯದ ಚಿಂತನೆ ಮತ್ತು ಜನರ ಹಿತಾಸಕ್ತಿ ಅವರ ದೂರಾಲೋಚನೆಯಷ್ಟೆಎಂದರು.

ಕುಮಾರಸ್ವಾಮಿ ಒಮ್ಮೊಮ್ಮೆ ದೇವೇಗೌಡರ ಮಾತು ಕೇಳಲ್ಲ 

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿಯವರು ಒಮ್ಮೊಮ್ಮೆ ದೇವೇಗೌಡರ ಮಾತನ್ನೂ ಕೇಳುವುದಿಲ್ಲ. ಏನಾಗುತ್ತೋ ನೋಡಿಯೇ ಬಿಡುವ ಎನ್ನು ಧೈರ್ಯ ಮಾಡುತ್ತಾರೆ. ದೇವೇಗೌಡರ ಅನುಭವದ ಮಾತು ಕೇಳಬೇಕಿದೆ. ಪ್ರಜ್ವಲ್‌ ಚಿಕ್ಕವನು, ರಾಜಕೀಯ ಅಷ್ಟು ಸಲಭವಲ್ಲ, ಏನೇ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ, ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಹಾಗೂ ಹಿರಿಯ ಶಾಸಕ ಎ.ಟಿ.ರಾಮಸ್ವಾಮಿ ಮಾರ್ಗದರ್ಶನದಲ್ಲಿ ಹೆಜ್ಜೆ ಇಡುವುದು ಒಳ್ಳೆಯದು ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಸದ್ದಿಲ್ಲದೇ ನುಡಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರೈತರ ಸಾಲ ಮನ್ನಾ ಮಾಡಿದರು. ಯಾವ್ಯಾವ ರೈತರಿಗೆ ಎಷ್ಟು ಜನಕ್ಕೆ ಸಾಲಮನ್ನಾದಿಂದ ಅನುಕೂಲವಾಗಿದೆ ಎನ್ನುವ ಪಟ್ಟಿಮಾಡಲಾಗುತ್ತಿದೆ. ಪುಸ್ತಕ ಮಾಡಿ ನಿಮ್ಮ ಮುಂದೆ ಇಡುತ್ತೇವೆ. ಈ ಸರಕಾರದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರವೇ ಸಿಕ್ಕಿಲ್ಲ. ಇನ್ನು ನೆರೆ ಹಾವಳಿಯಿಂದ ಹೊಲ, ಮನೆ ಕಳೆದುಕೊಂಡವರಿಗೆ ನೆಲೆ ಕೊಡಲಾಗುವುದೇ ? ಎನ್‌ಡಿಆರ್‌ಎಫ್‌ ನಿಂದ ಬಂದ ಹಣ ರಾಜ್ಯ ಸರಕಾರದ ಪಾತ್ರ ಎನ್ನಲಾಗದು ಎಂದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣರನ್ನು ಸನ್ಮಾನಿಸಲಾಯಿತು.

ತಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಮಾಜಿ ಉಪಾಧ್ಯಕ್ಷ ಹುಚ್ಚೇಗೌಡ, ಜಿಪಂ ಮಾಜಿ ಸದಸ್ಯ ಎಚ್‌.ಎನ್‌.ದೇವೇಗೌಡ, ಹೇಮಾವತಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮುತ್ತಿಗೆ ಹರೇಹಳ್ಳಿ ರಾಜೇಗೌಡ, ಮುದ್ದನಹಳ್ಳಿ ರಮೇಶ್‌, ಜೆಡಿಎಸ್‌ ಅಲ್ಪಸಂಖ್ಯಾತರ ಮುಖಂಡ ನವಾಬ್‌ಖಾನ್‌ ಹಾಗೂ ಪುರಸಭೆ ಚುನಾಯಿತ ಸದಸ್ಯರು ಇದ್ದರು.