ಶಿವಮೊಗ್ಗ ಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷರಾಗಿ ಚನ್ನವೀರಪ್ಪಗೌಡ ಅಧಿಕಾರ ಸ್ವೀಕಾರ
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್.ಎಂ. ಮಂಜುನಾಥ ಗೌಡ ಅವರ ನಿರ್ದೇಶಕ ಸ್ಥಾನ ಅನರ್ಹಗೊಳಿಸಿ ಸಹಕಾರ ಇಲಾಖೆ ಜಂಟಿ ಆಯುಕ್ತರು ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಉಪಧ್ಯಕ್ಷರಾಗಿದ್ದ ಶಾಂತವೀರಪ್ಪಗೌಡ ಪ್ರಭಾರ ಅಧ್ಯಕ್ಷರಾಗಿ ಚನ್ನವೀರಪ್ಪಗೌಡ ಅಧಿಕಾರ ಸ್ವೀಕರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.21): ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಚನ್ನವೀರಪ್ಪ ಸೋಮವಾರ ಬ್ಯಾಂಕ್‌ನ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್.ಎಂ. ಮಂಜುನಾಥ ಗೌಡ ಅವರ ನಿರ್ದೇಶಕ ಸ್ಥಾನ ಅನರ್ಹಗೊಳಿಸಿ ಸಹಕಾರ ಇಲಾಖೆ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದರಿಂದ ಈ ಬೆಳವಣಿಗೆ ನಡೆದಿದೆ.
ಅಧ್ಯಕ್ಷ ಸ್ಥಾನಕ್ಕೆ ಮುಂದಿನ 10 ದಿನದೊಳಗೆ ಚುನಾವಣೆ ನಡೆಯುವ ಸಂಭವ ಇದೆ. ಚುನಾವಣಾ ಅಧಿಕಾರಿಯಾಗಿ ಡಾ. ನಾಗೇಂದ್ರ ಎಚ್. ಹೊನ್ನಳ್ಳಿಯವರನ್ನು ಈಗಾಗಲೇ ಸರ್ಕಾರ ನೇಮಿಸಿದೆ. ಸಹಕಾರ ಇಲಾಖೆ ಉಪನಿಬಂಧಕ ಹಾಗೂ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಾಗೇಶ್.ಎಸ್ ಡೋಂಗ್ರೆ ಸರ್ಕಾರದ ಆದೇಶದಂತೆ ಮತ್ತು ಡಿಸಿಸಿ ಬ್ಯಾಂಕ್ ನಿಯಮಾವಳಿಯಂತೆ ಚನ್ನವೀರಪ್ಪನವರಿಗೆ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ಸದಸ್ಯತ್ವ ರದ್ದು..!
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನವೀರಪ್ಪ, ನಕಲಿ ಬಂಗಾರದ ಮೇಲೆ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರಾಗಿದ್ದ ಆರ್.ಎಂ. ಮಂಜುನಾಥ ಗೌಡರನ್ನು ಬ್ಯಾಂಕ್‌ನ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ ಸಹಕಾರಿ ಇಲಾಖೆ ಜಂಟಿ ನಿರ್ದೇಶಕರು ಆದೇಶ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಬೈಲಾ ಪ್ರಕಾರ ಉಪಾಧ್ಯಕ್ಷ ಸ್ಥಾನದಲ್ಲಿದ್ದ ನಾನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದೇನೆ. ಅಧ್ಯಕ್ಷ ಸ್ಥಾನಕ್ಕೆ ಇನ್ನು 8-10 ದಿನದೊಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು. ರೈತರಿಗೆ ಸಾಲ ನೀಡುವುದಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುವುದರ ಜೊತೆಗೆ, ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಈ ಸಂದರ್ಭ ದಲ್ಲಿ ಬ್ಯಾಂಕ್ ನಿರ್ದೇಶಕ ಅಗಡಿ ಅಶೋಕ್ ಇದ್ದರು.