ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊರುವ ಆನೆಯನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಲಾಗಿದೆ. ಕಾಲು ನೋವಿನಿಂದ ಬಳಲುತ್ತಿರುವ ಸಾಗರ್ ಆನೆಯ ಬದಲು ಇದೇ ಮೊದಲ ಬಾರಿಗೆ ಸೋಮಣ್ಣ ಆನೆ 650 ಕೆಜಿ ಬೆಳ್ಳಿ ಅಂಬಾರಿ ಹೊರಲಿದೆ. ಇಂದು ಕೋಟೆ ಅರಮನೆಯಿಂದ ಜಂಬೂಸವಾರಿ ಅದ್ಧೂರಿಯಾಗಿ ನಡೆಯಲಿದೆ.
ಶಿವಮೊಗ್ಗ: ಮೈಸೂರಿನ ಬಳಿಕ ರಾಜ್ಯದಲ್ಲಿ ಅತೀ ಹೆಚ್ಚು ಖ್ಯಾತಿಯನ್ನು ಶಿವಮೊಗ್ಗ ದಸರಾ ಪಡೆದುಕೊಂಡಿದೆ. ಆದರೆ ಈ ಬಾರಿಯ ದಸರಾದಲ್ಲಿ ನಿರೀಕ್ಷಿತ ಬದಲಾವಣೆಯಾಗಿದ್ದು, ಅಂಬಾರಿ ಹೊರುವ ಆನೆಯನ್ನು ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿಂದೆ ನಿಗದಿಪಡಿಸಲಾಗಿದ್ದ ಸಾಗರ್ ಆನೆಯೂ ಅಂಬಾರಿ ಹೊರುವ ರೇಸ್ನಿಂದ ಹೊರ ನಡೆದಿದ್ದು, ಸೋಮಣ್ಣ ಆನೆಗೆ ಈಗ ಹೊಸದಾಗಿ ಜವಾಬ್ದಾರಿ ನೀಡಲಾಗಿದೆ.
ಕಳೆದ ಆರು ವರ್ಷಗಳಿಂದ ಸಾಗರ್ ಆನೆ ಅಂಬಾರಿ ಹೊರುವ ಜವಾಬ್ದಾರಿಯನ್ನು ನಿರ್ವಹಿಸಿತ್ತು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೋಮಣ್ಣ ಆನೆ ಅಂಬಾರಿ ಹೊರಲಿದೆ. ಸಾಗರ್ ಆನೆ ಕಾಲು ನೋವಿನಿಂದ ಬಳಲುತ್ತಿದ್ದು, ಯಾವುದೇ ರಿಸ್ಕ್ ತೆಗೆದುಕೊಕೊಳ್ಳಲು ಮುಂದಾಗದ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಸೋಮಣ್ಣನಿಗೆ ಇದು ಅಗ್ನಿಪರೀಕ್ಷೆ
ಅಂದಹಾಗೇ, ಖದರ್ ಸೋಮಣ್ಣ ಆನೆ ಸಕ್ರೆಬೈಲು ಬಿಡಾರದಿಂದ ಬಂದಿದ್ದು, ಇದೇ ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಅಂಬಾರಿಯನ್ನು ಹೊರಲಿದೆ. 650 KG ಬೆಳ್ಳಿ ಅಂಬಾರಿ ಹೊರುವ ಜವಾಬ್ದಾರಿ ಸೋಮಣ್ಣ ಹೆಗಲೇರಿದೆ. ಕಳೆದ ಆರು ವರ್ಷಗಳಿಂದ ಅಂಬಾರಿ ಹೊರುತ್ತಿದ್ದ ಸಾಗರ್ ಬದಲು ಸೋಮಣ್ಣಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಈ ಹಿಂದೆಯೂ ಸಾಗರ್ ಆನೆ ಅಂಬಾರಿ ಹೊರುವ ಜವಾಬ್ದಾರಿಯನ್ನು ಮಿಸ್ ಮಾಡಿಕೊಂಡಿತ್ತು.
ಶಿವಮೊಗ್ಗ ದಸರಾದಲ್ಲಿ ಸಾಗರ್ ಗೆ ಕಂಟಕ
2019ರ ದಸರಾ ಸಂದರ್ಣದಲ್ಲಿ ಸಾಗರ್ ಆನೆ ಕೊನೆಯ ಕ್ಷಣದಲ್ಲಿ ಅಸ್ವಸ್ಥ ಆಗಿತ್ತು. ಈ ಸಂದರ್ಭದಲ್ಲಿ ಅಂಬಾರಿಯನ್ನು ಲಾರಿ ಮೇಲೆ ಮೆರವಣಿಗೆ ಮಾಡಲಾಗಿತ್ತು. ಆ ಬಳಿಕ 2021ರಲ್ಲಿ ಕೋವಿಡ್ ಕಾರಣ ತಾಲೀಮು ಇರಲಿಲ್ಲ, ಆದ್ದರಿಂದ ಅಂಬಾರಿ ಹೊತ್ತಿರಲಿಲ್ಲ. 2023ರಲ್ಲಿ ವಿಜಯದಶಮಿ ಹಿಂದಿನ ದಿನ ಕುಮ್ಕಿ ಆನೆ ನೇತ್ರಾವತಿ ಮರಿ ಹಾಕಿತ್ತು. ಹಾಗಾಗಿ ಆನೆ ಮೇಲೆ ಅಂಬಾರಿ ಇರಲಿಲ್ಲ. ಈ ಬಾರಿ ಅಂಬಾರಿ ಹೊರಬೇಕಿತ್ತು, ಆದರೆ ಕಾಲು ನೋವಿನಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಬದಲಾವಣೆ ಮಾಡಲಾಗಿದೆ.
ಇಂದು ಮಧ್ಯಾಹ್ನ ಕೋಟೆ ಶಿವಪ್ಪನಾಯಕ ಅರಮನೆ ಮುಂಭಾಗದಿಂದ ಅಲ್ಲಮಪ್ರಭು ಮೈದಾನದವರೆಗೆ ಜಂಬೂಸವಾರಿ ನಡೆಯಲಿದ್ದು, ಸೋಮಣ್ಣ ಆನೆ ಅಂಬಾರಿ ಹೊರಲಿದ್ದಾನೆ. ಸೋಮಣ್ಣ ಜೊತೆಗೆ ಸಾಗರ್ ಮತ್ತು ಬಹದ್ದೂರ್ ಆನೆಗಳು ಸಾಥ್ ನೀಡಲಿವೆ.


