ಮಿಜೋರಾಮ್‌ ತಂಡದ ಚಿನ್ಮಯ್‌ ಸುಥಾರ್‌ ರಣಜಿ ಪಂದ್ಯದಲ್ಲಿ ಅಜೇಯ 400 ರನ್‌ ಗಳಿಸಿದ್ದಾರೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಕೇವಲ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಈ ಮೈಲಿಗಲ್ಲು ತಲುಪಿದ ವಿಶ್ವದ 10ನೇ ಕ್ರಿಕೆಟಿಗನಾಗಿದ್ದಾರೆ.

ಸೊವಿಮಾ(ನಾಗಲ್ಯಾಂಡ್‌): ನಾಗಾಲ್ಯಾಂಡ್‌ ವಿರುದ್ಧದ ರಣಜಿ ಪ್ಲೇಟ್‌ ಗುಂಪಿನ ಪಂದ್ಯದಲ್ಲಿ ಮಿಜೋರಾಮ್‌ ತಂಡದ ಚಿನ್ಮಯ್‌ ಸುಥಾರ್‌ 400 ರನ್‌ ಗಳಿಸಿದ್ದಾರೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ 400 ರನ್‌ ಗಳಿಸಿದ ಭಾರತದ ಕೇವಲ 2ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಮುಂಬೈ ಪರ ವಿಜಯ್‌ ಹಜಾರೆ ಟೂರ್ನಿ ಆಡಿದ್ದ ಚಿನ್ಮಯ್‌, ಈಗ ಮಿಜೋರಾಂ ಪರ ಆಡುತ್ತಿದ್ದಾರೆ. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 517 ಎಸೆತಗಳಲ್ಲಿ 40 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ ಅಜೇಯ 400 ರನ್‌ ಸಿಡಿಸಿದರು. ತಂಡ 9 ವಿಕೆಟ್‌ಗೆ 581 ರನ್‌ ಕಲೆಹಾಕಿ ಡಿಕ್ಲೇರ್‌ ಘೋಷಿಸಿತು. ಚಿನ್ಮಯ್‌ಗೂ ಮುನ್ನ ಮಹಾರಾಷ್ಟ್ರದ ಬಾಬಾಸಾಹೇಜ್‌ ನಿಂಬಾಳ್ಕರ್‌ 400 ರನ್‌ ಸಾಧನೆ ಮಾಡಿದ್ದರು. 1948ರಲ್ಲಿ ಕಥಿಯವಾಡ ವಿರುದ್ಧ ರಣಜಿ ಪಂದ್ಯದಲ್ಲಿ ಅವರು 443 ರನ್‌ ಸಿಡಿಸಿದ್ದರು.

ಇನ್ನು, ಪ್ರಥಮ ದರ್ಜೆ ಕ್ರಿಕೆಟ್‌ ಇತಿಹಾಸದಲ್ಲಿ 400 ರನ್‌ ತಲುಪಿದ ವಿಶ್ವದ 10ನೇ ಕ್ರಿಕೆಟಿಗ ಚಿನ್ಮಯ್‌. 1994ರಲ್ಲಿ ಇಂಗ್ಲೆಂಡ್‌ ಕೌಂಟಿಯ ಡರ್ಹ್ಯಾಮ್‌ ವಿರುದ್ಧ ವಾರ್ವಿಕ್‌ಶೈರ್‌ ಪರ ವೆಸ್ಟ್‌ಇಂಡೀಸ್‌ ಬ್ಯಾಟರ್‌ ಬ್ರಿಯಾನ್‌ ಲಾರಾ ಔಟಾಗದೆ 501 ರನ್‌ ಗಳಿಸಿದ್ದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈಗಲೂ ದಾಖಲೆಯಾಗಿಯೇ ಉಳಿದಿದೆ.

ಬಿಸಿಸಿಐ ಆಯ್ಕೆ ಸಮಿತಿಗೆ ರಮೇಶ್‌ ಹೊಸ ಸದಸ್ಯ, ಪ್ರಗ್ಯಾನ್‌ ಮುಖ್ಯಸ್ಥ

ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಅಜಿತ್‌ ಅಗರ್ಕರ್‌ ನಿರ್ಗಮನದ ಬಳಿಕ ಸಮಿತಿಯಲ್ಲಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ, ಭಾರತ ಮಹಿಳಾ ತಂಡದ ಮಾಜಿ ಕೋಚ್‌ ರಮೇಶ್‌ ಪೊವಾರ್‌ ಆಯ್ಕೆಯಾಗಿದ್ದಾರೆ. ರಮೇಶ್‌ ಸಮಿತಿಯಲ್ಲಿ ಸದಸ್ಯರಾಗಿರಲಿದ್ದು, ಮುಖ್ಯಸ್ಥ ಸ್ಥಾನಕ್ಕೆ ಮಾಜಿ ಬೌಲರ್‌ ಪ್ರಗ್ಯಾನ್‌ ಓಝಾ ಅವರನ್ನು ನೇಮಿಸಲಾಗಿದೆ.

ಅಜಿತ್‌ ಅವಧಿ ಈ ತಿಂಗಳ ಆರಂಭದಲ್ಲಿ ಕೊನೆಗೊಂಡಿತ್ತು. ಹೀಗಾಗಿ ರಮೇಶ್‌ ಸಮಿತಿಗೆ ಆಯ್ಕೆಯಾಗಿದ್ದಾರೆ. ಆದರೆ ಭಾರತ ಪರ ಗರಿಷ್ಠ ಟೆಸ್ಟ್‌ ಆಡಿದ ಅನುಭವದ ಮೇರೆಗೆ ಪ್ರಗ್ಯಾನ್‌ರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಅಜಿತ್‌ ನಿರ್ಗಮನದ ಬಳಿಕ ಈವರೆಗೂ ಪ್ರಗ್ಯಾನ್‌ ಹಂಗಾಮಿ ಮುಖ್ಯಸ್ಥರಾಗಿದ್ದರು. ಅವರು ಭಾರತ ಪರ 24 ಟೆಸ್ಟ್‌ ಆಡಿದ್ದಾರೆ. ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಆಯ್ಕೆ ಸಮಿತಿಯ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.