ತಮಿಳುನಾಡಿಗೆ ನೀರು ಬಿಟ್ಟಿಲ್ಲ ಚಲುವರಾಯಸ್ವಾಮಿ : ತಮಿಳುನಾಡಿನವರ ಒತ್ತಡಕ್ಕೆ ನಾವು ಮಣಿದಿಲ್ಲ
ನಾವು ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ತಮಿಳುನಾಡಿನವರ ಒತ್ತಡಕ್ಕೆ ಮಣಿದೂ ಇಲ್ಲ. ನದಿಯಲ್ಲಿ ಹರಿದುಹೋಗುತ್ತಿರುವುದು ಸೋರಿಕೆ ನೀರು ಮಾತ್ರ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದರು.
ಮಂಡ್ಯ : ನಾವು ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ತಮಿಳುನಾಡಿನವರ ಒತ್ತಡಕ್ಕೆ ಮಣಿದೂ ಇಲ್ಲ. ನದಿಯಲ್ಲಿ ಹರಿದುಹೋಗುತ್ತಿರುವುದು ಸೋರಿಕೆ ನೀರು ಮಾತ್ರ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದರು.
ನಾವು ನೀರು ಬಿಡದೇ ಇದ್ದರೂ ಹೋಗೋ ನೀರು ಹೋಗುತ್ತಲೇ ಇದೆ. ಸೋರಿಕೆ ನೀರು ಹೊರತುಪಡಿಸಿ ಅಣೆಕಟ್ಟೆಯ ಗೇಟುಗಳಿಂದ ನೀರು ಹೋಗುತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದಾಗ, ಸೋರಿಕೆ ನೀರು ೩ ಸಾವಿರ ಕ್ಯುಸೆಕ್‌ವರೆಗೆ ಹೋಗುವುದೇ ಎಂದು ಪ್ರಶ್ನಿಸಿದರು. ಸ್ವಲ್ಪ ಸಿಡಿಮಿಡಿಗೊಂಡ ಸಚಿವರು, ಸೀಪೇಜ್ ವಾಟರ್ ಮೂರು ಸಾವಿರ ಹೋಗುತ್ತೋ, ಏಳು ಸಾವಿರ ಹೋಗುತ್ತೋ ಗೊತ್ತಿಲ್ಲ. ತಮಿಳುನಾಡಿನವರ ಒತ್ತಡಕ್ಕೆ ನಾವು ಬಗ್ಗಿಲ್ಲ. ನಾವು ನಮ್ಮ ರೈತರನ್ನು ರಕ್ಷಣೆ ಮಾಡುತ್ತೇವೆ. ನಾವು ನೀರು ಬಿಟ್ಟಿಲ್ಲ. ಅನುಮಾನವಿದ್ದರೆ ಹೋಗಿ ನೋಡಿಕೊಂಡು ಬನ್ನಿ ಎಂದು ಸ್ವಲ್ಪ ಕೋಪದಿಂದಲೇ ಹೇಳಿದರು.
ಸದ್ಯ ಮಂಡ್ಯ ಜಿಲ್ಲೆಯಲ್ಲಿ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಕೆಲವು ಕಡೆ ಬಿತ್ತನೆ ಮಾಡಿದ ವೇಳೆ ಮಳೆಯಿಲ್ಲದೆ ಹಾಳಾಗಿದೆ. ಕೆಆರ್‌ಎಸ್ ಅಚ್ಚುಕಟ್ಟು ಭಾಗದಲ್ಲಿ ಮಾತ್ರ ಬೆಳೆ ಇದೆ. ಜಿಲ್ಲೆಯ ಬೇರೆ ಭಾಗಗಳಲ್ಲಿ ಬೆಳೆಗಳು ನಾಶವಾಗಿವೆ. ಬೆಳೆ ಸಮೀಕ್ಷೆಗೆ ತಾಲೂಕುವಾರು ಟಾಸ್ಕ್‌ಫೋರ್ಸ್ ರಚಿಸಿ ಸಮೀಕ್ಷೆ ನಡೆಸಲಾಗುವುದು. ಸಮಿತಿಯ ವರದಿ ಆಧರಿಸಿ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಪರಿಹಾರವನ್ನು ನಿಯಮಾನುಸಾರ ಬಿಡುಗಡೆ ಮಾಡಲಿದ್ದೇವೆ. ಸದ್ಯ ಬೆಳೆದಿರುವ ಬೆಳೆಗಳಿಗೆ ಸದ್ಯ ನೀರು ಕೊಡುತ್ತೇವೆ. ಹದಿನೈದು ದಿನ ಆದ ಮೇಲೆ ಏನಾಗುವುದೋ ಗೊತ್ತಿಲ್ಲ ಎಂದರು.