ದಲಿತರನ್ನು ಸಿಎಂ ಮಾಡುತ್ತೇವೆ ಅಂತ ಕಾಂಗ್ರೆಸ್ ಪಕ್ಷ 70 ವರ್ಷದಿಂದ ವಂಚಿಸುತ್ತಿದೆ. ಹಾಗಾಗಿ, ಕಾಂಗ್ರೆಸ್ ನಲ್ಲಿರುವ ದಲಿತ ನಾಯಕರು ಸೀಡ್ ಲೆಸ್ ಮತ್ತು ಶುಗರ್ ಲೆಸ್ ರೀತಿ ಆಗಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಮೈಸೂರು (ಮೇ.28): ದಲಿತರನ್ನು ಸಿಎಂ ಮಾಡುತ್ತೇವೆ ಅಂತ ಕಾಂಗ್ರೆಸ್ ಪಕ್ಷ 70 ವರ್ಷದಿಂದ ವಂಚಿಸುತ್ತಿದೆ. ಹಾಗಾಗಿ, ಕಾಂಗ್ರೆಸ್ ನಲ್ಲಿರುವ ದಲಿತ ನಾಯಕರು ಸೀಡ್ ಲೆಸ್ ಮತ್ತು ಶುಗರ್ ಲೆಸ್ ರೀತಿ ಆಗಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ದಲಿತರನ್ನು ಮುಖ್ಯಮಂತ್ರಿ ಮಾಡದೆ ವಂಚಿಸುತ್ತಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ನಮ್ಮ ತಕರಾರು ಇಲ್ಲ. ಆದರೆ ಕಾಂಗ್ರೆಸ್ ಪಕ್ಷ ದಲಿತರಿಗೆ ಬಗನಿಗೂಟ ಹೊಡೆದಿದೆ ಎಂದು ಟೀಕಿಸಿದರು.
ಆನೆ ಮರಿ ಹಾಕಲು 24 ತಿಂಗಳು ಬೇಕು. ಇದೀಗ ಕಾಂಗ್ರೆಸ್ ನಲ್ಲಿ ಕಡೆಗೂ ಆನೆ ಮರಿ ಹಾಕಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಈಗ ಬದಲಾವಣೆಗೆ ಮುಂದಾಗಿದೆ. ‘ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಎಂಬಂತಾಗಿದೆ ಕಾಂಗ್ರೆಸ್ ಕಥೆ. ಆದರೆ ದಲಿತರಲ್ಲಿ ಯಾರಿಗೂ ನಮಗೆ ಸಿಎಂ ಕೊಡಿ ಎಂದು ಕೇಳುವ ತಾಕತ್ತು ಇಲ್ಲ ಎಂದು ಅವರು ದೂರಿದರು. ದಲಿತರು ಸಿಎಂ ಆಗಬೇಕಾದ ಸಮಯದಲ್ಲಿ ದಲಿತರಿಗೆ ಸಮಾಧಿ ಕಟ್ಟಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಈಗಲಾದರೂ ದಲಿತರಾದ ಪರಮೇಶ್ವರ್ ಪರ ಅವರು ದ್ವನಿ ಎತ್ತುತ್ತಿಲ್ಲ.
ಆಗ ಪರಮೇಶ್ವರ್ ಅವರನ್ನು ಸೋಲಿಸಿದ್ದರು. ಕಾಂಗ್ರೆಸ್ ನ ದಲಿತ ನಾಯಕರು ಯಾರು ಕೂಡ ಸಚಿವ ಸ್ಥಾನ ತೆಗೆದುಕೊಳ್ಳದೆ ಪ್ರತಿಭಟಿಸಬೇಕು ಎಂದು ಅವರು ಆಗ್ರಹಿಸಿದರು. ಎನ್. ರಾಚಯ್ಯ, ಸಿ. ಬಸವಲಿಂಗಪ್ಪ, ವಿ. ಶ್ರೀನಿವಾಸ ಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಪರಮೇಶ್ವರ್ ವರೆಗೂ ದಲಿತ ನಾಯಕರಿಗೆ ಕಾಂಗ್ರೆಸ್ ಪಕ್ಷ ನಕ್ಷತ್ರ ತೋರಿಸಿ ವಂಚಿಸಿದೆ. ದಲಿತರಿಗೆ ಮೋಸ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಬುದ್ಧಿ ಕಲಿಸುವ ಮೂಲಕ ತಮ್ಮ ಶಕ್ತಿ ತೋರಿಸಬೇಕು ಎಂದರು.
ದಲಿತರಿಗೆ ಅನ್ಯಾಯ
ಬಿಜೆಪಿ ಸಂವಿಧಾನ ವಿರೋಧಿ ಅಂತ ಹೇಳುತ್ತಾರೆ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಮಾನ ಮಾಡಿದ್ದು ಕಾಂಗ್ರೆಸ್. ಕೆಲ ದಲಿತ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ವಿಧಿ ಇಲ್ಲದೆ ಕಾಂಗ್ರೆಸ್ ಎನ್ನುವ ದೆವ್ವವನ್ನು ದಲಿತರು ತಬ್ಬಿಕೊಳ್ಳುತ್ತಿದ್ದಾರೆ. ದಲಿತರಿಗೆ ಅನ್ಯಾಯ ಮಾಡಿರೋದು ಕಾಂಗ್ರೆಸ್. ಇನ್ನಾದರೂ ದಲಿತರು ಬದಲಾಗಬೇಕಿದೆ. ಎಲ್ಲ ಸಮುದಾಯಗಳನ್ನು ಕಾಂಗ್ರೆಸ್ ವಂಚಿಸುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಮೈಸೂರು ವಿವಿ ಪ.ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಸುಮ್ಮನಿದ್ದಾರೆ. ಪ.ವರ್ಗದ ವಿದ್ಯಾರ್ಥಿಗಳ ಕಲ್ಯಾಣಕ್ಕೆ ವಿವಿಯಲ್ಲಿ 70-80 ಕೋಟಿ ರೂ. ಹಣ ಮೀಸಲಿಡಬೇಕು. ಆದರೆ, ವಿವಿಯಲ್ಲಿ ಪ.ವರ್ಗದ ವಿದ್ಯಾರ್ಥಿಗಳು ತಮ್ಮ ಸೌಲಭ್ಯ ಕೇಳಿದರೂ ಹೆದರಿಸುವ ಕೆಲಸ ನಡೆಯುತ್ತಿದೆ. ಇದು ತಾಲಿಬಾನ್ ವಿವಿಯ ಎಂದು ಪ್ರಶ್ನಿಸಿದರು.
ಕುಲಸಚಿವರಾದ ಎಂ.ಕೆ. ಸವಿತಾ ಅವರು ಮೈಸೂರು ವಿವಿಯಲ್ಲಿಯೇ ಪಿಎಚ್.ಡಿ ಹೇಗೆ ಮಾಡುತ್ತಾರೆ? ಭೂಗೋಳ ಶಾಸ್ತ್ರದ ಪ್ರೊ. ಭಾರತಿ ಅವರು ಅವರ ಗೈಡ್ ಆಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ನಾನು 15 ದಿನದಲ್ಲಿ ಮತ್ತೆ ಬರುತ್ತೇನೆ. ಖುದ್ದು ವಿವಿಗೆ ಭೇಟಿ ನೀಡುತ್ತೇನೆ. ಪ.ವರ್ಗದ ವಿದ್ಯಾರ್ಥಿಗಳಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಿ, ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ಅವರು ಹೇಳಿದರು.

