ಪಿಯು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಉಚಿತ ತರಬೇತಿ: ಶಾಸಕ ಪ್ರದೀಪ್ ಈಶ್ವರ್
ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರ ತೆರೆದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ಉಚಿತವಾಗಿ ನೀಡುವುದಾಗಿ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಚಿಕ್ಕಬಳ್ಳಾಪುರ (ಜು.27): ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರ ತೆರೆದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ಉಚಿತವಾಗಿ ನೀಡುವುದಾಗಿ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಪ್ರಯುಕ್ತ ಇಂದು ತಾಲೂಕಿನ ಅಜ್ಜವಾರ ಗ್ರಾಮಕ್ಕೆ ಭೇಟಿ ನೀಡಿ, ಜನತೆಯ ಸಮಸ್ಯೆಗಳನ್ನು ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ, ಜನರಿಂದ ಅಹವಾಲು ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇವಲ ನನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ನೀಟ್, ಸಿಇಟಿ, ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ತರಬೇತಿ ಮತ್ತು ಪದವಿ ಪೂರೈಸಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಐಎಎಸ್, ಐಪಿಎಸ್, ಐಆರ್‌ಎಸ್ ಸೇರಿ ಎಲ್ಲಾ ತರಬೇತಿಗಳನ್ನು ವಸತಿ ಮತ್ತು ಊಟ ತಿಂಡಿಯೊಂದಿಗೆ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಸುಮಾರು 3 ರಿಂದ 4 ಕೋಟಿ ರು. ವೆಚ್ಚವಾಗಲಿದ್ದು, ಆ ಹಣವನ್ನು ತಾವೇ ಭರಿಸುವುದಾಗಿ ತಿಳಿಸಿದರು.
ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ ‘ರಾಜಕೀಯ ಗ್ರಹಣ’: ಕಾಮಗಾರಿ ಇನ್ನೂ ಅಪೂರ್ಣ
ಶಾಲಾಮಕ್ಕಳು ತಮ್ಮ ಗ್ರಾಮಕ್ಕೆ ಬಸ್ ಬಾರದಿರುವರಿಂದ ನಿತ್ಯ ಬಸ್‌ಗಾಗಿ ಎರಡು ಕಿ.ಮೀ ನಡೆದುಕೊಂಡು ಹೋಗಬೇಕಾಗಿದೆ ಎಂದು ಸಮಸ್ಯೆ ಹೇಳಿಕೊಂಡಾಗ, ಮೂರು ನಾಲ್ಕು ದಿನದಲ್ಲಿ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ, ಉತ್ತಮ ಅಂಕ ಗಳಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹೆತ್ತ ತಂದೆ-ತಾಯಿ, ವಿದ್ಯೆ ನೀಡಿದ ಗುರುಗಳಿಗೆ ಮತ್ತು ದೇಶಕ್ಕೆ ಕೀರ್ತಿ ತರಬೇಕೇಂದು ತಿಳಿಸಿದರು.
ಸ್ಮಶಾನದ ಜಾಗಕ್ಕೆ ವ್ಯವಸ್ಥೆ: ಅಜ್ಜವಾರ ಗ್ರಾಮದ ಸ್ಮಶಾನದಲ್ಲಿ ಹೊಸ ಹೆಣ ಹೂಳಲು ಜಾಗವಿಲ್ಲದೇ ಹೂತಿರುವ ಹಳೆ ಹೆಣ ತೆಗೆದು ಅಲ್ಲಿ ಮತ್ತೆ ಹೊಸ ಹೆಣ ಹೂಳುತ್ತಿರುವ ಬಗ್ಗೆ ಗ್ರಾಮಸ್ಥರು ದೂರಿದಾಗ, ಶೀಘ್ರದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಂದಾಯ ಇಲಾಖೆಯಿಂದ ಸ್ಮಶಾನಕ್ಕೆ ಜಾಗ ನೀಡುವ ಭರವಸೆ ನೀಡಿದರು. ಗ್ರಾಮದಲ್ಲಿ ಮತ್ತು ದಲಿತ ಕಾಲೋನಿಯಲ್ಲಿ ಮೂಲ ಭೂತ ಸೌಕರ್ಯಗಳ ಕೊರತೆ ಸಾಕಷ್ಟುಇದ್ದು, ಚರಂಡಿ,ರಸ್ತೆ, ಮನೆನೆಗೆ, ನಳ ಸಂಪರ್ಕವನ್ನು ಅನುದಾನ ಬಂದ ತಕ್ಷಣ ಒದಗಿಸುವುದಾಗಿ, ಆಧಾರ್ ಕಾರ್ಡ್, ಪಡಿತರ ಚೀಟಿಗಳ ಸಮಸ್ಯೆ ಗ್ರಾಮದ ಸಾಕಷ್ಟುಕುಟುಂಬಗಳಲ್ಲಿ ಇದೆ.
ಇದರೊಂದಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ವೇತನ ಸೇರಿದಂತೆ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಆರು ತಿಂಗಳೊಳಗೆ ನೀಡುವ ಭರವಸೆ ನೀಡಿದರು. ಗ್ರಾಮದಲ್ಲಿ ಜಮೀನುಗಳ ಪೋಡಿ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ತಿಳಿಸಿದಾಗ ಕಂದಾಯ ಮತ್ತು ಭೂಮಾಪನ ಇಲಾಖೆಗಳ ಅಧಿಕಾರಿಗಳಿಗೆ ಸಮಸ್ಯೆಗಳ ಪರಿಹಾರ ಶೀಘ್ರದಲ್ಲಿ ನಿವಾರಣೆ ಮಾಡುವಂತೆ ತಿಳಿಸಿದರು. ಗ್ರಾಮೀಣ ಜನತೆಯ ಆರೋಗ್ಯದ ಕಾಳಜಿ ವಹಿಸಲು ಉಚಿತ ಆರೋಗ್ಯ ತಪಾಸಣಾ ಶಿಬಿರ ಮುಂದಿನ ವಾರ ಗ್ರಾಮದಲ್ಲಿ ಮಾಡುತ್ತಿದ್ದು, ಅದರಲ್ಲಿ ಹೃದಯ ಸಂಬಂಧಿ, ಕ್ಯಾನ್ಸರ್ ಸೇರಿದಂತೆ ಎಲ್ಲಾ ರೀತಿಯ ಕಾಯಿಲೆಗಳ ತಪಾಸಣೆ, ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುವುದು ಎಂದರು.
ಕ್ಷೇತ್ರದ ಜನತೆಯ ಅಹವಾಲು ಸ್ವೀಕರಿಸಿ, ಪರಿಹಾರ ನೀಡುವ ಸಲುವಾಗಿ ಕಳೆದ 8 ರಂದು ತಾವು ತಮ್ಮ ಹೆಸರಿನಲ್ಲಿ ಆರಂಭಿಸಿರುವ ವೆಬ್‌ಸೈಟ್‌ಗೆ ಸುಮಾರು 2000ಕ್ಕೂ ಹೆಚ್ಚು ದೂರುಗಳು ಬಂದಿದ್ದು ಅವುಗಳಲ್ಲಿ ಶೇ.80 ರಷ್ಟುದೂರುಗಳಿಗೆ ಪರಿಹಾರ ನೀಡಿದ್ದೇವೆ . ಉಳಿದ ಶೇ.20 ರಷ್ಟುಸಮಸ್ಯೆಗಳು ನನ್ನ ವ್ಯಾಪ್ತಿಗೆ ಬರುವುದಿಲ್ಲವೆಂದು ಅವರಿಗೆ ತಿಳಿಸಿದ್ದೇನೆ, ಚಿಕ್ಕಬಳ್ಳಾಪುರ ನಗರದಿಂದ 800 ಅಹವಾಲುಗಳು ಬಂದಿದ್ದು ಅವುಗಳಲ್ಲಿ 750 ವಿಲೇವಾರಿಯಾಗಿವೆ. ದೂರು ಬಂದ ಎರಡು ಗಂಟೆಯೊಳಗೆ ದೂರುದಾರರೊಂದಿಗೆ ನಾನೇ ಖುದ್ದು ಮಾತನಾಡಿ ಪರಿಹಾರ ಮಾಡಿದ್ದೇನೆಂದು ತಿಳಿಸಿದರು.
ಈ ವೇಳೆ ತಾ.ಪಂ. ಇಓ ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುಳಾ .ಬೆಸ್ಕಾಂನ ಎಇಇ ವಾಸುದೇವ್, ಜೆಇ ಬಸವರಾಜು, ಪಿಡಿಒಗಳಾದ ಪೂರ್ಣಿಮಾ, ಮುನಿರಾಜು, ಕ್ಷೇತ್ರಶಿಕ್ಷಣಾಧಿಕಾರಿ ಶೋಭಾ, ಬಿಆರ್‌ಸಿ ಸಂಯೋಜನಾಧಿಕಾರಿ ಅರುಣ್, ಸಿಡಿಪಿಓ ಗಂಗಾಧರ್,ಟಿಐಎಂಎಸ್ ಸಂಯೋಜನಾಧೀಕಾರಿ ಗಿರೀಶ್, ಕಂದಾಯ ಇಲಾಖೆಯ ಕಿರಣ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್, ಮುಖಂಡರಾದ ನಾರಾಯಣಸ್ವಾಮಿ, ದಯಾನಂದ್, ಅನಂತ್, ರವಿ, ಮುರಳಿ, ವೆಂಕಟೇಶ್, ಶಿವಕುಮಾರ್, ನಾಗೇಶ್ ಸೇರಿದಂತೆ ಮತ್ತಿತರರು ಇದ್ದರು.
ಡಾ.ಕೆ.ಸುಧಾಕರ್ ಜೊತೆಗೂ ಊಟ ಮಾಡ್ತೀನಿ!: ನಗರಸಭೆಯ ಸದಸ್ಯರು ಮತ್ತು ದಲಿತ ಮುಖಂಡರು ಶಾಸಕ ಪ್ರದೀಪ್ ಈಶ್ವರ್ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಶಾಸಕ ಅಧಿಕಾರಿಗಳು ಬಂದಾಗ ಸೌಜನ್ಯದಿಂದ ಊಟ ಮಾಡಿಸಿದ್ದೇನೆ. ಡಾ.ಕೆ.ಸುಧಾಕರ್ ಬಂದರೂ ಜೊತೆಯಲ್ಲಿ ಕೂತು ಊಟ ಮಾಡ್ತೀನಿ ತಪ್ಪೇನಿದೆ?. ನನ್ನ ಜೊತೆ ಜೆಡಿಎಸ್‌ನವರು ಚೆನ್ನಾಗಿದ್ದಾರೆ. ಬಿಜೆಪಿಯವರು ಚೆನ್ನಾಗಿದ್ದಾರೆ.
ಚಂದ್ರಯಾನದ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ವಿಜ್ಞಾನಿಗಳು
ನಮ್ಮ ಪಕ್ಷದವರು ಚೆನ್ನಾಗಿದ್ದಾರೆ. ನೀವು ಬಂದರೂ ಬನ್ನಿ ಊಟ ಮಾಡೋಣ ಅಂತೀನಿ ಯಾರೇ ಬಂದ್ರೂ ಅಂತೀನಿ. ಊಟಕ್ಕೆ ಕರೆಯೋದು ಕಾನೂನು ರೀತಿ ತಪ್ಪಾ? ಎಂದು ಹೇಳಿ, ಆರೋಪ ಮಾಡಿದ ನಗರಸಭಾ ಸದಸ್ಯರಿಗೆ ಓಪನ್ ಚಾಲೆಂಜ್ ಮಾಡುತ್ತೇನೆ. ಬನ್ನಿ ಮುಂದಿನ ನಗರಸಭೆ ಚುನಾವಣೆಯಲ್ಲಿ ನಿಂತು ಡಿಪಾಸಿಟ್ ಉಳಿಸಿಕೊಳ್ಳಿ ನೋಡೋಣ, ನಾನೆ ವಾರ್ಡ್‌ಗಳಿಗೆ ಹೋಗಿ ಪ್ರಚಾರ ಮಾಡ್ತೇನೆ. ನೋಡೋಣ ಅವರು ಗೆಲ್ಲಲಿ, ಪಾಪ ಅವರೆಲ್ಲಾ ಗೆಲ್ಲೊ ನಿರೀಕ್ಷೆಯಲ್ಲಿದ್ದಾರೇನೋ ಎಂದರು.
ಹಬ್ಬಕ್ಕೆ ಜನರಿಗೆ ಉಡುಗೊರೆ: ಕ್ಷೇತ್ರದ ಎಲ್ಲಾ 19 ಸಾವಿರ ವಿದ್ಯಾರ್ಥಿಗಳಿಗೆ ಗಣೇಶ ಚರ್ತುಥಿ ಹಬ್ಬಕ್ಕೆ ಒಂದು ಜೊತೆ ಬಟ್ಟೆಗಳನ್ನು ಮತ್ತು ಕ್ಷೇತ್ರದ ಎಲ್ಲಾ ಮಹಿಳೆಯರಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸೀರೆ ಅರಶಿನ ಕುಂಕುಮ ನೀಡಲಾಗುವುದು ಎಂದರು.