ಕೇಂದ್ರದ ಸಾಗರಮಾಲಾ ಮತ್ತು ಮತ್ಸ್ಯ ಸಂಪದ ಯೋಜನೆಯಡಿ ಹಂಗಾರಕಟ್ಟೆ ಸೇರಿದಂತೆ ಕರಾವಳಿಯ ಹಲವು ಬಂದರುಗಳ ಅಭಿವೃದ್ಧಿಗೆ ಕೋಟ್ಯಂತರ ರುಪಾಯಿ ಅನುದಾನ ಮಂಜೂರಾತಿ ಪ್ರಕ್ರಿಯೆಯಲ್ಲಿದೆ. ಇದರೊಂದಿಗೆ, ಬೆಂಗಳೂರು-ಕಾರವಾರ ವಂದೇ ಭಾರತ್ ರೈಲು ಶೀಘ್ರ ಆರಂಭಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ

ಉಡುಪಿ: ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಮೀನುಗಾರಿಕಾ ಕಿರು ಬಂದರು ಯೋಜನೆಗೆ ಕೇಂದ್ರ ಸರ್ಕಾರದ ಸಾಗರಮಾಲಾ - ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ)ಯಡಿ 78.28 ಕೋಟಿ ರು. ಮಂಜೂರಾತಿ ಪ್ರಕ್ರಿಯೆಯಲ್ಲಿದೆ ಎಂದು ಕೇಂದ್ರ ಸಚಿವ ಸರ್ಬಾನಂದ್ ಸೋನೊವಾಲ್ ಹೇಳಿದ್ದಾರೆ. ಲೋಕಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಲಿಖಿತ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ನೂರಾರು ಕೋಟಿ ಮಂಜೂರು

ಹಳೆಯ ಮಂಗಳೂರು ಬಂದರಿನಲ್ಲಿ ಸರಕು ಮತ್ತು ಕ್ರೂಸ್ ಟರ್ಮಿನಲ್ ಲಕ್ಷದ್ವೀಪ ಜಟ್ಟಿ ನಿರ್ಮಾಣದ ಅಭಿವೃದ್ಧಿಗೆ 75.75 ಕೋಟಿ ರು., ಮಲ್ಪೆ ಮೀನುಗಾರಿಕಾ ಬಂದರನ್ನು ಮೇಲ್ದರ್ಜೆಗೇರಿಸಲು 12.50 ಕೋಟಿ ರು. ಅಲ್ಲದೆ, ಮಲ್ಪೆ ಮೀನುಗಾರಿಕಾ ಬಂದರಿನ ಮೂಲ ಸೌಕರ್ಯಗಳ ಬಹು ಮಹಡಿ ಪಾರ್ಕಿಂಗ್ ಸೌಲಭ್ಯದ ಅಭಿವೃದ್ಧಿ, ಮೀನುಗಾರಿಕಾ ಬೋಟುಗಳ ತಂಗುದಾಣಕ್ಕಾಗಿ ಹೆಚ್ಚುವರಿ ಜಟ್ಟಿ, ಯಾಂತ್ರಿಕ ದೋಣಿಗಳ ಸಂಚಾರ ಸುಗಮಗೊಳಿಸಲು ಹೂಳೆತ್ತುವುದು ಸೇರಿದಂತೆ ಹಲವು ಪ್ರಸ್ತಾವನೆಗಳು ಮಂಜೂರಾತಿ ಹಂತದಲ್ಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಮತ್ಸ್ಯ ಸಂಪದ ಯೋಜನೆಯಲ್ಲಿ ಕಾರವಾರ ಬಂದರು ಅಭಿವೃದ್ಧಿ 73 ಕೋಟಿ ರು., ಹಳೆಯ ಮಂಗಳೂರು ಬಂದರು ಅಭಿವೃದ್ಧಿಗೆ 65 ಕೋಟಿ ರು., ಗಂಗೊಳ್ಳಿ ಬಂದರು ಅಭಿವೃದ್ಧಿಗೆ 96 ಕೋಟಿ ರು., ಕಾರವಾರದ ಬಂದರಿನ ಬ್ರೇಕ್ ವಾಟರ್ ನಿರ್ಮಾಣಕ್ಕೆ 249 ಕೋಟಿ ರು. ಪ್ರಸ್ತಾವನೆ ಸ್ವೀಕೃತವಾಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಖಾಸಗಿ (ಪಿ.ಪಿ.ಪಿ) ಸಹಭಾಗಿತ್ವದಲ್ಲಿ ಖೇಣಿ ಬಂದರು, ಮಾವಿನಕುರ್ವೆ ಬಂದರು, ಹೊನ್ನಾವರ ಬಂದರು, ಮಂಕಿ ಬಂದರುಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಂಡಿದೆ ಎಂದು ಕೇಂದ್ರ ಬಂದರು ಮಂತ್ರಿ ಸರ್ಬಾನಂದ್ ಸೋನೊವಾಲ್ ತಿಳಿಸಿದ್ದಾರೆ.

ಬೆಂಗಳೂರು-ಕಾರವಾರ ವಂದೇ ಭಾರತ್‌ ರೈಲಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಕೋಟಾ

ಕರಾವಳಿ ಕರ್ನಾಟಕದ ರೈಲ್ವೆ ಪ್ರಯಾಣಿಕರ ಹಿತದೃಷ್ಟಿಯಿಂದ, ಬಹುನಿರೀಕ್ಷೆಯ ಬೆಂಗಳೂರು, ಮಂಗಳೂರು ಉಡುಪಿ, ಕಾರವಾರ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಶೀಘ್ರವಾಗಿ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಆಗ್ರಹಿಸಿದರು.

ಹಾಸನ, ಸಕಲೇಶಪುರ ಭಾಗದಲ್ಲಿ ರೈಲ್ವೆ ಮಾರ್ಗದ ವಿದ್ಯುದೀಕರಣ ಮುಗಿಯುತ್ತಾ ಬಂದಿದ್ದು, ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳನ್ನು ವಂದೇ ಭಾರತ್ ಮೂಲಕ ಬೆಸೆಯಲು ಇದು ಸಕಾಲವಾಗಿದೆ. ಕಾರವಾರ, ಉಡುಪಿ, ಮಂಗಳೂರು ಪ್ರಯಾಣಿಕರಿಗೆ ವಂದೇ ಭಾರತ್ ಮೂಲಕ ಉತ್ತಮ ರೈಲ್ವೆ ಸೇವೆಗೆ ಅವಕಾಶವಾಗುತ್ತದೆ ಎಂದು ವಿನಂತಿ ಮಾಡಿರುವ ಸಂಸದ ಕೋಟ, ಈ ಹಿಂದೆ ಕೇಂದ್ರ ಸಚಿವರು, ಘಾಟಿ ಭಾಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡ ನಂತರ ಬೆಂಗಳೂರಿನಿಂದ ಕಾರವಾರ ನಡುವೆ ವಂದೇ ಭಾರತ್ ಪರಿಚಯಿಸಲಾಗುವುದು ಎಂಬ ಭರವಸೆಯನ್ನು ನೆನಪಿಸಿದ್ದಾರೆ. ಸಂಸದರ ಕೋರಿಕೆಯ ಬಗ್ಗೆ ಮನವರಿಕೆ ಮಾಡಿಕೊಂಡ ಕೇಂದ್ರ ಸಚಿವರು, ಈ ಪ್ರಸ್ತಾಪದ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.