Asianet Suvarna News Asianet Suvarna News

ಮಂಗಳೂರು: ಕರ್ನಾಟಕದ ಕಡಲಲ್ಲಿ ಚೀನಾ ಅಕ್ರಮ ಮೀನುಗಾರಿಕೆ..!

ಭಾರತೀಯ ಸಮುದ್ರ ತೀರಕ್ಕೆ ಚೀನಾ ಮೀನುಗಾರಿಕಾ ಬೋಟ್‌ಗಳು ನುಸುಳಿರುವ ಬಗ್ಗೆ ಮೀನುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಎರಡು ವಾರ ಹಿಂದಿನ ಈ ವಿಡಿಯೋ ಈಗ ವೈರಲ್‌ ಆಗುತ್ತಿದ್ದು, ಈ ಬಗ್ಗೆ ಕೋಸ್ಟ್‌ಗಾರ್ಡ್‌ ತನಿಖೆ ನಡೆಸುತ್ತಿದೆ.

Chinese Illegal Fishing in Karnataka Sea grg
Author
First Published Mar 7, 2024, 6:01 AM IST

ಮಂಗಳೂರು(ಮಾ.07):  ಕರ್ನಾಟಕ ಕರಾವಳಿಯ ಕಡಲಲ್ಲಿ ಈ ಬಾರಿ ವಿಪರೀತ ಮತ್ಸ್ಯಕ್ಷಾಮ ಉಂಟಾಗಿದೆ. ಈ ರೀತಿ ಮತ್ಸ್ಯಕ್ಷಾಮಕ್ಕೆ ಅಕ್ರಮವಾಗಿ ಭಾರತದ ಮೀನುಗಾರಿಕಾ ಪ್ರದೇಶ ಪ್ರವೇಶಿಸಿ ಮೀನುಗಾರಿಕೆ ನಡೆಸುವ ಚೀನಾ ಬೋಟ್‌ಗಳೇ ಕಾರಣ ಎಂಬ ಆರೋಪ ಮೀನುಗಾರರಿಂದ ವ್ಯಕ್ತವಾಗಿದೆ. ಭಾರತೀಯ ಮೀನುಗಾರಿಕಾ ಪ್ರದೇಶದಲ್ಲಿ ಚೀನಾ ಬೋಟ್‌ಗಳ ಮತ್ಸ್ಯಬೇಟೆಯ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಭಾರತೀಯ ಸಮುದ್ರ ತೀರಕ್ಕೆ ಚೀನಾ ಮೀನುಗಾರಿಕಾ ಬೋಟ್‌ಗಳು ನುಸುಳಿರುವ ಬಗ್ಗೆ ಮೀನುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಎರಡು ವಾರ ಹಿಂದಿನ ಈ ವಿಡಿಯೋ ಈಗ ವೈರಲ್‌ ಆಗುತ್ತಿದ್ದು, ಈ ಬಗ್ಗೆ ಕೋಸ್ಟ್‌ಗಾರ್ಡ್‌ ತನಿಖೆ ನಡೆಸುತ್ತಿದೆ.

ಮಂಗಳೂರು: ಕಡಬ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ, ದುಷ್ಕರ್ಮಿಯ ಬಗ್ಗೆ ಸಿಸಿಟಿವಿಯಲ್ಲಿ ಮಹತ್ವದ ಸಾಕ್ಷಿ

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚೀನಾ ಬೋಟುಗಳು ಮೀನುಗಾರಿಕೆ ನಡೆಸಿ ಸಮುದ್ರದ ಒಡಲು ಬರಿದಾಗಿಸುತ್ತಿವೆ. ಚೀನಾ ಬೋಟ್‌ಗಳು ಭಾರತೀಯ ಸಮುದ್ರದಲ್ಲಿರುವ ವಿಡಿಯೋ ಇದು ಎಂದು ಹೇಳಲಾಗುತ್ತಿದೆ. ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರರಿಂದ ಈ ವಿಡಿಯೋ ಸೆರೆಯಾಗಿದೆ. ಇದರ ಆಧಾರದಲ್ಲಿ ಭಾರತೀಯ ಕರಾವಳಿಗೆ ಚೀನಾ ಹಡಗುಗಳ ಲಗ್ಗೆ ಬಗ್ಗೆ ಅನುಮಾನ ಪಡಲಾಗಿದೆ. ಮೀನುಗಾರರೇ ಈ ಕುರಿತು ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದು, ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ಕೂಡ ಈ ಬಗ್ಗೆ ತನಿಖೆಯಲ್ಲಿ ತೊಡಗಿದ್ದಾರೆ.

ಭಾರತದ ಸಮುದ್ರದಲ್ಲಿ ಚೀನಾ ಬೋಟ್‌ಗಳು ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿವೆ. ಅವೈಜ್ಞಾನಿಕ ಮೀನುಗಾರಿಕೆಯಿಂದ ಮೀನಿನ ಸಂತಾನೋತ್ಪತ್ತಿಗೆ ದೊಡ್ಡ ಹೊಡೆತ ಬೀಳುತ್ತಿದೆ. ರಾತ್ರಿ ಲೈಟಿಂಗ್‌ ಮೀನುಗಾರಿಕೆ ನಿಷೇಧ ಇದ್ದರೂ ಚೀನಾದ ದೊಡ್ಡ ಬೋಟ್‌ಗಳು ಎಗ್ಗಿಲ್ಲದೆ ಮೀನುಗಾರಿಕೆಯಲ್ಲಿ ತೊಡಗಿವೆ. ಇದೇ ಕಾರಣದಿಂದ ಕರಾವಳಿಯ ಕಡಲಿನಲ್ಲಿ ಮತ್ಸ್ಯಕ್ಷಾಮ ಉಂಟಾಗಿದೆ ಎಂಬುದು ಸ್ಥಳೀಯ ಮೀನುಗಾರರ ಆರೋಪ.

ಸುಮಾರು 25 ವರ್ಷಗಳ ಬಳಿಕ ಸಮುದ್ರದಲ್ಲಿ ಭಾರೀ ಮೀನಿನ ಕೊರತೆ ಇದೇ ಮೊದಲ ಬಾರಿ ಕಂಡುಬಂದಿದೆ. ಒಂದು ಕಡೆ ಮೀನಿನ ಕೊರತೆ, ಇನ್ನೊಂದು ಕಡೆ ಇತರೆ ರಾಜ್ಯದ ಮೀನುಗಾರರಿಂದ ಹಲ್ಲೆಯಿಂದ ಮೀನುಗಾರರು ಕಂಗೆಟ್ಟಿದ್ದಾರೆ. ಈ ಹಿಂದೆ ಸಾಕಷ್ಟು ಮೀನು ಸಿಗುತ್ತಿದ್ದ ಈ ಕಡಲಿನಲ್ಲಿ ಈಗ ಏಕಾಏಕಿ ಮತ್ಸ್ಯಕ್ಷಾಮ ತಲೆದೋರಿರುವುದು ಮೀನುಗಾರರನ್ನು ಆತಂಕಕ್ಕೆ ತಳ್ಳಿದೆ.

ಪಣಂಬೂರು ಬೀಚ್‌: ಅಬ್ಬರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋದ ಮೂವರು ಯುವಕರು!

ಮೀನಿನ ಅಬ್ಬರದ ವಹಿವಾಟು ಇಲ್ಲದೆ ಮಂಗಳೂರು ಮೀನುಗಾರಿಕಾ ಬಂದರು ಬಿಕೋ ಎನ್ನುವಂತಾಗಿದೆ. ಮತ್ಸ್ಯೋದ್ಯಮ ನಂಬಿಕೊಂಡ ಇತರೆ ಉದ್ಯಮಗಳಿಗೂ ಭಾರೀ ಹೊಡೆತ ಉಂಟಾಗುತ್ತಿದೆ. ಮೀನುಗಾರರು ಸಮುದ್ರದಲ್ಲಿ ಮೀನಿಲ್ಲದೇ ಬರಿಗೈಯಲ್ಲೇ ವಾಪಸಾಗುವ ಸನ್ನಿವೇಶ ನಿರ್ಮಾಣವಾಗಿದೆ. ಶೇ.85ರಷ್ಟು ಮೀನುಗಾರಿಕಾ ಬೋಟ್‌ಗಳು ಬಂದರಿನಲ್ಲಿ ಲಂಗಾರು ಹಾಕಿದ ಸ್ಥಿತಿಯಲ್ಲೇ ಇವೆ. ಲಕ್ಷಾಂತರ ರು. ಮೊತ್ತ ನಷ್ಟ ಹಿನ್ನೆಲೆಯಲ್ಲಿ ಸಮುದ್ರಕ್ಕೆ ತೆರಳಲು ಮೀನುಗಾರರು ಹಿಂದೇಟು ಹಾಕುತ್ತಿದ್ದಾರೆ.

ವಿದೇಶಿ ಬೋಟ್‌ಗಳು ಬಂದು ಅತ್ಯಾಧುನಿಕ ಸಲಕರಣೆ ಬಳಸಿ ಭಾರತೀಯ ಸಮುದ್ರದಲ್ಲಿ ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸಿದರೆ ನಮ್ಮ ಮೀನುಗಾರರರಿಗೆ ಅಪಾರ ನಷ್ಟ ಖಂಡಿತ. ಈ ಬಗ್ಗೆ ಕೋಸ್ಟ್‌ಗಾರ್ಡ್‌ ಅಧಿಕಾರಿಗಳು ಪರಿಶೀಲನೆ ನಡೆಸಿ ಸತ್ಯಾಸತ್ಯತೆಯನ್ನು ಕಂಡುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರಿಕಾ ಬೋಟ್‌ ಮಾಲೀಕ ರಾಜರತ್ನ ಸನಿಲ್‌ ಆಗ್ರಹಿಸಿದ್ದಾರೆ.

Follow Us:
Download App:
  • android
  • ios