ಹುಬ್ಬಳ್ಳಿ(ಸೆ.29): ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಿದವರಿಗೆ ಜೈಲೇ ಗತಿಯಾಗಲಿದೆ. ಮಾಜಿ ಸಚಿವ ಚಿದಂಬರಂಗೆ ಆದ ಪರಿಸ್ಥಿತಿ ಕಾಶ್ಮೀರದಲ್ಲಿ ಆಡಳಿತ ನಡೆಸಿದವರಿಗೆ ಎದುರಾದರೆ ಅಚ್ಚರಿಯಿಲ್ಲ ಎಂದು ಕೇಂದ್ರದ ರಾಜ್ಯ ಹಣಕಾಸು ಸಚಿವ ಅನುರಾಗಸಿಂಗ್ ಠಾಕೂರ ತಿಳಿಸಿದರು. 

ಇಲ್ಲಿನ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 370ನೇ ವಿಧಿ ಹಾಗೂ 35 ಎ ವಿಧಿ ರದ್ದುಗೊಳಿಸುವ ಮೂಲಕ ಒಂದೇ ದೇಶ ಒಂದೇ ಸಂವಿಧಾನ ಸಾರಿ ಹೇಳಿದಂತಾಗಿದೆ. ಕಾಂಗ್ರೆಸ್ ಮಾಡಿದ ತಪ್ಪನ್ನು ಈಗ ಸರಿಪಡಿಸಿದಂತಾಗಿದೆ. ಇದರಿಂದ ಅಲ್ಲಿನ ಜನತೆಯಷ್ಟೇ ಅಲ್ಲ ಇಡೀ ದೇಶವೇ ಸಂತಸಗೊಂಡಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಇಷ್ಟು ವರ್ಷಗಳ ಕಾಲ ಅಲ್ಲಿ ತಿರಂಗಾ ಕೂಡ ಹಾರಿ ಸಲು ಅವಕಾಶವಿರಲಿಲ್ಲ. ಅಲ್ಲಿಗೆ ಹಣ ಬಿಡುಗಡೆಯಾದರೂ ಎಷ್ಟು ಖರ್ಚಾಗಿದೆ. ಏನೇನು ಕೆಲಸಗಳಾಗಿವೆ ಎಂಬುದು ಗೊತ್ತಾಗುತ್ತಿರಲಿಲ್ಲ. ಯಾವ ಸೌಲಭ್ಯಗಳು ಅಲ್ಲಿನ ಜನರಿಗೆ ಸಿಗುತ್ತಿರಲಿಲ್ಲ. ಆದರೆ ಇದೀಗ ಅದು ಸ್ವತಂತ್ರ ರಾಜ್ಯವಾಗಿದೆ. ಉಳಿದ ರಾಜ್ಯಗಳಂತೆ ಎಲ್ಲ ಕಾನೂನುಗಳು ಅಲ್ಲೂ ಅನ್ವಯವಾಗುತ್ತವೆ. ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಸೇರಿದಂತೆ ಎಲ್ಲ ಸೌಲಭ್ಯಗಳು ಸಿಗುತ್ತವೆ. ಈ ಹಿಂದೆ ಎಷ್ಟೆಷ್ಟು ಲೂಟಿ ಹೊಡೆದಿದ್ದಾರೆ ಎಂಬುದು ಕೂಡ ಬಹಿರಂಗಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ರು. ಲೂಟಿ ಮಾಡಿರುವ ಅಲ್ಲಿನ ಮುಖಂಡರು ಜೈಲು ಪಾಲಾಗುತ್ತಾರೆ. ದೇಶದಲ್ಲಿ ಲೂಟಿ ಹೊಡೆದ ಮಾಜಿ ಸಚಿವ ಚಿದಂಬರಗೆ ಆದಗತಿಯೇ ಕಾಶ್ಮೀರದಲ್ಲಿ ಆಡಳಿತ ನಡೆಸಿದವರಿಗೆ ಆಗಲಿದೆ ಎಂದು ಭವಿಷ್ಯ ನುಡಿದರು. ಅಲ್ಲದೇ, ಇದು ಅಲ್ಲಿನ ಮುಖಂಡರಿಗೆ ನಡುಕವನ್ನುಂಟು ಮಾಡಿದೆ ಎಂದರು. 

ನೆಹರುರನ್ನು ಜನತೆ ಕ್ಷಮಿಸಲ್ಲ: 

ಕಾಶ್ಮೀರ ವಿಚಾರವಾಗಿ ನೆಹರು ಮಾಡಿದ ತಪ್ಪನ್ನು ದೇಶದ ಜನತೆ ಎಂದಿಗೂ ಕ್ಷಮಿಸಲ್ಲ. ಇದೀಗ ಅವರ ಮರಿಮೊಮ್ಮಗ ರಾಹುಲ್ ಗಾಂಧಿ ಕೂಡ ಅದೇ ರೀತಿಯ ತಪ್ಪುಗಳನ್ನು ಮಾಡುತ್ತಿದ್ದಾರೆ. 370 ಹಾಗೂ 35ಎ ವಿಧಿಗಳನ್ನು ರದ್ದುಪಡಿಸಬಾರದಿತ್ತು ಎಂದೆಲ್ಲ ಹೇಳಿಕೆ ನೀಡುತ್ತಿದ್ದಾರೆ. ಕುತಂತ್ರಿ ಪಾಕಿಸ್ತಾನ ಇದನ್ನೇ ಬಂಡವಾಳ ಮಾಡಿಕೊಂಡು ಜಗತ್ತಿನಾದ್ಯಂತ ಡಂಗೂರ ಸಾರುತ್ತಿದೆ. ಆದರೂ ಪ್ರಯೋಜನವಿಲ್ಲ. ಇಡೀ ಜಗತ್ತೇ ಇದೀಗ ಭಾರತದ ಪರವಾಗಿದೆ. ರಾಹುಲ್ ಗಾಂಧಿ ದೇಶದ ಜನತೆಯ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು. 

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, 370ನೇ ಹಾಗೂ 35 ಎ ವಿಧಿಯನ್ನು ಪಡಿಸುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಇತಿಹಾಸ ನಿರ್ಮಾಣ ಮಾಡಿದೆ. ಕಾಶ್ಮೀರದಲ್ಲಿ ಇದೀಗ ಶಾಂತಿ ನೆಲೆಸಿದೆ. ಕಾಂಗ್ರೆಸ್‌ನ ಸ್ವಾರ್ಥದಿಂದ ಏಳು ದಶಕಗಳ ಕಾಲ ತೊಂದರೆ ಅನುಭವಿಸಬೇಕಾಯಿತು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸಹ 370ನೇ ವಿಧಿಗೆ ಆಕ್ಷೇಪಿಸಿದ್ದರು. ಕೊನೆಗೆ ತಾತ್ಕಾಲಿಕವಾಗಿ ವಿಧಿ ವಿಧಿಸಲು ಒಪ್ಪಿಗೆ ನೀಡಿದ್ದರು ಎಂದರು.