ಬೆಂಗಳೂರು(ಜ.26): ನಗರದ ಕೆರೆಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ಬಿಬಿಎಂಪಿ 205 ಕೆರೆಗಳಿಗೆ 5 ಕೋಟಿ ವೆಚ್ಚದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆಗೆ ತೀರ್ಮಾನಿಸಿದೆ.

ಕಳೆದ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಿನಲ್ಲಿ ನಗರದ ಮೂರು ಕೆರೆಗಳ ಏರಿ ಒಡೆದು ಕೆರೆಯ ನೀರು ಅಕ್ಕ-ಪಕ್ಕದ ಬಡಾವಣೆಗಳಿಗೆ ಏಕಾಏಕಿ ನುಗ್ಗಿ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿ ಉಂಟಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಕೆರೆ ವಿಭಾಗ 205 ಕೆರೆಗಳಿಗೂ ಸಿಸಿಟಿವಿ ಅಳವಡಿಕೆಗೆ ಮುಂದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಕುರಿತು ‘ಕನ್ನಡಪ್ರಭ’ ಹಾಗೂ 'ಸುವರ್ಣ ನ್ಯೂಸ್‌' ದೊಂದಿಗೆ ಮಾತನಾಡಿದ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನ್‌ ಕೃಷ್ಣ, ಕೆರೆಗಳ ಸಂರಕ್ಷಣೆಗೆ ಸಿಸಿಟಿವಿ ಅಳವಡಿಕೆ ಮಾಡಲು ಸರ್ಕಾರ 5 ಕೋಟಿ ಅನುದಾನ ನೀಡಿದೆ. ಯಾವ ಕೆರೆಗೆ ಎಷ್ಟು ಸಿಸಿಟಿವಿ ಕ್ಯಾಮರಾ ಅವಶ್ಯಕತೆ ಇದೆ. ಯಾವ ಗುಣಮಟ್ಟದ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಬೇಕು ಎಂಬುದರ ಬಗ್ಗೆ ಯೋಜನಾ ವರದಿ ಸಿದ್ಧ ಪಡಿಸುವುದಕ್ಕೆ ಸೂಚನೆ ನೀಡಲಾಗಿದೆ. 15 ದಿನದಲ್ಲಿ ಯೋಜನಾ ವರದಿ ಸಿದ್ಧಪಡಿಸುವುದಕ್ಕೆ ಟೆಂಡರ್‌ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಕೆರೆಯಲ್ಲಿಯೇ ನಿಗಾ ಘಟಕ:

ಸಿಸಿಟಿವಿ ಅಳವಡಿಕೆ ಮಾಡಲಾದ ಕೆರೆಗಳಲ್ಲಿ ನಿಗಾ ಘಟಕ ನಿರ್ಮಿಸಲಾಗುವುದು. ಕೆರೆಯ ಭದ್ರತಾ ಸಿಬ್ಬಂದಿ ದಿನದ 24 ಗಂಟೆಯೂ ಇಡೀ ಕೆರೆಯ ಬಗ್ಗೆ ನಿಗಾ ವಹಿಸುವುದಕ್ಕೆ ಅನುಕೂಲವಾಗಲಿದೆ. ಶೀಘ್ರದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು ಎಂದು ವಿವರಿಸಿದರು.