ಮಾಜಿ ಸಚಿವ ಶಂಕರ್ ವಿರುದ್ಧ ಕಿಡಿಕಾರಿದ್ದ ರೈತನ ವಿರುದ್ಧ ಕೇಸ್..!
* ರೈತ ಬಸಣ್ಣ ಭಂಗಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
* ಪರಿಹಾರ ಬಂದಿಲ್ಲ ಎಂದು ಮಾಜಿ ಸಚಿವ ಶಂಕರ್ ಮತ್ತು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದ ರೈತ
* ಕಕ್ಕಾಬಿಕ್ಕಿಯಾಗಿ ಸಿಡಿಮಿಡಿಗೊಂಡಿದ್ದ ಶಂಕರ್
ಯಾದಗಿರಿ(ಆ.02): ನೆರೆ ಹಾಗೂ ಅತಿವೃಷ್ಟಿಯಿಂದಾಗಿ ಬೆಳೆ ನಷ್ಟವಾಗಿದ್ದರೂ ಪರಿಹಾರ ಬಂದಿಲ್ಲ ಎಂದು ಮಾಜಿ ಸಚಿವ ಆರ್.ಶಂಕರ್ ಮತ್ತು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದ ರೈತ ಮುಖಂಡರೊಬ್ಬರ ಮೇಲೆ ಇದೀಗ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದ ಬಸಣ್ಣ ಭಂಗಿ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಉಸ್ತುವಾರಿಯಾಗಿದ್ದ ಶಂಕರ್ ಜುಲೈ 24ರಂದು ಕೊಳ್ಳೂರು (ಎಂ) ಗ್ರಾಮಕ್ಕೆ ಆಗಮಿಸಿದ್ದ ವೇಳೆ ರೈತ ಬಸಣ್ಣ ಭಂಗಿ ಅಲ್ಲಿನ ಅವ್ಯವಸ್ಥೆ ವಿರುದ್ಧ ಕಿಡಿಕಾರಿದ್ದರು. ಇದರಿಂದ ಕಕ್ಕಾಬಿಕ್ಕಿಯಾಗಿದ್ದ ಶಂಕರ್, ಸಿಡಿಮಿಡಿಗೊಂಡಿದ್ದರು. ಈಗ ಅವರ ವಿರುದ್ಧ ಐಪಿಸಿ ಸೆಕ್ಷನ್ 1860, 504 ಕಲಂ ಅಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. (ಪ್ರಕರಣ ಸಂಖ್ಯೆ 173/2021) ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂಬ ಆರೋಪ ಎಫ್‌ಐಆರ್‌ನಲ್ಲಿದೆ.
ಟೀಕೆಗಳಿಗೆ ಬೆದರಿ ಯಾದಗಿರಿಗೆ ಬಂದ್ರಾ ಸಚಿವ ಶಂಕರ್?
ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 3 ರಿಂದ 4.10 ಲಕ್ಷ ಕ್ಯೂಸೆಕ್ ನೀರು ಬಿಟ್ಟಾಗ ಕೊಳ್ಳೂರು (ಎಂ) ಸೇತುವೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಎಕರೆ ಕೃಷಿಭೂಮಿಗೆ ನೀರು ನುಗ್ಗಿ ಮುಂಗಾರು ಬೆಳೆ ನಾಶವಾಗುತ್ತಿದೆ. 3 ವರ್ಷಗಳ ಅವಧಿಯಲ್ಲಿ ಬಂದ ಸಚಿವರು, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.