ಟೀಕೆಗಳಿಗೆ ಬೆದರಿ ಯಾದಗಿರಿಗೆ ಬಂದ್ರಾ ಸಚಿವ ಶಂಕರ್‌?

* ರಾತೋರಾತ್ರಿ ಪ್ರವಾಸ ಫಿಕ್ಸ್‌ 
* ಕೊನೆಗೂ ಯಾದಗಿರಿಯಲ್ಲಿ ಸಚಿವ ಶಂಕರ್‌ ಪತ್ತೆ
* ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಕುಟುಂಬದ ಸದಸ್ಯರ ಭೇಟಿ, ಸಾಂತ್ವನ
 

Minister R Shankar Visits to Suicide Farmer Family in Yadgir grg

ಯಾದಗಿರಿ(ಜು.14): ಜಿಲ್ಲೆಯ ದೋರನಹಳ್ಳಿಯಲ್ಲಿ ಒಂದೇ ಕುಟುಂಬದ ಆರು ಜನರ ಸಾಮೂಹಿಕ ಆತ್ಮಹತ್ಯೆ ಘಟನೆಯ ನಂತರ ಜಿಲ್ಲೆಗೆ ಭೇಟಿ ಕೊಡದೆ, ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲೂ ಬಾರದ ತಮ್ಮ ವಿರುದ್ಧ ಮಾಧ್ಯಮಗಳ ಟೀಕೆ ಹಾಗೂ ಜನಾಕ್ರೋಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಶಂಕರ್‌ ಬೆದರಿ, ಬಂದಂತಿದೆ.

ಜೂನ್‌ 28 ರಂದು ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ರೈತ ಭೀಮರಾಯ, ಪತ್ನಿ ಹಾಗೂ ನಾಲ್ವರು ಚಿಕ್ಕಮಕ್ಕಳ ಸಮೇತ ತಮ್ಮ ಜಮೀನಿನ ಕೃಷಿ ಹೊಂಡಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೃಷಿಯಲ್ಲಿ ನಷ್ಟ ಹಾಗೂ ಸಾಲದಬಾಧೆಯಿಂದ ಆತಂಕಗೊಂಡ ಭೀಮರಾಯನ ಇಡೀ ಕುಟುಂಬ ಸಮೇತ ಸಾವಿಗೆ ಶರಣಾಗಿದ್ದುದು ಎಲ್ಲರ ಕಣ್ಣೀರಾಗಿಸಿತ್ತು. ಖಾಸಗಿ ಸಾಲ ತೀರಿಸಲಿಕ್ಕಾಗದ, ಅದರ ಬಡ್ಡಿಯನ್ನೂ ಭರಿಸಲಾಗದೆ ಸಾಲದ ಸುಳಿಯಲ್ಲಿ ಸಿಲುಕಿದ್ದ ಭೀಮರಾಯ ಮರ್ಯಾದೆಗಂಜಿ ಸಾವಿಗೆ ಶರಣಾದ ಎನ್ನಲಾಗಿದೆ.

ಈ ದುರ್ಘಟನೆ ರಾಜ್ಯವ್ಯಾಪಿ ಚರ್ಚೆಗೆ ಗ್ರಾಸವಾಯಿತು. ರೈತರ ಆತ್ಮಹತ್ಯೆ ಪ್ರಕರಣಗಳು ಹಾಗೂ ಬಡ್ಡಿ-ಚಕ್ರಬಡ್ಡಿ ಪೀಕುವ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಆಕ್ರೋಶ ಮೂಡಿಬಂತು. ನಂತರ ಸಾಲಗಾರರ ಬಗ್ಗೆ ಅಂಕುಶ ಹಾಕುವ ತೀರ್ಮಾನ ಹಾಗೂ ಮೃತ ಭೀಮರಾಯನ ಕುಟುಂಬದಲ್ಲಿ ಉಳಿದಿರುವ ಹಿರಿಯ ಪುತ್ರಿಗೆ ಪರಿಹಾರ ನೀಡಿದ ಆಡಳಿತ, ಆಕೆಗೊಂದು ಹೊರಗುತ್ತಿಗೆ ಆಧಾರದ ಮೇಲೆ ಶಹಾಪುರ ನಗರಸಭೆಯಲ್ಲಿ ನೌಕರಿ ನೀಡಿತು.

ಶಹಾಪುರ: ಹನುಮಾನ್‌ ದೇವಾಲಯದ ಮುಂದೆ ಶೌಚಾಲಯ ನೀರು

ಆದರೆ, ಈ ನಂತರ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಇಲ್ಲಿಗೆ ಬರಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಶಂಕರ್‌ 10-12 ದಿನಗಳಾದರೂ ಸುಳಿಯದಿರುವುದು ಸರಿಯಲ್ಲ ಎಂದು ವ್ಯಾಪಕ ಟೀಕೆಗಳು ಮೂಡಿಬಂದಿದ್ದವು. ಸಾಲದ ಬಾಧೆಗೆ ಸಿಲುಕಿ, ರೈತರೊಬ್ಬರ ಒಂದೇ ಕುಟುಂಬದ ಆರು ಜನರು ಸಾವು ಇಡೀ ದೇಶವ್ಯಾಪಿ ಸುದ್ದಿಗೆ ಕಾರಣವಾಗಿತ್ತು. ಆದರೂ ಸಹ ಸಚಿವ ಶಂಕರ್‌ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯ ಮಟ್ಟದಲ್ಲಿ ಜನಾಕ್ರೋಶ ಕೇಳಿಬಂತು. ಸಚಿವ ಶಂಕರ್‌ ನಾಪತ್ತೆಯಾಗಿದ್ದಾರೆ ಎಂಬುದಾಗಿನ ಮಾಧ್ಯಮಗಳಲ್ಲಿ ವರದಿಗಳು ಮೂಡಿಬಂದವು.

ಇದಕ್ಕೇನೋ ಅನ್ನುವಂತೆ, ಸೋಮವಾರ ತಡರಾತ್ರಿ ಸಚಿವ ಶಂಕರ್‌ ಅವರ ಯಾದಗಿರಿ-ದೋರನಹಳ್ಳಿ ಪ್ರವಾಸ ನಿಗದಿಯಾಗಿ, ವಿಮಾನ ಮೂಲಕ ಕಲಬುರಗಿಗೆ ಹಾರಿಬಂದ ಅವರು, ರೈತ ಭೀಮರಾಯ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. 

ರಾತೋರಾತ್ರಿ ಸಚಿವ ಪ್ರವಾಸ ಪಟ್ಟಿ ತಯಾರಾಗಿ, ಬೆಳ್ಳಂಬೆಳಿಗ್ಗೆ ಬೆಂಗಳೂರು ಬಿಟ್ಟ ಸಚಿವರು ಜಿಲ್ಲೆಗೆ ಕಾಲಿಟ್ಟರು. ಇನ್ನು, ತಾವು ಬರದಿದ್ದರೂ ಆಡಳಿತ ಎಲ್ಲ ಪರಿಹಾರ ನೀಡಿದೆ ಎಂದು ಮಾಧ್ಯಮಗಳೆದುರು ಹೇಳಿದ ಅವರು, ತಮ್ಮ ಮತಕ್ಷೇತ್ರದಲ್ಲಿ ವಿವಿಧ ಕಾರ್ಯಗಳ ಒತ್ತಡದಿಂದಾಗಿ ದುರ್ಘಟನೆ ನಂತರ ಬರಲಾಗಿಲಲ್ಲ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ. 
 

Latest Videos
Follow Us:
Download App:
  • android
  • ios