ಸಚಿವ ಸೋಮಣ್ಣರಿಂದ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸ್ವಕ್ಷೇತ್ರದ ಕಾಮಗಾರಿಗಳ ಪರಿಶೀಲನೆ. ತ್ವರಿತ ಕಾಮಗಾರಿಗೆ ಅಧಿಕಾರಿಗಳಿಗೆ ತಾಕೀತು. ಜನವರಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿರಿಂದ ಲೋಕಾರ್ಪಣೆ.

ಬೆಂಗಳೂರು (ಡಿ.25): ಜನವರಿಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪ್ರಥಮ ದರ್ಜೆ ಕಾಲೇಜು, ಪಶ್ಚಿಮ ಕಾರ್ಡ್‌ ರಸ್ತೆಯ ಮೇಲ್ಸೇತುವೆ, ದಾಸರಹಳ್ಳಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಅಂಬೇಡ್ಕರ್‌ ಕ್ರೀಡಾಂಗಣ, ನಾಯಂಡ ಹಳ್ಳಿ ಕೆರೆ ಅಭಿವೃದ್ಧಿ ಹೀಗೆ ಎಲ್ಲಾ ಕಾಮಗಾರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿಯಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಬಿಬಿಎಂಪಿ ಅಧಿಕಾರಿಗಳೊಂದಿಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪ್ರಥಮ ದರ್ಜೆ ಕಾಲೇಜು, ಪೊಲೀಸ್‌ ಕಾಲೋನಿ, ಪಶ್ಚಿಮ ಕಾರ್ಡ್‌ ರಸ್ತೆ, ಮೇಲ್ವೇತುವೆ, ಡಾ. ಬಿ.ಆರ್‌ ಅಂಬೇಡ್ಕರ್‌ ಸ್ಟೇಡಿಯಂ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಎಂ.ಸಿ.ಬಡಾವಣೆ, ನಾಯಂಡಹಳ್ಳಿ ಕೆರೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಪಂತರಪಾಳ್ಯ ಪ್ರಗತಿಯಲ್ಲಿ ಕಾಮಗಾರಿಗಳನ್ನು ಶನಿವಾರ ಪರಿಶೀಲಿಸಿದರು.

ಮುಖ್ಯಮಂತ್ರಿ ಬೊಮ್ಮಾಯಿಯವರೊಂದಿಗೆ ಸತತವಾಗಿ ಚರ್ಚೆ ನಡೆಸಿ ನಂತರ ಅನುದಾನ ಪಡೆದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ವಸತಿ ಸಚಿವರು ತಾಕೀತು ಮಾಡಿದರು.

ಈ ವೇಳೆ ಮಾತನಾಡಿದ ವಿ.ಸೋಮಣ್ಣ, ಜನಸಂಖ್ಯೆ ದಟ್ಟಣೆ ಮತ್ತು ವಾಹನ ಸಂಚಾರ ಹೆಚ್ಚಳದಿಂದ ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಇದರ ನಿವಾರಣೆಗಾಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು ಇದೀಗ ಅಂತಿಮ ಸ್ವರೂಪಕ್ಕೆ ಬರುತ್ತಿದೆ. ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಮೇಲು ಸೇತುವೆಯಿಂದ ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರ, ಮಹಾಲಕ್ಷ್ಮೀಲೇಔಟ್‌, ಆರ್‌.ಆರ್‌.ನಗರ, ಗೋವಿಂದರಾಜನಗರ ,ವಿಜಯನಗರ ವಿಧಾನಸಭಾ ಕ್ಷೇತ್ರದ ನಾಗರಿಕರಿಗೆ ಅನುಕೂಲವಾಗಲಿದೆ. ಟ್ರಾಫಿಕ್‌ ಕಿರಿಕಿರಿ ಇರುವುದಿಲ್ಲ ಮತ್ತು ಇಂಧನ ಸಹ ಉಳಿತಾಯವಾಗಲಿದೆ ಎಂದರು.

ಮಾಗಡಿ ರಸ್ತೆಯ ಪೊಲೀಸ್‌ ಠಾಣೆ ಹಿಂಭಾಗದಲ್ಲಿ ಹೈಟೆಕ್‌ ಪ್ರಥಮ ದರ್ಜೆ ಕಾಲೇಜು ನಿರ್ಮಿಸಲಾಗಿದೆ. ತಂತ್ರಜ್ಞಾನ ಶಿಕ್ಷಣ ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬದ ಮಕ್ಕಳಿಗೆ ಸಿಗಬೇಕು ಎಂದು ಹೇಳಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ವಾಕಿಂಗ್‌ ಟ್ರಾಕ್‌, ಸ್ಕೇಟಿಂಗ್‌ ಟ್ರಾಕ್‌, ಪ್ರೇಕ್ಷಕರು ಕುಳಿತು ಕೊಳ್ಳಲು ಗ್ಯಾಲರಿ, ಸಂಗೀತ ಕಾರಂಜಿ, ಕ್ಲಾಕ್‌ ಟವರ್‌, ಉದ್ಯಾನವನ ಉತ್ತಮ ಕ್ರೀಡಾಂಗಣ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ದಾಸರಹಳ್ಳಿಯ 300 ಹಾಸಿಗೆ ಸಾಮರ್ಥವುಳ್ಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪಂತರಪಾಳ್ಯದಲ್ಲಿ 200 ಹಾಸಿಗೆ ಸಾಮ್ಯರ್ಥವುಳ್ಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ನಾಯಂಡಹಳ್ಳಿ ಕೆರೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದ್ದು, ಪರಿಸರ ರಕ್ಷಣೆ ಜತೆಗೆ ಕೆರೆಯನ್ನು ಉಳಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬೀದರ್‌: 4 ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅಸ್ತು, ಕೇಂದ್ರ ಸಚಿವ ಖೂಬಾ

ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ವಿಶೇಷ ಆಯುಕ್ತರಾದ ಡಾ.ತ್ರಿಲೋಕಚಂದ್ರ, ಡಾ.ಆರ್‌.ಎಲ್‌.ದೀಪಕ್‌, ಜಂಟಿ ಆಯುಕ್ತ ಯೋಗೇಶ್‌, ಮುಖ್ಯ ಅಭಿಯಂತರ ದೊಡ್ಡಯ್ಯ, ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಪಾಲಿಕೆ ಸದಸ್ಯ ದಾಸೇಗೌಡ, ಬಿಜೆಪಿ ಮುಖಂಡರಾದ ರಮೇಶ್‌, ಶ್ರೀಧರ್‌ ಇದ್ದರು.

ಸುಳ್ಳು ಹೇಳುವುದು ಕಾಂಗ್ರೆಸ್‌ನ ಜಾಯಮಾನ: ಸಚಿವ ಗೋವಿಂದ ಕಾರಜೋಳ

ಬೆಳೆಯುತ್ತಿರುವ ನಗರಕ್ಕೆ ಸಮಸ್ಯೆಗಳು ಬರುವುದು ಸಹಜ. ಸಮಸ್ಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಶಾಶ್ವತವಾಗಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಿ ಜನರ ಜೀವನಮಟ್ಟಸುಧಾರಣೆ ಮಾಡಬೇಕು.

- ವಿ.ಸೋಮಣ್ಣ, ವಸತಿ ಸಚಿವ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವಸತಿ ಸಚಿವ ವಿ.ಸೋಮಣ್ಣ ಶನಿವಾರ ಪರಿಶೀಲಿಸಿದರು. ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೇರಿದಂತೆ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.