ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಮತ್ತೊಂದು ಹೆಣ್ಣು ಕಾಡಾನೆ ಶವವಾಗಿ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಗಸ್ತು ವೈಫಲ್ಯದ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಇದೇ ವೇಳೆ, ಇತ್ತೀಚಿನ ಹುಲಿ ಸಾವು ಹಾಗೂ ಆನೆದಂತ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವಕನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಇತ್ತೀಚೆಗೆ ಉರುಳಿಗೆ ಹುಲಿ ಸಾವು ಹಾಗೂ ಆನೆ ಸಾವು, ಆನೆದಂತ ಕಣ್ಮರೆ ಘಟನೆ ಮಾಸುವ ಮುನ್ನವೇ ಅದೇ ಮದ್ದೂರು ವಲಯದಲ್ಲಿ ಮತ್ತೊಂದು ಕಾಡಾನೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಬಂಡೀಪುರದ ಮದ್ದೂರು ವಲಯದಲ್ಲಿ ಮತ್ತೊಂದು ಕಾಡಾನೆ ನಿಗೂಢ ಸಾವು!

ಮದ್ದೂರು ವಲಯದ ಮದ್ದೂರು ಶಾಖೆ ಬೇರಂಬಾಡಿ ಗಸ್ತಿನ ಮಾರಿಕಟ್ಟೆ ಕೆರೆ ಬಳಿಯ ಪ್ರದೇಶದಲ್ಲಿ ಗುಸ್ತು ವೇಳೆ ಸೋಮವಾರ ಹೆಣ್ಣು ಆನೆಯ ಕಳೇಬರ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಹೇಳಿದೆ.

ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಸತ್ತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸದರಿ ಆನೆ ವಯೋಸಹಜವಾಗಿ ಸಾವನ್ನಪ್ಪಿದೆ ಎಂದು ಪಶು ವೈದ್ಯಾಧಿಕಾರಿ ದೃಢಪಡಿಸಿದ್ದಾರೆ ಎಂದು ಮದ್ದೂರು ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್‌ ತಿಳಿಸಿದ್ದಾರೆ.

ಸ್ಪಷ್ಟತೆ ಇಲ್ಲ

ಮದ್ದೂರು ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್‌ ನೀಡಿರುವ ಪ್ರಕಟಣೆಯಲ್ಲಿ ಕಾಡಾನೆ ವಯಸ್ಸು ದೃಢಪಡಿಸಿಲ್ಲ. ಯಾವಾಗ ಸತ್ತಿದ್ದು ಎಂದು ಹೇಳಿಲ್ಲ. ಪಶು ವೈದ್ಯಾಧಿಕಾರಿ ಯಾರು ಎಂದು ಹೇಳಿಲ್ಲ. ಈ ಪ್ರಕಟಣೆ ಕಾಟಾಚಾರಕ್ಕೆ ನೀಡಿದಂತಿದೆ.

ಸ್ಥಳಕ್ಕೆ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶುಭಂ ಸಿಂಗ್‌ ತನ್ವರ್‌, ಮದ್ದೂರು ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್‌ ಭೇಟಿ ನೀಡಿದ್ದರು.

ಅರಣ್ಯದಲ್ಲಿ ಗಸ್ತು ನಡೆಯುತ್ತಿಲ್ಲ?

ಗುಂಡ್ಲುಪೇಟೆ ಮದ್ದೂರು ವಲಯದಲ್ಲಿ ಗಸ್ತು ನಡೆಯುತ್ತಿಲ್ಲ ಎಂಬ ಗಂಭೀರ ಆರೋಪಗಳಿವೆ. ಇದೇ ವಲಯದಲ್ಲಿ ಗಸ್ತು ಇಲ್ಲದ ಕಾರಣ ಆನೆ ಸತ್ತರೂ ಆನೆ ಸಂಪೂರ್ಣ ಮಾಂಸ ಖಂಡಗಳಲ್ಲಿದೆ ಬರೀ ಮೂಳೆ ಕಳೇಬರ ಸಿಕ್ಕಿದ್ದು .ಇದು ಗಸ್ತಿನ ಕೊರತೆ ಎದ್ದು ಕಾಣುತ್ತಿದೆ.

ಆದರೆ ಮದ್ದೂರು ವಲಯದ ಪರಿಸರ ಸೂಕ್ಷ್ಮ ವಲಯದಲ್ಲಿಯೇ ಇತ್ತೀಚಗೆ ಉರುಳಿಗೆ ಹುಲಿಯೊಂದು ಸತ್ತಿದೆ ಎಂದರೆ ಗಸ್ತು ಇದ್ದರೆ ಉರುಳು ಹಾಕಿರೋದು ಕಾಣುತ್ತಿತ್ತು.ಗಸ್ತಿಲ್ಲದ ಕಾರಣ ಹುಲಿ ಜೀವ ಹೋಗಿದೆ.

ಇತ್ತ ಸೋಮವಾರ ಬೆಳಕಿಗೆ ಬಂದ ಕಾಡಾನೆ ಸಾವಿನಲ್ಲೂ ಆನೆ ಬಹುತೇಕ ಮಾಂಸ ಖಂಡಗಳು ಕಾಣುತ್ತಿಲ್ಲ. ಮೂಳೆಗಳು ಇವೆ. ಅಂದರೆ ಗಸ್ತು ನಡೆಸಿಲ್ಲ ಅನ್ನೋದು ಈ ಪ್ರಕರಣದಲ್ಲಿ ಕಂಡು ಬಂದಂತಿದೆ.

ಯುವಕ ವಶಕ್ಕೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿ ಉರುಳಿಗೆ ಸಾವು ಹಾಗೂ ಆನೆ ಸತ್ತ ಬಳಿಕ ಆನೆದಂತ ಕಳವು ಪ್ರಕರಣದಲ್ಲಿ ತಾಲೂಕಿನ ಭೀಮನಬೀಡು ಗ್ರಾಮದ ಯುವಕನೊಬ್ಬನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.

ಗ್ರಾಮದ ಮಾದೇಶನನ್ನು ಕನ್ನೇಗಾಲ ಟೋಲ್‌ ಬಳಿಕ ಮದ್ದೂರು ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್‌ ಮತ್ತು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಬಂಧಿತನ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.