ಮಂಗಳೂರು(ಜ.12): ಕಾರಿನ ಮೇಲೆ ‘ಪೊಲೀಸ್‌’ ಎಂಬುದಾಗಿ ನಾಮಫಲಕ ಹಾಕಿ ಮಂಗಳೂರಿನಲ್ಲಿ ಸಂಚರಿಸುತ್ತಿದ್ದ ಆಂಧ್ರ ಪ್ರದೇಶದ ನೋಂದಣಿ ಹೊಂದಿದ್ದ ಅಯ್ಯಪ್ಪ ವ್ರತಧಾರಿಗಳಿದ್ದ ಕಾರನ್ನು ನಗರದ ಸಂಚಾರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಅದರಲ್ಲಿ ಇರುವವರು ಪೊಲೀಸ್‌ ಕುಟುಂಬಕ್ಕೆ ಸೇರಿದ ಅಯ್ಯಪ್ಪ ವ್ರತಧಾರಿಗಳೆಂದು ಖಚಿತವಾದ ಬಳಿಕ ಬಿಡುಗಡೆ ಮಾಡಿದ್ದಾರೆ.

ಈ ಕಾರು ಹೈದರಾಬಾದ್‌ ನಗರದ ಓರ್ವ ಎಎಸ್‌ಐಗೆ ಸೇರಿದ್ದು, ಅವರು ಮತ್ತು ಅವರ ಕುಟುಂಬದವರು ಇದರಲ್ಲಿದ್ದರು ಎಂದು ಮಂಗಳೂರಿನ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು: ಟೋಲ್‌ ಸಿಬ್ಬಂದಿಯಿಂದ ಜೀವ ಬೆದರಿಕೆ

ಆಂಧ್ರ ಪ್ರದೇಶದಲ್ಲಿ ಪೊಲೀಸ್‌ ಸೇವೆಯಲ್ಲಿ ಇರುವವರು ತಮ್ಮ ಸ್ವಂತ (ಖಾಸಗಿ) ವಾಹನದಲ್ಲಿ ಓಡಾಡುವಾಗ ವಾಹನಕ್ಕೆ ಪೊಲೀಸ್‌ ಎಂಬುದಾಗಿ ಫಲಕ ಹಾಕುತ್ತಾರೆ. ಆದರೆ ಕರ್ನಾಟಕದಲ್ಲಿ ಅಂತಹ ಪದ್ಧತಿ ಇಲ್ಲ. ಇಲ್ಲಿ ಪೊಲೀಸ್‌ ಇಲಾಖೆಯ ಅಧಿಕೃತ ವಾಹನಕ್ಕೆ ಮಾತ್ರ ಪೊಲೀಸ್‌ ಎಂದು ಫಲಕ ಹಾಕಲಾಗುತ್ತದೆ. ಪೊಲೀಸ್‌ ಎಂಬುದಾಗಿ ಫಲಕ ಹಾಕಿ ಅಯ್ಯಪ್ಪ ವ್ರತಧಾರಿಗಳು ಅದರಲ್ಲಿ ಸಂಚರಿಸುತ್ತಿದ್ದ ಕಾರಣ ಅನುಮಾನದ ಮೇಲೆ ಈ ಕಾರನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿತ್ತು.

ನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಅವರು ಹೈದರಾಬಾದ್‌ನಿಂದ ಕರ್ನಾಟಕ ಮಾರ್ಗವಾಗಿ ಕೇರಳದ ಶಬರಿಮಲೆಗೆ ಹೊರಟವರು ಎಂಬುದಾಗಿ ಖಚಿತವಾಯಿತು. ಮಂಗಳೂರಿನ ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಲು ಅವರು ನಗರದೊಳಗೆ ಪ್ರವೇಶಿಸಿದ್ದರು ಎಂದು ತಿಳಿದು ಬಂದಿದೆ. ಬಳಿಕ ಮಂಗಳೂರು ಪೊಲೀಸರು ಕಾರಿನ ಮೇಲಿದ್ದ ‘ಪೊಲೀಸ್‌’ ನಾಮ ಫಲಕವನ್ನು ಅಳಿಸಿ ಹಾಕಿ ಬಿಡುಗಡೆ ಮಾಡಿದರು.

ಸೀಕ್ವೆನ್ಸ್‌ ಬದಲಿಸಿ ವಿಡಿಯೋ ಬಿಡುಗಡೆ ಮಾಡಿದ್ರಾ ಕುಮಾರಸ್ವಾಮಿ..?