ವರುಣ್‌ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು. 

ಬೆಂಗಳೂರು(ಜು.29): ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಎದುರಿನಿಂದ ಬರುತ್ತಿದ್ದ ಕ್ಯಾಬ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಮೃತನಾಗಿ ಕ್ಯಾಬ್‌ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.

ಸಂಜಯನಗರ ನಿವಾಸಿ ಬಿ.ಆರ್‌.ವರುಣ್‌(28) ಮೃತ ಕಾರು ಚಾಲಕ. ದೀಪಂ ಕ್ಯಾಬ್‌ ಟ್ಯಾಕ್ಸಿಯ ಚಾಲಕ ಸಂಜಯ್‌ ಕಾಲಿಗೆ ಗಂಭೀರ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮುಂಜಾನೆ 2.25ರ ಸುಮಾರಿಗೆ ಹುಣಸಮಾರನಹಳ್ಳಿ ಕ್ರಾಸ್‌ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಡ್ಯದ ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದು ಚಾಲಕ ಸಾವು: ತಡೆಗೋಡೆ ನಿರ್ಮಿಸದ ಸರ್ಕಾರಕ್ಕೆ ಇನ್ನೆಷ್ಟು ಬಲಿ ಬೇಕು

ಖಾಸಗಿ ಕಂಪನಿ ಉದ್ಯೋಗಿ ಬಿ.ಆರ್‌.ವರುಣ್‌ ತಮ್ಮ ಮಾರುತಿ ವ್ಯಾಗನರ್‌ ಕಾರಿನಲ್ಲಿ ಬೆಂಗಳೂರು ಕಡೆಯಿಂದ ಏರ್‌ಪೋರ್ಚ್‌ ಕಡೆಗೆ ವೇಗವಾಗಿ ಬರುತ್ತಿದ್ದರು. ಹುಣಸಮಾರನಹಳ್ಳಿ ಕ್ರಾಸ್‌ ಬಳಿ ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಕಕ್ಕೆ ಡಿಕ್ಕಿ ಹೊಡೆದು ಗ್ರಿಲ್‌ ದಾಟಿ ಎದುರಿನಿಂದ ಬರುತ್ತಿದ್ದ ಕ್ಯಾಬ್‌ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ವಾಗನಾರ್‌ ಕಾರಿನ ಚಾಲಕ ವರುಣ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಕ್ಯಾಬ್‌ ಚಾಲಕ ಸಂಜಯ್‌ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದೆ. ಕೂಡಲೇ ಸ್ಥಳೀಯರು ಗಾಯಾಳು ಸಂಜಯ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ವಿಚಾರ ತಿಳಿದು ಚಿಕ್ಕಜಾಲ ಸಂಚಾರ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಅಪಘಾತದಲ್ಲಿ ಜಖಂಗೊಂಡಿದ್ದ ಎರಡೂ ಕಾರುಗಳನ್ನು ತೆರವುಗೊಳಿಸಿದ್ದಾರೆ.

ವರುಣ್‌ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.