ಬೆಂಗಳೂರು(ಮಾ.04): ಕೊರೋನಾ ಸೋಂಕು ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ತೀವ್ರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಈ ಕಾರ್ಯದಲ್ಲಿ ಆರೋಗ್ಯ ಇಲಾಖೆ ಮಾತ್ರವಲ್ಲದೆ ಸಾರಿಗೆ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೈ ಜೋಡಿಸಿವೆ. ತಮ್ಮ ಇಲಾಖಾ ವ್ಯಾಪ್ತಿಯ ನೌಕರರು ಹಾಗೂ ನಾಗರಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿವೆ.

ಸಾರಿಗೆ ಇಲಾಖೆಯು ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳ ಚಾಲಕರು, ನಿರ್ವಾಹಕರಿಗೆ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ನಿರ್ದೇಶನ ನೀಡಿದೆ. ಜತೆಗೆ ಬಸ್‌ಗಳ ಒಳ ಹಾಗೂ ಹೊರಭಾಗಗಳು, ಬಸ್‌ ನಿಲ್ದಾಣಗಳು, ವಿಶ್ರಾಂತಿ ಕೊಠಡಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಬಸ್‌ಗಳ ಒಳಭಾಗವನ್ನು ರಾಸಾಯನಿಕ ದ್ರಾವಣ ಸಿಂಪಡಿಸಿ ಶುಚಿಗೊಳಿಸಬೇಕು. ವೋಲ್ವೋ ಬಸ್‌ ಹಾಗೂ ವಿಮಾನ ನಿಲ್ದಾಣದಿಂದ ಸೇವೆ ನೀಡುವ ಫ್ಲೈ ಬಸ್‌ಗಳನ್ನು ಆ್ಯಂಟಿ ಬ್ಯಾಕ್ಟೀರಿಯಾ ಕೆಮಿಕಲ್‌ ಬಳಸಿ ಫä್ಯಮಿಗೇಷನ್‌ ಮಾಡಬೇಕು ಎಂದು ಸೂಚನೆ ನೀಡಿದೆ.

ಇಡೀ ಕರ್ನಾಟಕದಲ್ಲಿ ಕೊರೋನಾ ಕಟ್ಟೆಚ್ಚರ!

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಅಳವಡಿಸಿರುವ ಪಬ್ಲಿಕ್‌ ಅನೌನ್ಸ್‌ಮೆಂಟ್‌ ಸಿಸ್ಟಂ (ಪಿಐಎಸ್‌)ಗಳ ಮೂಲಕ ಕೊರೋನಾ ವೈರಸ್‌ ಸೋಂಕು ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಿಂಗಲ್ಸ್‌ ಪ್ರಸ್ತುತಪಡಿಸಬೇಕು. ಬಿಎಂಟಿಸಿಯು ನಿಗಮದ ವ್ಯಾಪ್ತಿಯ ಪ್ರಮುಖ ಬಸ್‌ ನಿಲ್ದಾಣದಲ್ಲಿ ಪಬ್ಲಿಕ್‌ ಇನ್ಫಾರ್ಮೆಶನ್‌ ಸಿಸ್ಟಂ (ಪಿಐಎಸ್‌) ಡಿಜಿಟೆಲ್‌ ಫಲಕಗಳಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಲಾಗಿದೆ.

ವಿಶೇಷ ಕಟ್ಟೆಚ್ಚರ:

ಬೆಂಗಳೂರಿನಲ್ಲಿ ಕರೋನಾ ಸೋಂಕಿತ ದೇಶಗಳಿಂದ ಹೆಚ್ಚು ಮಂದಿ ಪ್ರಯಾಣಿಕರು ಆಗಮಿಸುವುದರಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ತಪಾಸಣೆ ವ್ಯವಸ್ಥೆ ಕಲ್ಪಿಸಲಾಗಿದೆ.

ಅಲ್ಲದೆ, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಕೊರೋನಾ ಶಂಕಿತರಿಗೆ ವಿಶೇಷ ವಾರ್ಡ್‌ ವ್ಯವಸ್ಥೆ ಮಾಡಲಾಗಿದೆ. ಸೋಂಕು ದೃಢಪಟ್ಟರೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಜತೆಗೆ ಎಲ್ಲಾ ಆಸ್ಪತ್ರೆಗಳಲ್ಲೂ ಸೂಕ್ತ ಮಾಸ್ಕ್‌ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗೆ ಅನುದಾನ ಒದಗಿಸಲಾಗಿದೆ.

ಚಿಕನ್ ತಿಂದ್ರೆ ಕೊರೋನಾ ಬರುತ್ತಾ? ಹೆಚ್ಚಿನ ಮಾಹಿತಿಗೆ ಈ ಸಹಾಯವಾಣಿಗೆ ಕರೆ ಮಾಡಿ

ಈ ಬಗ್ಗೆ ಮಾನತಾಡಿರುವ ಬಿಐಎಎಲ್‌ ಉಪಾಧ್ಯಕ್ಷ ವೆಂಕಟರಮಣ, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದೇಶಗಳಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ವಿವಿಧ ದೇಶಗಳ ಪಟ್ಟಿನೀಡಿದ್ದು, ಆ ದೇಶಗಳಿಂದ ಬರುವ ಪ್ರಯಾಣಿಕರನ್ನು ತಪಾಸಸಿಲಾಗುತ್ತಿದೆ. ಇತ್ತೀಚೆಗೆ ಇಟಲಿ, ಇರಾನ್‌, ಇರಾಕ್‌ಗಳಿಂದ ಬರುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದರು.

ಮಾಸ್ಕ್‌ಗಳಿಗೆ ಡಿಮ್ಯಾಂಡ್‌

ಸೋಂಕಿತ ವ್ಯಕ್ತಿಯಿಂದ ಹೊರಹೊಮ್ಮಿದ ವೈರಾಣುಗಳು ಮೂಗು, ಬಾಯಿ ಅಥವಾ ಕಣ್ಣುಗಳ ಮೂಲಕ ಆರೋಗ್ಯವಂತ ವ್ಯಕ್ತಿ ದೇಹ ಪ್ರವೇಶಿಸಿದರೆ ಅವರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಹೀಗಾಗಿ, ಕೊರೋನಾ ಭೀತಿಯಿಂದಾಗಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಮೆಡಿಕಲ್‌ ಮಾಸ್ಕ್‌ಗಳ ಖರೀದಿಗೆ ಬೇಡಿಕೆ ಹೆಚ್ಚಾಗಿದೆ. ಹಲವು ಆಸ್ಪತ್ರೆಗಳಲ್ಲಿ ಮಾಸ್ಕ್‌ ಲಭ್ಯವಿಲ್ಲದಿರುವುದರಿಂದ ಖಾಸಗಿ ಔಷಧ ಮಳಿಗೆಗಳಲ್ಲಿ ಬೇಡಿಕೆ ಜಾಸ್ತಿ ಆಗಿದೆ.