ಚಿಕನ್ ತಿಂದ್ರೆ ಕೊರೋನಾ ಬರುತ್ತಾ? ಹೆಚ್ಚಿನ ಮಾಹಿತಿಗೆ ಈ ಸಹಾಯವಾಣಿಗೆ ಕರೆ ಮಾಡಿ
ಎಂಥಾ ಕಾಲ ಬಂತು ನೋಡಿ.. ಮನೆಯಿಂದ ಹೊರ ಬರಂಗಿಲ್ಲ. ಕೆಲಸಕ್ಕೆ ಹೋಗೋವಂತಿಲ್ಲ. ಅಷ್ಟೇ ಅಲ್ಲ ಬೇರೆಯವರೊಂದಿಗೆ ಮಾತನಾಡುವುದಕ್ಕೂ ಭಯ ಆಗುತ್ತಿದೆ. ಅಷ್ಟೇ ಅಲ್ಲ ಕೋಳಿ ಮಾಂಸ ತಿನ್ನುವುದರಿಂದಲೂ ಸಹ ಕೊರೋನಾ ಬರುತ್ತದೆ ಎನ್ನುವ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಇದೀಗ ಇದಕ್ಕೆ ಸ್ವತಃ ಕರ್ನಾಟಕ ಪಶುಸಂಗೋಪನೆ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಅವರು ಏನೆಲ್ಲ ಹೇಳಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, [ಮಾ.03]: ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಮಾರಕ ವೈರಸ್ ಕೊರೊನಾ ಬಗ್ಗೆ ಸುಳ್ಳು ಸುದ್ದಿಗಳೂ ಹಬ್ಬುತ್ತಿವೆ. ಅದರಲ್ಲೂ ಕೋಳಿ ಮಾಂಸ ತಿಂದ್ರೆ ಈ ರೋಗ ಬರುತ್ತೆ ಅಂತೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳೂ ಹರಿದಾಡುತ್ತಿವೆ.
ಇದರಿಂದ ಕೆಲವರು ಚಿಕನ್ ತಿನ್ನುವುದನ್ನೇ ಬಿಟ್ಟಿದ್ದಾರೆ. ಆದ್ರೆ, ಚಿಕನ್ ತಿಂದ್ರೆ ಕೊರೋನಾ ಬರುವುದಿಲ್ಲ ಎಂದು ಪಶುಸಂಗೋಪನೆ ಹಾಗೂ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಚಿಕನ್ ತಿಂದ್ರೆ ಕೊರೋನಾ ಬರುತ್ತಾ?: ವದಂತಿ VS ಸತ್ಯ!
ಬೆಂಗಳೂರಿನಲ್ಲಿ ಇಂದು [ಮಂಗಳವಾರ] ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೊರೋನಾ ವೈರಸ್ ಕೋಳಿ ಮಾಂಸದಿಂದ ಮತ್ತು ಕೋಳಿ ಮೊಟ್ಟೆಗಳಿಂದ ಎನ್ನುವುದು ಶುದ್ದ ಸುಳ್ಳು. ಇಂತಹ ವದಂತಿ/ತಪ್ಪು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವದಂತಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಇದರ ಬಗ್ಗೆ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.
ನಮ್ಮ ದೇಶದಲ್ಲಿ ಕೋಳಿಗಳಿಗೆ ಕೊರೊನ ವೈರಾಣು ಸೋಂಕು ಕಾಣಿಸಿಕೊಂಡ ಬಗ್ಗೆ ಇದುವರೆಗೆ ಯಾವುದೇ ವರದಿಗಳಿಲ್ಲ. ಈ ವೈರಾಣು ಸೋಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವೇನೂ ಇಲ್ಲ. ಸೋಂಕುಪೀಡಿತ ಮನುಷ್ಯರ ಸಂಪರ್ಕದಿಂದ ಮಾತ್ರ ಈ ಸೋಂಕು ಇತರರಿಗೆ ಹರಡುತ್ತದೆ ಎಂದು ಪ್ರಭು ಚವ್ಹಾಣ್ ಹೇಳಿದರು.
ಚಿಕನ್ ತಿಂದ್ರೆ ಕೊರೊನಾ ಬರುತ್ತಾ ..?
ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯಿಂದಾಗಿ ಕುಕ್ಕುಟ ಉದ್ಯಮಕ್ಕೆ ಪೆಟ್ಟು ಬೀಳುತ್ತಿದೆ. ಸಾಮಾನ್ಯವಾಗಿ ಕೋಳಿ ಮಾಂಸವನ್ನು 100 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಬೇಯಿಸಲಾಗುತ್ತದೆ. ಈ ಉಷ್ಣತೆಯಲ್ಲಿ ಯಾವುದೇ ವೈರಾಣುಗಳು ಬದುಕುಳಿಯಲು ಸಾಧ್ಯವಿಲ್ಲ. ಆದ್ದರಿಂದ, ಸಾರ್ವಜನಿಕರು ಕೊರೋನಾ ವೈರಾಣು ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿಗಳಿಗೆ ಕಿವಿ ಕೊಡಬಾರದು ಎಂದು ಮನವಿ ಮಾಡಿದರು.
ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಕೋಳಿ ಮಾಂಸ ಮತ್ತು ಮೊಟ್ಟೆ ದೇಹಕ್ಕೆ ಉತ್ತಮ ಪ್ರೋಟೀನ್ ಪೂರೈಸುವ ಆಹಾರವಾಗಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಯಾರೂ ಇಂತಹ ವದಂತಿಗಳನ್ನು ಹರಡಬಾರದು ಎಂದಿರುವ ಸಚಿವರು, ಸಾರ್ವಜನಿಕರಲ್ಲಿ ಯಾವುದೇ ತರಹದ ಸಂದೇಹಗಳಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ 080 23418075, 080 23416431, 080 23417100 ಅಥವಾ ಸಹಾಯವಾಣಿ: 1800 425 012 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದ್ದಾರೆ.