Bengaluru: ಐಟಿ-ಬಿಟಿ ಸಿಟಿಯಲ್ಲಿ ಎಮ್ಮೆಗಳ ಟ್ರಾಫಿಕ್ : ಎಮ್ಮೆಗಳ ವಿರುದ್ಧ ದೂರು ನೀಡಿದ ಇಂಜಿನಿಯರ್‌ಗಳು
ಐಟಿ-ಬಿಟಿ ಸಿಟಿ ಬೆಂಗಳೂರಿನ ರಸ್ತೆಯಲ್ಲಿ ಎಮ್ಮೆಗಳಿಂದ ಟ್ರಾಫಿಕ್ ಜಾಮ್
ಎಮ್ಮೆಗಳ ವಿರುದ್ಧ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ ಐಟಿ ಕಂಪನಿ ಉದ್ಯೋಗಿಗಳು
ಪ್ರತಿನಿತ್ಯ ಕಚೇರಿಗೆ ಹೋಗುವ ವೇಳೆ ಎಮ್ಮೆಗಳಿಂದ 40 ನಿಮಿಷ ಟ್ರಾಫಿಕ್ ಸಮಸ್ಯೆ
ವರದಿ : ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜ.22): ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಐಟಿ-ಬಿಟಿ ನಗರವೆಂದು ಪ್ರಸಿದ್ಧಿ ಹೊಂದಿದ ಬೆಂಗಳೂರು ನಗರದಲ್ಲಿ ಎಮ್ಮೆಗಳ ಹಾವಳಿ ಹೆಚ್ಚಾಗಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆ ಪ್ರಮುಖ ರಸ್ತೆಗಳಲ್ಲಿ ಎಮ್ಮೆಗಳ ಸಂಚಾರವನ್ನು ತಡೆಯುವಂತೆ ಟೆಕ್ಕಿಗಳು (ಐಟಿ-ಬಿಟಿ ಕಂಪನಿ ಉದ್ಯೋಗಿಗಳು) ಪೊಲೀಸರಿಗೆ ದೂರು ನೀಡಿರುವ ವಿಚಿತ್ರ ಪ್ರಕರಣ ನಡೆದಿದೆ.
ಹೌದು, ಬೆಂಗಳೂರಿನ ಕೇಂದ್ರ ಭಾಗಗಳಾದ ಕಾಟನ್‌ಪೇಟೆ, ಚಾಮರಾಜಪೇಟೆ, ಕಲಾಸಿಪಾಳ್ಯ, ವಿ.ವಿ.ಪುರ, ಬಿನ್ನಿಪೇಟೆ ಸೇರಿ ವಿವಿಧ ಪ್ರಮುಖ ರಸ್ತೆಗಳಲ್ಲಿ ದನಗಳ ಸಂಚಾರದಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುವುದಕ್ಕೆ ಜನರು ಈಗಾಗಲೇ ಬೇಸತ್ತಿದ್ದಾರೆ. ಹಸುಗಳು ಓಡಿಸಿದರೆ ರಸ್ತೆಯನ್ನು ಬಿಟ್ಟು ಪಕ್ಕಕ್ಕೆ ಹೋಗುತ್ತವೆ. ಆದರೆ, ಎಮ್ಮೆಗಳು ರಸ್ತೆಗೆ ಇಳಿದವೆಂದರೆ ಎಂತಹದ್ದೇ ವಾಹನ ಬಂದರೂ ಅದಕ್ಕೆ ದಾರಿ ಬಿಡದೇ ನಿಧಾನವಾಗಿ ಹೋಗುತ್ತವೆ. ಕೆಲವೊಮ್ಮೆ ರಸ್ತೆಯಲ್ಲಿ ಅಡ್ಡ ನಿಂತರೆ ಜಪ್ಪಯ್ಯ ಎಂದರೂ ಜರುಗುವುದಿಲ್ಲ. ಈಗ ಐಟಿ ಕಂಪನಿಗಳು ಕೇಂದ್ರೀಕೃತ ಆಗಿರುವ ವೈಟ್‌ಫೀಲ್ಡ್, ಬೆಳ್ಳಂದೂರು ಮತ್ತು ಕಸವನಹಳ್ಳಿ ಸೇರಿದಂತೆ ವಿವಿಧೆಡೆ ಎಮ್ಮೆಗಳನ್ನು ರಸ್ತೆಗೆ ಬಿಡಲಾಗುತ್ತಿದ್ದು, ಇವುಗಳಿಂದ ರಕ್ಷಣೆ ನೀಡುವಂತೆ ಟೆಕ್ಕಿಗಳು ಪೊಲೀಸರ ಮೊರೆ ಹೋಗಿರುವ ವಿಚಿತ್ರ ಘಟನೆ ನಡೆದಿದೆ.
ಭ್ರಷ್ಟಾಚಾರ ನಿಲ್ಲಿಸಿ ಬೆಂಗಳೂರು ಉಳಿಸಿ ಹೆಸರಿನಲ್ಲಿ ಬೆಂಗಳೂರಿನ ಹಲವೆಡೆ ನಾಳೆ ಕಾಂಗ್ರೆಸ್ ಪ್ರತಿಭಟನೆ
ಎಮ್ಮೆಗಳ ಕಾಟಕ್ಕೆ ಟೆಕ್ಕಿಗಳ ಕಂಗಾಲು: ಹೌದು ಪ್ರತಿನಿತ್ಯ ಬೆಳಗ್ಗೆ ಆಫೀಸ್‌ಗೆ ತೆರಳುವ ವೇಳೆಯಲ್ಲಿ ಎಮ್ಮೆಗಳು ಹಿಂಡು- ಹಿಂಡಾಗಿ ರಸ್ತೆಗೆ ಬರುವುದರಿಂದ ಭಾರಿ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಪ್ರತಿನಿತ್ಯ ಎಮ್ಮೆಗಳ ಕಾಟಕ್ಕೆ ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಕಂಗಾಲಾಗಿದ್ದಾರೆ. ಎಮ್ಮೆಗಳಿಂದ ನಮಗೆ ಪ್ರತಿದಿನವೂ ತೊಂದರೆ ಆಗುತ್ತಿದೆ ಎಂದು ಟ್ವಿಟರ್ ಮೂಲಕ ಟ್ರಾಫಿಕ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಮಾರ್ನಿಂಗ್ ಟೈಮ್ ನಲ್ಲಿ , ಆಫೀಸ್ ಹೊತ್ತಲ್ಲಿ ಎಮ್ಮೆಗಳಿಂದ ಪ್ರಾಬ್ಲಂ ಆಗುತ್ತಿದೆ. ಎಮ್ಮೆಗಳಿಂದ ಆಫೀಸ್‌ಗೆ ಗೋಗುವ ದಾರಿಯಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಉಂಟಾಗುತ್ತಿದೆ ಎಂದು ದೂರು ನೀಡಿದ್ದಾರೆ.
ಕಸವನಹಳ್ಳಿಯಲ್ಲಿ ಎಮ್ಮೆಗಳ ಕಿರಿಕಿರಿ: ಇನ್ನು ಕಸವನಹಳ್ಳಿ ಸುತ್ತಲಿನ ಪ್ರದೇಶಗಳಲ್ಲಿ ಐಟಿ ಕಂಪನಿಗಳು ಕೇಂದ್ರೀಕೃತವಾಗಿವೆ. ಕಚೇರಿಗೆ ಹೋಗಲು ರಸ್ತೆಯಲ್ಲಿನ ಎಲ್ಲ ಟ್ರಾಫಿಕ್ ಸಿಗ್ನಲ್‌ಗಳನ್ನು ಒಳಗೊಂಡಂತೆ 20 ನಿಮಿಷದ ದಾರಿಯನ್ನು ಕ್ರಮಿಸಬೇಕಿರುತ್ತದೆ. ಆದರೆ, ಕಚೇರಿಗೆ ಹೋಗುವ ಬೆಳಗ್ಗಿನ ಜಾವದಲ್ಲೇ ಹಿಂಡು- ಹಿಂಡಾಗಿ ಎಮ್ಮೆಗಳನ್ನು ಮೇಯಿಸಲು ಹೊಡೆದುಕೊಂಡು ಹೋಗಲಾಗುತ್ತದೆ. ಈ ವೇಳೆ ಎಮ್ಮೆಗಳು ಕಾರು, ಬೈಕ್, ಬಸ್, ಬೈಕ್‌ಗಳು ಸೇರಿ ಎಲ್ಲ ವಾಹನಗಳಿಗೆ ಅಡ್ಡ್ ನಿಲ್ಲುತ್ತವೆ. ಕೆಲವೊಮ್ಮೆ ಸರದಿ ಸಾಲಿನಲ್ಲಿ ರಸ್ತೆಯನ್ನು ದಾಟಲು ಎಮ್ಮೆಗಳು ಮುಂದಾಗುತ್ತವೆ. ಈ ವೇಳೆ 30 ರಿಂದ 45 ನಿಮಿಷ ಎಮ್ಮೆಗಳಿಂದ ಟ್ರಾಫಿಕ್ ಜಾಮ್ ಆಗುತ್ತದೆ. ಇದ್ರಿಂದ ನಗರದ ಕಸವನಹಳ್ಳಿ ರೋಡ್ ನಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
Namma Metro ಪಿಲ್ಲರ್ ದುರಂತ: ಮೆಟ್ರೋ ಎಂಡಿ ಅಜುಂ ಪರ್ವೇಜ್‌ಗೆ ಪೊಲೀಸರ ಗ್ರಿಲ್
ಕಳೆದ 7 ತಿಂಗಳಿಂದ ಸಮಸ್ಯೆ: ಟ್ವಿಟರ್ ಖಾತೆಯಿಂದ ಟ್ರಾಫಿಕ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಪಶುಸಂಗೋಪನಾ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ (ಬಿಬಿಎಂಪಿ) ಟ್ಯಾಗ್ ಮಾಡಲಾಗಿದೆ. ಬೆಳಗ್ಗೆ ಕಚೇರಿಗಳಿಗೆ ಹೋಗುವ ವೇಳೆಯಲ್ಲಿ ಎಮ್ಮೆಗಳನ್ನು ರಸ್ತೆಗೆ ತರುವುದನ್ನು ನಿಲ್ಲಿಸಬೇಕು. ಕಳೆದ ಆರೇಳ ತಿಂಗಳಿಂದ ಎಮ್ಮೆಗಳಿಂದ ಭಾರಿ ಸಮಸ್ಯೆ ಆಗುತ್ತಿದೆ. ಇದರಿಂದ ಪ್ರತಿನಿತ್ಯ ಕಚೇರಿಗಳಿಗೆ ಹೋಗುವುದು ತಡವಾಗುತ್ತಿದೆ. ಕೂಡಲೇ ಟ್ರಾಫಿಕ್ ಪೊಲೀಸರು, ಬಿಬಿಎಂಪಿ ಹಾಗೂ ಪಶು ಸಂಗೋಪನಾ ಇಲಾಖೆ ಸೇರಿ ಜಂಟಿಯಾಗಿ ಕ್ರಮ ಕೈಗೊಂಡು ಎಮ್ಮೆಗಳಿಂದ ಆಗುವ ತೊಂದರೆ ನಿವಾರಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.