ಇತ್ತೀಚಿಗೆ ಹೆಣ್ಣೂರು ಕ್ರಾಸ್‌ ಬಳಿ ಎಚ್‌ಬಿಆರ್‌ ಲೇಔಟ್‌ನಲ್ಲಿ ಮೆಟ್ರೋ ಯೋಜನೆಯ ಪಿಲ್ಲರ್‌ ಕುಸಿದು ತಾಯಿ-ಮಗ ಸಾವು ದುರಂತ ಸಂಬಂಧ ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷ್‌ನ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್‌ ಅವರನ್ನು ಶನಿವಾರ ಗೋವಿಂದಪುರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ಬೆಂಗಳೂರು (ಜ.22): ಇತ್ತೀಚಿಗೆ ಹೆಣ್ಣೂರು ಕ್ರಾಸ್‌ ಬಳಿ ಎಚ್‌ಬಿಆರ್‌ ಲೇಔಟ್‌ನಲ್ಲಿ ಮೆಟ್ರೋ ಯೋಜನೆಯ ಪಿಲ್ಲರ್‌ ಕುಸಿದು ತಾಯಿ-ಮಗ ಸಾವು ದುರಂತ ಸಂಬಂಧ ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷ್‌ನ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್‌ ಅವರನ್ನು ಶನಿವಾರ ಗೋವಿಂದಪುರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ನೋಟಿಸ್‌ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾದ ಅಜುಂ ಪರ್ವೇಜ್‌ ಅವರನ್ನು ಎರಡು ಗಂಟೆಗಳ ಕಾಲ ಪ್ರಶ್ನಿಸಿ ತನಿಖಾಧಿಕಾರಿ ಹೇಳಿಕೆ ಪಡೆದಿದ್ದಾರೆ. ಮೆಟ್ರೋ ಯೋಜನೆಯ ರೈಲ್ವೆ ಮಾರ್ಗದ ಕಾಮಗಾರಿಯನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿ ಪಡೆದಿದೆ. ಕಾಮಗಾರಿ ಗುಣಮಟ್ಟಕಾಯ್ದುಕೊಳ್ಳುವಂತೆ ಸೂಚಿಸಲಾಗಿತ್ತು. ಈ ಘಟನೆ ಹೇಗೆ ನಡೆದಿದೆ ಎಂಬುದರ ಬಗ್ಗೆ ನಿಗಮ ಸಹ ಆಂತರಿಕ ವಿಚಾರಣೆ ನಡೆಸುತ್ತಿದೆ. ಐಐಎಸ್‌ಸಿ ತಜ್ಞರಿಂದ ಸಹ ಕೇಳಿದೆ ಎಂದು ವಿಚಾರಣೆ ವೇಳೆ ಪರ್ವೇಜ್‌ ಹೇಳಿರುವುದಾಗಿ ತಿಳಿದು ಬಂದಿದೆ.

ಐಐಎಸ್‌ಸಿ ವರದಿ ಬಳಿಕ ಘಟನೆ ಬಗ್ಗೆ ನಿಖರ ಕಾರಣ ಗೊತ್ತಾಗಲಿದೆ. ನಾನು ನಿಯಮಾನುಸಾರ ಕಾರ್ಯ ನಿರ್ವಹಿಸಿದ್ದು, ನನ್ನಿಂದ ಯಾವುದೇ ಲೋಪವಾಗಿಲ್ಲ. ಕಾಮಗಾರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಎಂಡಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಇದೇ ತಿಂಗಳ 10 ರಂದು ಮೆಟ್ರೋ ರೈಲು ಯೋಜನೆಯ ನಿರ್ಮಾಣ ಹಂತದ ಕಬ್ಬಿಣದ ಪಿಲ್ಲರ್‌ ದಿಢೀರ್‌ ಕುಸಿದು ಹೊರಮಾವು ಕಲ್ಕೆರೆಯ ಡಿಮ್ಯಾಕ್ಸ್‌ ಅಪಾರ್ಟ್‌ಮೆಂಟ್‌ ನಿವಾಸಿ ತೇಜಸ್ವಿನಿ ಸುಲಾಖೆ ಹಾಗೂ ಅವರ ಪುತ್ರ ವಿಹಾನ್‌ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಮೃತರ ಪತಿ ಲೋಹಿತ್‌ ಹಾಗೂ ಮಗಳು ವಿಸ್ಮಿತಾ ಪರಾಗಿದ್ದರು.

Namma Metro ಪಿಲ್ಲರ್‌ ದುರಂತಕ್ಕೆ ನಿರ್ಲಕ್ಷ್ಯ ಕಾರಣ?: ಐಐಎಸ್‌ಸಿಯಿಂದ ವರದಿ ಸಲ್ಲಿಕೆ ನಿರೀಕ್ಷೆ

ಐಐಎಸ್‌ಸಿ ವರದಿ ಕೈ ಸೇರಿಲ್ಲ: ಪಿಲ್ಲರ್‌ ಕುಸಿದ ಪ್ರಕರಣ ಸಂಬಂಧ ಪೊಲೀಸರ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದೇನೆ. ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಪರ್ಕವಾಗಿ ಉತ್ತರಿಸಿದ್ದೇನೆ ಎಂದು ಬಿಎಂಆರ್‌ಸಿಎಲ್‌ ಎಂಡಿ ಅಜುಂ ಪರ್ವೇಜ್‌ ತಿಳಿಸಿದ್ದಾರೆ. ಪೊಲೀಸರ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್‌ ನೀಡಿದ್ದರು. ಅಂತೆಯೇ ತನಿಖಾಧಿಕಾರಿ ಮುಂದೆ ಹಾಜರಾಗಿ ಪ್ರಕರಣದ ಸಂಬಂಧ ಎಲ್ಲ ಮಾಹಿತಿ ನೀಡಿದ್ದೇನೆ ಎಂದರು. ಈ ಘಟನೆ ಸಂಬಂಧ ಐಐಎಸ್‌ಸಿ ತಜ್ಞರು ನೀಡಿರುವ ವರದಿ ನನ್ನ ಕೈ ಸೇರಿಲ್ಲ. ಆ ವರದಿ ಪರಾಮರ್ಶಿಸಿದ ಬಳಿಕ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಜುಂ ಪರ್ವೇಜ್‌ ತಿಳಿಸಿದರು.