Shivamogga ನೀರಿನ ಸಂಪಿನಲ್ಲಿ ಬಿದ್ದಿದ ಗೂಳಿಯ ರಕ್ಷಣೆ 

  • ಸಾಗರದ ಎಸ್ ಎನ್ ನಗರದಲ್ಲಿ ನಡೆದ ಘಟನೆ
  • ಅಗ್ನಿಶಾಮಕ ದಳ ಕಾರ್ಯಾಚರಣೆ ಯಿಂದ ಜೀವಂತವಾಗಿ ಹೊರ ಬಿದ್ದ ಗೂಳಿ
  • ಕಳೆದೊಂದು ವಾರದಿಂದ ಎಡಬಿಡದೆ  ಮಳೆ ಸುರಿಯುತ್ತಿದ್ದು, ಅವಾಂತರಗಳು ನಡೆಯುತ್ತಲೇ ಇದೆ
buffalo Rescued which it fell in a water tank at shivamogga gow

ಶಿವಮೊಗ್ಗ (ಜು.13): ಸಾಗರ  ನಗರಸಭೆ ವ್ಯಾಪ್ತಿಯ ಎಸ್ ಎನ್ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮುಂಭಾಗದಲ್ಲಿರುವ 10 ಅಡಿ ಆಳದ ಸಂಪಿನಲ್ಲಿ ಕಾಲು ಜಾರಿ ಬಿದ್ದಿದ್ದ ಗೂಳಿಯನ್ನು  ಅಗ್ನಿಶಾಮಕ ದಳ ಸಿಬ್ಬಂದಿ ಜೀವಂತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ ಎನ್ ನಗರದಲ್ಲಿ ಮಧು ಎನ್ನುವವರ ನಿರ್ಮಾಣ ಹಂತದ ಕಟ್ಟಡದ ಮುಂಭಾಗದಲ್ಲಿ ಇರುವ 10 ಅಡಿ ಆಳದ ಸಂಪಿನಲ್ಲಿ ಆಕಸ್ಮಿಕವಾಗಿ ಗೂಳಿ ಬಿದ್ದಿದ್ದು ಮೇಲೆ ಬರಲಾಗದೇ ಪರದಾಟ ನಡೆಸಿತ್ತು. ಕಟ್ಟಡದ ಬಳಿ ಬಂದಿದ್ದ ಮನೆ ಮಾಲಿಕ ತಕ್ಷಣ  ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.  ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ  ಜೀವಂತವಾಗಿ ಗೂಳಿಯನ್ನು ಹೊರ ತೆಗೆದಿದ್ದಾರೆ. ಇದರಿಂದಾಗಿ ಮೂಕ ಪ್ರಾಣಿಯೊಂದು ಬದುಕಿದೆಯಾ ಬಡ ಜೀವವೇ ಎಂದು ಹೊರ ಬಂದಿತ್ತು. ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಎಡಬಿಡದೆ  ಮಳೆ ಸುರಿಯುತ್ತಿದೆ.  ಈ ಸಂದರ್ಭದಲ್ಲಿ ಅನಾಹುತಗಳು ಆಗೋದು ಹೆಚ್ಚು ಅದರಲ್ಲೂ ಸಾಗರ ನಗರ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡಗಳ ಮುಂಭಾಗದಲ್ಲಿ ತೆರೆಯಲಾಗಿರುವ ಬಾವಿಗಳು ಹಾಗೂ ಸಂಪು ಮುಚ್ಚದೇ ಇರುವುದು ಅನಾಹುತಗಳಿಗೆ ದಾರಿ ಮಾಡಿ ಕೊಡುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಇಂತಹ ತೆರೆಯಲಾಗಿರುವ ಬಾವಿಗಳು ಹಾಗೂ ಸಂಪು ಪರಿಶೀಲನೆ ನಡೆಸಿ ಕ್ರಮ ಜರುಗಿಸುವ ಮೂಲಕ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕು, ಇನ್ನು ನಿರ್ಮಾಣ ಹಂತದ ಕಟ್ಟಡಗಳ ಮಾಲೀಕರು ತೆರೆದಿರುವ ಸಂಪನ್ನು ಮುಚ್ಚಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ  ನೋಡಿಕೊಳ್ಳಬೇಕು ಎಂದು ಸಾಗರ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಕೆ ತಿಮ್ಮಪ್ಪ ಮನವಿ ಮಾಡಿ ಕೊಂಡಿದ್ದಾರೆ.

ಅಪರೇಷನ್ ಗೂಳಿ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಸಂತೋಷ್ ಬಿ , ಜಯಂತ್ ಎಚ್ ಡಿ , ಆನಂದ್ ವಡ್ಡರ್, ಪ್ರಕಾಶ್ ಈಳಗೇರ,ಸತೀಶ್ ಕುಮಾರ್, ಶ್ರೀನಿವಾಸ್ ದೇಸಳ್ಳಿ, ಶಿವಾನಂದ ಸ್ವಾಮಿ, ಶ್ರೀಧರ್ ಎನ್.ಡಿ, ಹಾಜರಿದ್ದರು. ಸಾರ್ವಜನಿಕರು ಗೂಳಿ ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸೇವೆಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಆರ್ಭಟ ಗಣನೀಯವಾಗಿ ಇಳಿದಿದ್ದರೂ ವರದಾ ವದಿಯು ಪ್ರವಾಹ ಮಟ್ಟದಲ್ಲೇ ಹರಿಯುತ್ತಿರುವುದರಿಂದ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ತಾತ್ಕಾಲಿಕವಾಗಿ ಇಲ್ಲಿ ದೋಣಿ ಸಂಪರ್ಕವನ್ನು ಕಲ್ಪಿಸಿ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಕೆಲಸ ಮಾಡಲಾಗಿದೆ.

ಗೌತಮಪುರದಲ್ಲಿ ಮನೆ ಕುಸಿತ: ಅಪಾಯದಿಂದ ಪಾರು: ಸಾಗರ ತಾಲೂಕಿನಲ್ಲಿ ನಿರಂತರ ಮಳೆಗೆ ಹಲವು ಮನೆಗಳು ಬಿದ್ದಿದ್ದು, ಮಂಗಳವಾರವೂ ಗೌತಮಪುರ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು, ಮನೆಯಲಿದ್ದವರು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.

ಸೋಮವಾರ ರಾತ್ರಿ ಎಡೆಬಿಡದೇ ಸುರಿದ ಮಳೆಯಿಂದಾಗಿ ಮನೆ ಗೋಡೆಗಳು ಪೂರ್ಣವಾಗಿ ನೆನೆದಿವೆ. ರಾತ್ರಿ ಮಲಗಿದ್ದಾಗ ಈ ಘಟನೆ ಸಂಭವಿಸಿದ್ದು, ಮಧ್ಯರಾತ್ರಿಯಲ್ಲಿ ಏನೋ ಶಬ್ದ ಕೇಳಿಸಿದೆ. ಕೂಡಲೇ ಮನೆಯಲಿದ್ದವರು ಹೊರಗೆ ಬಂದಿದ್ದಾರೆ. ಆಗ ಕ್ಷಣ ಮಾತ್ರದಲ್ಲಿ ಸಂಪೂರ್ಣ ಮನೆ ಕುಸಿದುಬಿದ್ದಿದೆ. ಮಳೆಗೆ ಇದ್ದ ಮನೆಯೊಂದು ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಂತಾಗಿದೆ.

ವಿಷಯ ತಿಳಿದ ತಕ್ಷಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್‌ ದಾಸನ್‌, ಕಂದಾಯ ಇಲಾಖೆಯ ಪ್ರಭಾರ ರಾಜಸ್ವ ನಿರೀಕ್ಷಕ ಕವಿರಾಜ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಮನೆ ಸಂಪೂರ್ಣ ಕಳೆದುಕೊಂಡ ನಾಗಪ್ಪ ಕುಟುಂಬದವರಿಗೆ ಸ್ಥಳೀಯ ಸಮುದಾಯ ಭವನದಲ್ಲಿ ಆಶ್ರಯ ನೀಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣನತಲೆ ಗ್ರಾಮದಲ್ಲಿ ಲೋಕೇಶ್‌ ಎಂಬವರ ಮನೆಯ ಗೋಡೆ ಭಾರಿ ಮಳೆಯಿಂದ ಕುಸಿತಗೊಂಡಿದೆ.

 

Latest Videos
Follow Us:
Download App:
  • android
  • ios