ದೋಷಯುಕ್ತ 4ಜಿ ನೆಟ್‌ವರ್ಕ್ ಸೇವೆಗಾಗಿ ಬಿಎಸ್‌ಎನ್‌ಎಲ್ ವಿರುದ್ಧ ದೂರು ದಾಖಲಿಸಿದ್ದರು. ದಕ್ಷಿಣ ಕನ್ನಡ ಗ್ರಾಹಕ ನ್ಯಾಯಾಲಯವು ಗ್ರಾಹಕರ ಪರ ತೀರ್ಪು ನೀಡಿ, ಸೇವಾ ನ್ಯೂನತೆಗಾಗಿ ದಂಡ, ರೀಚಾರ್ಜ್ ಮೊತ್ತದ ಮರುಪಾವತಿ ಹಾಗೂ ನಿರಂತರ ಸೇವೆ ಒದಗಿಸಲು ಬಿಎಸ್‌ಎನ್‌ಎಲ್‌ಗೆ ಆದೇಶಿಸಿದೆ.
ಮಂಗಳೂರು: ದೋಷಯುಕ್ತ 4ಜಿ ನೆಟ್‌ವರ್ಕ್ ಒದಗಿಸಿದ್ದ ಬಿಎಸ್‌ಎನ್ಎಲ್ ಕಂಪನಿಗೆ ದಂಡ ವಿಧಿಸಿ ಗ್ರಾಹಕನ ಪರ ದಕ್ಷಿಣ ಕನ್ನಡ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನು ಮಾಡಿಕೊ೦ಡಿರುವ ಯುವ ವಕೀಲ ತೇಜ ಕುಮಾರ್ ಡಿ.ಯಂ. ಅವರು ಬಿಎಸ್‌ಎನ್‌ಎಲ್ ಕಂಪನಿಯ ಸಿಮ್ ನ್ನು 2014ರಿಂದ ಉಪಯೋಗಿಸುತ್ತಿದ್ದು, 2023 ರಿ೦ದ 4ಜಿ ನೆಟ್ವರ್ಕ್ ಸಿಮ್ ಗೆ ವಿಸ್ತರಿಸಿದ್ದರು. ವಿಸ್ತರಿಸಿದ ಕೆಲವು ತಿಂಗಳು 4ಜಿ ನೆಟ್‌ವರ್ಕ್ ಲಭ್ಯವಾಗಿತ್ತು. ನಂತರದಲ್ಲಿ 4ಜಿ ನೆಟ್‌ವರ್ಕ್ ಹಠಾತ್ತಾಗಿ ಸ್ಥಗಿತಗೊಳ್ಳುತ್ತಿತ್ತು. ಸ್ವಲ್ಪ ಸಮಯ ಬಳಿಕ ಬಿಟ್ಟು ಬಿಟ್ಟು 4ಜಿ ನೆಟ್‌ವರ್ಕ್ ಲಭ್ಯವಾಗಿತ್ತು. ಈ ಬಗ್ಗೆ ಗ್ರಾಹಕರು ಹಲವಾರು ಬಾರಿ ಕಂಪನಿಗೆ ದೂರು ನೀಡಿದ್ದರು.
4ಜಿ ನೆಟ್‌ವರ್ಕ್ ಸಮಸ್ಯೆ
ಆದರೆ ಬಿಟ್ಟು ಬಿಟ್ಟು ಬರುವ 4ಜಿ ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಹಕರು ತೀವ್ರ ಸಮಸ್ಯೆಗೆ ಗುರಿಯಾಗಿದ್ದರು. ಸಮಸ್ಯೆಯನ್ನು ಸರಿಪಡಿಸಲು ಹಳೆಯ ಬಿಎಸ್‌ಎನ್‌ಎಲ್ ಕಂಪನಿಯ ಸಿಮ್ ನ್ನು ಕಂಪನಿಯ ನಿರ್ದೇಶನದಂತೆ ಬದಲಾಯಿಸಿ ಹೊಸ 4ಜಿ ನೆಟ್ವರ್ಕ್ ಸಿಮ್ ಅನ್ನೂ ಖರೀದಿಸಿದರು. ಹೊಸ ಸಿಮ್ ಕಾರ್ಡ್ ಖರೀದಿಸಿದರೂ ಕೂಡ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕಂಪನಿ ವಿಫಲವಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಹಕರು ಗ್ರಾಹಕರ ಪರಿಹಾರ ಆಯೋಗಕ್ಕೆ ತೇಜ್ ಕುಮಾರ್ ಮೊರೆ ಹೋದರು. ತೇಜ ಕುಮಾರ್ ಸಲ್ಲಿಸಿದ ದೂರನ್ನು ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಬಿಎಸ್‌ಎನ್‌ಎಲ್ ಸಂಸ್ಥೆಯು ನಿರಂತರವಾಗಿ ಗ್ರಾಹಕರಿಗೆ ನೀಡಬೇಕು. 4ಜಿ ನೆಟ್‌ವರ್ಕ್ ಒದಗಿಸವಲ್ಲಿ ನ್ಯೂನತೆ ತೋರಿದೆ ಎಂದು ತೀರ್ಪು ನೀಡಿತು.
ಎಷ್ಟು ದಂಡ?
ಪ್ರಮಾದ ಎಸಗಿದ ಬಿಎಸ್‌ಎನ್‌ಎಲ್ ಸಂಸ್ಥೆಯು ಅನಿರ್ಬಂಧಿತ 4ಜಿ ನೆಟ್‌ವರ್ಕ್‌ನ್ನು ನಿರಂತರವಾಗಿ ನೀಡಬೇಕು ಹಾಗೂ 4ಜಿ ನೆಟ್‌ವರ್ಕ್ ರಿಚಾರ್ಜ್ 3,880 ರು.ವನ್ನು ಶೇಕಡಾ 6ರ ಬಡ್ಡಿ ಮತ್ತು ಇದರ ಜೊತೆಗೆ ಸೇವಾ ನ್ಯೂನ್ಯತೆಗಾಗಿ 10,000 ರು. ದಂಡ ಹಾಗೂ ಪ್ರಕರಣದ ವೆಚ್ಚವಾಗಿ 5,000 ರು.ವನ್ನು 65 ದಿನದೊಳಗೆ ಪಾವತಿಸಲು ಆದೇಶ ನೀಡಿದೆ.
ಮಂಗಳೂರಿನ ವಕೀಲರಾದ ತೇಜ ಕುಮಾರ್ ಅವರು ಸ್ವತಃ ದೂರುದಾರರಾಗಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ಮೊದಲ ಬಾರಿಗೆ ಗಡಿ ಗ್ರಾಮಕ್ಕೆ ಸ್ಯಾಟ್‌ಲೈಟ್ ಮೂಲಕ ಬಿಎಸ್ಎನ್ಎಲ್ ನೆಟ್‌ವರ್ಕ್ ಸೌಲಭ್ಯ
ಇದನ್ನೂ ಓದಿ: ಪಾಕಿಸ್ತಾನದಲ್ಲಿಲ್ಲ Jio, Vi, Airtel; ಇಲ್ಲಿಯ ನೆಟ್‌ವರ್ಕ್ ಟೆಲಿಕಾಂ ಕಂಪನಿಗಳು ಯಾವವು?


