ಮೈ ಕೊಡವಿ ಮೇಲೆದ್ದ ಬಿಎಸ್‌ಎನ್‌ಎಲ್ ಅಬ್ಬರಕ್ಕೆ ಅಂಬಾನಿ, ಏರ್‌ಟೆಲ್ ಫುಲ್ ಶೇಕ್!
BSNL 4G Roll Out: ಬಿಎಸ್‌ಎನ್‌ಎಲ್ ತನ್ನ 4G ನೆಟ್‌ವರ್ಕ್ ವಿಸ್ತರಣೆಗಾಗಿ ₹2,900 ಕೋಟಿ ಮೌಲ್ಯದ ಆರ್ಡರ್ ನೀಡಿದೆ. ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗೆ ಟಕ್ಕರ್ ಕೊಡಲು ಬಿಎಸ್‌ಎನ್ಎಲ್ ಮುಂದಾಗಿದೆ.

ಭಾರತದ ಅತಿದೊಡ್ಡ ತಂತ್ರಜ್ಞಾನ ಸೇವಾ ಪೂರೈಕೆದಾರನಾಗಿರುವ ಟಿಸಿಎಸ್‌ಗೆ (TATA consultancy Service-TCS) ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ನಿಂದ ಬಹುದೊಡ್ಡ ಆರ್ಡರ್ ಲಭ್ಯವಾಗಿದೆ. ತಮಗೆ ಬಿಎಸ್‌ಎನ್‌ಎಲ್‌ನಿಂದ ಆರ್ಡರ್ ಸಿಕ್ಕಿರುವ ಮಾಹಿತಿಯನ್ನು ಶೇರು ಮಾರುಕಟ್ಟೆಗೆ ಟಿಸಿಎಸ್ ತಿಳಿಸಿದೆ. 4G ನೆಟ್‌ವರ್ಕ್‌ಗೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿಗಾಗಿ ಬಿಎಸ್‌ಎನ್ಎಲ್ ಈ ಆರ್ಡರ್ ನೀಡಿದೆ ಎಂದು ಟಿಸಿಎಸ್ ಮಾಹಿತಿ ನೀಡಿದೆ.
ಸ್ಟಾಕ್ ಎಕ್ಸ್‌ಚೇಂಜ್‌ಗೆ ಟಿಸಿಎಸ್ ನೀಡಿರುವ ಮಾಹಿತಿ ಪ್ರಕಾರ, ಈ ಆದೇಶದಡಿಯಲ್ಲಿ ದೇಶದ 18,685 ಸ್ಥಳಗಳಲ್ಲಿ 4G ಮೊಬೈಲ್ ನೆಟ್‌ವರ್ಕ್ ಯೋಜನೆಗೆ ಸಂಬಂಧಿಸಿದ ಇಂಜಿನಿಯರಿಂಗ್, ಇನ್‌ಸ್ಟಾಲೇಷನ್, ಟವರ್ ಅಳವಡಿಕೆ, ಪರಿಶೀಲನೆ, ಕಮಿಷನಿಂಗ್ ಮತ್ತು ವಾರ್ಷಿಕ ನಿರ್ವಹಣೆಗಾಗಿ ಟಿಸಿಎಸ್ ದೊಡ್ಡ ಮೊತ್ತದ ಆರ್ಡರ್ ಪಡೆದುಕೊಂಡಿದೆ. ಹಾಗಾದ್ರೆ ಬಿಎಸ್‌ಎನ್ಎಲ್ ನೀಡುತ್ತಿರುವ ಆರ್ಡರ್ ಮೊತ್ತ ಎಷ್ಟು ಎಂಬುದನ್ನು ನೋಡೋಣ ಬನ್ನಿ.
2,900 ಕೋಟಿ ರೂಪಾಯಿ ಆರ್ಡರ್
ಬಿಎಸ್‌ಎನ್ಎಲ್ ಟಿಸಿಎಸ್‌ಗಗೆ 2,900 ಕೋಟಿ ರೂಪಾಯಿ ಆರ್ಡರ್ ನೀಡಿದೆ. ಈ ಆರ್ಡರ್ ಮೂಲಕ ಬಿಎಸ್‌ಎನ್‌ಎಲ್ ತನ್ನ 4G ಮೊಬೈಲ್ ನೆಟ್‌ವರ್ಕ್ ರೋಲ್‌ಔಟ್ ಸಂಬಂಧ ಕ್ಷಿಪ್ರವಾಗಿ ಕೆಲಸ ಮಾಡುತ್ತಿರೋದು ಕಂಡು ಬರುತ್ತಿದೆ. 4G ನೆಟ್‌ವರ್ಕ್ ಕಾರ್ಯಗತಗೊಳಿಸುವಿಕೆಯಲ್ಲಿ TCS ಪ್ರಮುಖ ಪಾತ್ರ ವಹಿಸಲಿದೆ. ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗೆ ಟಕ್ಕರ್ ಕೊಡಲು ಬಿಎಸ್‌ಎನ್ಎಲ್ ಮುಂದಾಗಿದೆ.
APO ನಲ್ಲಿ ಉಲ್ಲೇಖಿಸಲಾದ ಮಾಹಿತಿಗಳ ಪ್ರಕಾರ, ಈ ಒಪ್ಪಂದ ಕೆಲವು ಷರತ್ತು ಮತ್ತು ದಾಖಲೆಗಳ ಒಡಂಬಡಿಕೆಯನ್ನು ಅವಲಂಬಿಸಿದೆ. ಮುಂದಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ಈ ಆರ್ಡರ್ ಕುರಿತು ಸುದೀರ್ಘವಾದ ಮಾಹಿತಿಯನ್ನು ನೀಡಲಿದೆ ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ, ಟಿಸಿಎಸ್‌ಗೆ 2,900 ಕೋಟಿ ರೂಪಾಯಿ ಆರ್ಡರ್ ಸಿಕ್ಕಿರೋದು ದೃಢವಾಗಿದೆ.
ಈ ಮೊದಲಿನಂದಲೂ ಬಿಎಸ್ಎನ್ಎಲ್ ಜೊತೆಯಲ್ಲಿ ಟಿಸಿಎಸ್ ಕೆಲಸ ಮಾಡಿಕೊಂಡು ಬರುತ್ತಿದೆ. ಅದರ ಮುಂದುವರಿದ ಭಾಗ ಇದಾಗಿದೆ. ಶೀಘ್ರದಲ್ಲಿಯೇ ಬಿಎಸ್ಎನ್‌ಎಲ್ ತನ್ನ 4ಜಿ ನೆಟ್‌ವರ್ಕ್‌ಗೆ ಚಾಲನೆ ನೀಡುವ ಸಾಧ್ಯತೆಗಳಿವೆ. ಟಿಸಿಎಸ್ ಘೋಷಣೆಯ ನಂತರ ಟಾಟಾ ಗ್ರೂಪ್‌ನ ಮತ್ತೊಂದು ಕಂಪನಿಯಾಗಿರುವ ತೇಜಸ್ ನೆಟ್‌ವರ್ಕ್ ಮಹತ್ವದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರ ಮಾಹಿತಿಯನ್ನು ಶೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.
₹1,525.53 ಕೋಟಿ ಮೌಲ್ಯದ ಆರ್ಡರ್
ಬಿಎಸ್‌ಎನ್‌ಎಲ್‌ನ 4 ಜಿ ಯೋಜನೆಗೆ ಸರಕು ಮತ್ತು ಸೇವೆಗಳ ಪೂರೈಕೆಗಾಗಿ ತಮಗೆ ಟಿಸಿಎಸ್‌ನಿಂದ ಆರ್ಡರ್ ದೊರಕಿದೆ ಎಂದು ತೇಜಸ್ ನೆಟ್‌ವರ್ಕ್ ಹೇಳಿದೆ. ತೇಜಸ್‌ನಿಂದ ಟಿಸಿಎಸ್‌ಗೆ ರೇಡಿಯೋ ಆಕ್ಸೆಸ್ ನೆಟ್‌ವರ್ಕ್ (RAN) ಮತ್ತು ಸಂಬಂಧಿತ ಸಲಕರಣೆಗಳ ಪೂರೈಕೆಯ ನಿರೀಕ್ಷಿತ ಮೌಲ್ಯವು ತೆರಿಗೆ ಹೊರತುಪಡಿಸಿ ಸುಮಾರು ₹1,525.53 ಕೋಟಿಗಳಷ್ಟಿದೆ. ಈ ಒಪ್ಪಂದದ ಕುರಿತು ಮುಂದಿನ ದಿನಗಳಲ್ಲಿ ಟಿಸಿಎಸ್ ಮಾಹಿತಿ ನೀಡಲಿದೆ ಎಂದು ತೇಜಸ್ ನೆಟ್‌ವರ್ಕ್ ತಿಳಿಸಿದೆ.
ಬಿಎಸ್‌ಎನ್‌ಎಲ್ ತನ್ನ 4ಜಿ ನೆಟ್‌ವರ್ಕ್ ದೇಶಾದ್ಯಂತ ವಿಸ್ತರಣೆಗಾಗಿ ಟಿಸಿಎಸ್ ನೇತೃತ್ವದ ಒಕ್ಕೂಟಕ್ಕೆ ₹15,000 ಕೋಟಿಗೂ ಹೆಚ್ಚಿನ ಮುಂಗಡ ಖರೀದಿ ಆದೇಶ ನೀಡಿದೆ. ಈ ಆದೇಶದ ಭಾಗವಾಗಿ ತೇಜಸ್ ನೆಟ್‌ವರ್ಕ್ಸ್ ಲಿಮಿಟೆಡ್ ಮತ್ತು ಐಟಿಐ ಲಿಮಿಟೆಡ್ APO ಪಡೆದುಕೊಂಡಿವೆ. ಈ ಆರ್ಡರ್ ಸಿಕ್ಕ ಬಳಿಕ ತೇಜಸ್ ನೆಟ್‌ವರ್ಕ್ ಷೇರುಗಳ ಮೌಲ್ಯ ಶೇ.2.8ರಷ್ಟು ಏರಿಕೆಯಾಗಿದೆ.