Asianet Suvarna News Asianet Suvarna News

ಶಿವಮೊಗ್ಗ: ಬಿಎಸ್‌ವೈ ತವರೂರಲ್ಲಿ ಸಂಭ್ರಮವೋ.. ಸಂಭ್ರಮ..!

ಬಿ. ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸ್ತಿದ್ದಂತೆ ಅತ್ತ ಬಿಎಸ್‌ವೈ ತವರೂರು ಶಿವಮೊಗ್ಗದಲ್ಲಿ ಸಂಭ್ರಮ ಮನೆ ಮಾಡಿತ್ತು. ತುಂತುರು ಮಳೆಯ ನಡುವೆಯೂ ಸಂಭ್ರಮವನ್ನಾಚರಿಸಿದ ಕಾರ್ಯಕರ್ತರು ಬಿಎಸ್‌ವೈ ಪರ ಘೋಷಣೆ ಕೂಗಿದ್ದಾರೆ. ಶಿಕಾರಿಪುರದಲ್ಲಿ ಕಾರ್ಯಕರ್ತರ ಮೆರವಣಿಗೆ, ಸಾಗರ, ಸೊರಬ, ತೀರ್ಥಹಳ್ಳಿಯಲ್ಲೂ ಸಂಭ್ರಮಾಚರಣೆ ನಡೆದಿದೆ.

BS Yeddyurappa takes oath as CM Celebrations In Shivamogga
Author
Bangalore, First Published Jul 27, 2019, 9:13 AM IST
  • Facebook
  • Twitter
  • Whatsapp

ಶಿವಮೊಗ್ಗ(ಜು.27): ಅತ್ತ ಬೆಂಗಳೂರಿನಲ್ಲಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇತ್ತ ಜಿಲ್ಲೆಯಲ್ಲಿ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ತುಂತುರು ಮಳೆಯ ನಡುವೆಯೂ ಜನ ಅಲ್ಲಲ್ಲಿ ಸಂಭ್ರಮಾಚರಣೆ ನಡೆಸಿದರು.

ಜಿಲ್ಲೆಯ ನಾಲ್ಕು ಮಂದಿ ಇದುವರೆಗೆ ಮುಖ್ಯಮಂತ್ರಿಯಾಗಿದ್ದು, ಯಡಿಯೂರಪ್ಪ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ದಾಖಲೆ ಮಾಡಿದ್ದು ಕೂಡ ಜಿಲ್ಲೆಯ ಜನರಲ್ಲಿನ ಸಂಭ್ರಮಕ್ಕೆ ಕಾರಣವಾಗಿತ್ತು. ಈ ಸಂಭ್ರಮಕ್ಕೆ ಯಡಿಯೂರಪ್ಪ ಅವರ ಅಭಿವೃದ್ಧಿಯೇ ಪ್ರಮುಖ ಕಾರಣವಾಗಿದೆಯಾದರೂ, ಪ್ರಧಾನಿ ಮೋದಿ ಮೇನಿಯಾದಿಂದ ಇನ್ನೂ ಹೊರ ಬಾರದ ಜನರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿರುವುದು ಅದರ ಮುಂದುವರಿದ ಭಾಗವೆಂಬಂತೆ ಕಾಣುತ್ತಿದೆ.

ಜಿಲ್ಲೆಯಲ್ಲಿ ಬಿಜೆಪಿ ನಾಯಕರಿರಲಿಲ್ಲ:

ಜಿಲ್ಲೆಯಲ್ಲಿ ಬಿಜೆಪಿಯ ಹಿರಿಯ ನಾಯಕರು ಯಾರೂ ಇರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆ ನಿಚ್ಚಳವಾಗಿದ್ದರಿಂದ ಎಲ್ಲರೂ ಮೊದಲೇ ಬೆಂಗಳೂರಿಗೆ ತೆರಳಿದ್ದರು. ಎರಡು, ಮೂರನೇ ಹಂತದ ನಾಯಕರೂ ಇಲ್ಲಿ ಇಲ್ಲ. ಹೀಗಾಗಿ ಆಯಾ ವಾರ್ಡಿನ ಕೆಲವು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸಂಜೆ ಜಮಾವಣೆಗೊಂಡು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಶಿಕಾರಿಪುರದಲ್ಲಿ ಕಾರ್ಯಕರ್ತರು ಮೆರವಣಿಗೆ ಮೂಲಕ ಸಂಭ್ರಮಿಸಿದರು. ಸಾಗರ, ಸೊರಬ, ತೀರ್ಥಹಳ್ಳಿಗಳಲ್ಲಿಯೂ ಇದೇ ರೀತಿಯ ಸಂಭ್ರಮ ಇತ್ತು.

ಮತ್ತೊಮ್ಮೆ ಸಿಎಂ ಆದ್ರು ಯಡಿಯೂರಪ್ಪ, ಹೊಸ ಇನಿಂಗ್ಸ್ ಆರಂಭ

ಯಡಿಯೂರಪ್ಪನವರ ಹೊರತಾಗಿ ಹಿಂದಿನ ಮೂರು ಮಂದಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ವಿಶೇಷ ಅನುದಾನ ತಂದಿರಲಿಲ್ಲ. ಆದರೆ ಯಡಿಯೂರಪ್ಪನವರು ಇದಕ್ಕೆ ವ್ಯತಿರಿಕ್ತವಾಗಿ ತಮ್ಮ ತವರು ಜಿಲ್ಲೆಗೆ ಭಾರೀ ಪ್ರಮಾಣದ ಅನುದಾನ ತಂದರು. ಇದರ ಪರಿಣಾಮ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಇಡೀ ರಾಜ್ಯದ ಜನರ ಕಣ್ಣು ಕುಕ್ಕಿತ್ತು. ಆದರೆ ಜಿಲ್ಲೆಯ ಜನರು ಮಾತ್ರ ಈಗಲೂ ಆ ಅಭಿವೃದ್ಧಿ ಪರ್ವವನ್ನು ನೆನಪಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಸಂಭ್ರಮ ಮನೆ ಮಾಡಿದೆ.

ಯಾರೂ ಪೂರ್ಣಾವಧಿ ಮುಖ್ಯಮಂತ್ರಿಯಾಗಲಿಲ್ಲ:

ಜಿಲ್ಲೆಯಲ್ಲಿ ಇದುವರೆಗೆ ನಾಲ್ಕು ಮಂದಿ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಯಾರೂ ಕೂಡ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿಲ್ಲ ಎಂಬುದು ಕೂಡ ವಿಶೇಷ. ಕಡಿದಾಳ್‌ ಮಂಜಪ್ಪನವರು 1956 ಆಗಸ್ಟ್‌ 19 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಕೇವಲ 2 ತಿಂಗಳಲ್ಲಿ ಅಂದರೆ 1956 ರ ಅಕ್ಟೋಬರ್‌ 31 ರಂದು ರಾಜೀನಾಮೆ ನೀಡಿದರು. ಎಸ್‌. ಬಂಗಾರಪ್ಪನವರು 1990ರ ನವೆÜಂಬರ್‌ 17 ರಂದು ಅಧಿಕಾರ ಸ್ವೀಕರಿಸಿ, 1992ರ ನವೆಂಬರ್‌ 19ರಂದು ರಾಜೀನಾಮೆ ಸಲ್ಲಿಸಿದ್ದರು.

ಜೆ.ಎಚ್‌. ಪಟೇಲ್‌ ಅವರು 1996ರ ಮೇ 31ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, 1999ರ ನವೆಂಬರ್‌ 7ರಂದು ರಾಜೀನಾಮೆ ನೀಡಿದರು. ಬಿ.ಎಸ್‌. ಯಡಿಯೂರಪ್ಪ ಅವರು 2007ರ ನವಂಬರ್‌ 12 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಕೇವಲ 7 ದಿನಗಳಲ್ಲಿ ಅಂದರೆ 2007ರ ನವೆಂಬರ್‌ 19ರಂದು ಬಹುಮತ ಸಾಬೀತುಪಡಿಸಲಾಗದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪನವರು ಎರಡನೇ ಬಾರಿಗೆ 2008ರ ಮೇ 30 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, 2011ರ ಆ. 3 ರಂದು ರಾಜೀನಾಮೆ ಸಲ್ಲಿಸಿದರು. ಮೂರನೇ ಬಾರಿಗೆ 2018ರ ಮೇ 17 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, 2 ದಿನಗಳ ಬಳಿಕ ಅಂದರೆ 2018ರ ಮೇ 19ರಂದು ರಾಜೀನಾಮೆ ನೀಡಿದರು.

 

Follow Us:
Download App:
  • android
  • ios